ಶಾಸಕ ಭರತ್ ಶೆಟ್ಟಿಯನ್ನು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ ಮಾಜಿ ಶಾಸಕ ಮೊಯ್ದೀನ್ ಬಾವ
ಗೋಹತ್ಯೆ ವಿರೋಧಿಸುವ ಇವರು, ಕಪಿಲಾ ಗೋಶಾಲೆಯ ಎರಡು ಎಕರೆ ಸ್ಥಳವನ್ನು ಕೋಸ್ಟಲ್ ಗಾರ್ಡ್‌ಗೆ ನೀಡಿ ಶೆಡ್ ಒಡೆಯುವಾಗ ಗೋವುಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಕನಿಕರ ತೋರಿಲ್ಲ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ಶಾಸಕ ಭರತ್ ಶೆಟ್ಟಿ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರು, ಮಾರ್ಚ್ 14: ದೇವಸ್ಥಾನದ ಪ್ರಸಾದವನ್ನು ಕಾಲಡಿಗೆ ಹಾಕಿ ತುಳಿದಿರುವ ಶಾಸಕ ಭರತ್ ಶೆಟ್ಟಿ ಆರೋಪಕ್ಕೆ ನಾನು ಧರ್ಮಸ್ಥಳದಲ್ಲಿ ಹಾಗೂ ದರ್ಗಾದಲ್ಲಿ ಆಣೆಮಾಡಲು ಸಿದ್ಧ. ನಾನು ಬರುತ್ತೇನೆ ಅವರೂ ಬರಲಿ ಎಂದು ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲೆಸೆದಿದ್ದಾರೆ.
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೊಯಿದ್ದೀನ್ ಬಾವ, ನಾನು ದೇವಾಲಯಗಳಿಂದ ಈಗಲೂ ಪ್ರಸಾದ ಸ್ವೀಕರಿಸುತ್ತೇನೆ. ಇದಕ್ಕೆ ದಾಖಲೆಗಳಿವೆ. ನಾನು ನನ್ನ ಧರ್ಮದೊಂದಿಗೆ ಬೇರೆ ಧರ್ಮಗಳನ್ನು ಗೌರವಿಸುತ್ತೇನೆ. ನನ್ನ ಶಾಸಕ ಅವಧಿಯಲ್ಲಿ ದೇವಸ್ಥಾನ, ದೈವಸ್ಥಾನ, ಬಿಲ್ಲವ ಸಮುದಾಯ ಹಾಗೂ ಅಂಬೇಡ್ಕರ್ ಭವನಗಳಿಗೆ ಎಷ್ಟು ಅನುದಾನ ತಂದಿರುವುದಕ್ಕೆ ಆರ್‌ಟಿಐನಿಂದ ದಾಖಲೆ ತೆಗೆದುಕೊಂಡು ಪರಿಶೀಲಿಸಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕಾಟಿಪಳ್ಳದ ಶ್ರೀಗಣೇಶಪುರ ದೇವಸ್ಥಾನಕ್ಕೆ 58 ಕೋಟಿ ರೂಪಾಯಿ ಅನುದಾನ ತಾನು ತಂದಿದ್ದೆ. ಆ ಅನುದಾನವನ್ನು ಭರತ್ ಶೆಟ್ಟಿಯವರು ತನ್ನ ಅನುದಾನದಲ್ಲಿ 40ಕೋಟಿ ರೂಪಾಯಿಯನ್ನು ಬೇರೆ ವಾರ್ಡ್‌ಗಳ ವಿವಿಧ ಕಾಮಗಾರಿಗಳಿಗೆ ಹಂಚಿರುವ ದಾಖಲೆ ನನ್ನಲ್ಲಿದೆ. ಹಿಂದುತ್ವದ ಪರವಾಗಿ ಮಾತನಾಡುವ ಶಾಸಕರು ಹಿಂದುಗಳಿಗೆ ಎಷ್ಟು ಅನುದಾನ ತಂದಿದ್ದಾರೆಂದು ಪಟ್ಟಿ ಬಿಡುಗಡೆ ಮಾಡಲಿ ಎಂಸು ಸವಾಲು ಹಾಕಿದರು.
ಗೋಹತ್ಯೆ ವಿರೋಧಿಸುವ ಇವರು, ಕಪಿಲಾ ಗೋಶಾಲೆಯ ಎರಡು ಎಕರೆ ಸ್ಥಳವನ್ನು ಕೋಸ್ಟಲ್ ಗಾರ್ಡ್‌ಗೆ ನೀಡಿ ಶೆಡ್ ಒಡೆಯುವಾಗ ಗೋವುಗಳು ಮಳೆಯಲ್ಲಿ ನೆನೆಯುತ್ತಿದ್ದರೂ ಕನಿಕರ ತೋರಿಲ್ಲ. ಇವರು ವೈದ್ಯರಾಗಲು ಅನರ್ಹರು ಎಂದು ಮೊಯಿದ್ದೀನ್ ಬಾವ ಕಿಡಿಕಾರಿದ್ದಾರೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಪದೇಪದೇ ಬೆಂಕಿ ಅನಾಹುತ ಸಂಭವಿಸುತ್ತಿದ್ದು, ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಇಂದಿನವರೆಗೆ ಸ್ಥಳಕ್ಕೆ ಭೇಟಿ ನೀಡಿದೆ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮೂಲಕ ಪರಿಸರದ ಜನತೆಯ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮಾರ್ಚ್ 17ರಂದು ಸಂಜೆ 4ಕ್ಕೆ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದಾಗಿ ಮೊಯಿದ್ದೀನ್ ಬಾವ ತಿಳಿಸಿದ್ದಾರೆ.
ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ 2 ಬಾವಲಿಗಳು ಹಾರಾಡುತ್ತಿವೆ
ಭಾನುವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾವೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಬಹಿರಂಗ ಸಭೆಯಲ್ಲಿ ಮತನಾಡಿದ್ದ ಶಾಸಕ ಡಾ ಭರತ್ ಶೆಟ್ಟಿ, ರಾಜ್ಯದಲ್ಲಿ ಅಭಿವೃದ್ದಿಯ ಪರ್ವ ಆರಂಭವಾಗಿದೆ ದೇಶವೇ ತಿರುಗಿ ನೋಡುವಂತೆ ಕರ್ನಾಟಕ ಅಭಿವೃದಿ ಯಾಗಿದೆ. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿದ್ದಾಗ ಹಿಂದುಗಳ ಸರಣಿ ಕೊಲೆಗಳು ನಡೆದವು. ಈ ಕೊಲೆಗಳ ಹಿಂದಿರುವ ಪಿಎಫ್‌ಐ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿಎಫ್‌ಐ ಕೊಲೆಗಡುಕರನ್ನು ಜೈಲಿನಿಂದ ಬಿಡುಗಡೆ ಮಾಡಿತು. ಅವರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯಲಾಯಿತು. ಭಯೋತ್ಪಾದಕ ಸಂಘಟನೆಯಾದಂತ ಪಿಎಫ್‌ಐ ಬ್ಯಾನ್ ಮಾಡಿದ್ದು ಗುಂಡಿಗೆಯ ಬಿಜೆಪಿ ಸರ್ಕಾರ ಎಂದು ಹೇಳಿದ್ದರು.
ಅಲ್ಲದೇ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ 2 ಬಾವಲಿಗಳು ಹಾರಾಡುತ್ತಿವೆ. ಒಂದು ಬಾವ ಮತ್ತೊಂದು ಅಲಿ ಬಾವ-ಅಲಿ. ಚುನಾವಣೆ ಹತ್ತಿರ ಬಂದಾಗ ಹೊಸ ಹೊಸ ವೇಷ ಹಾಕಿ ಬಾವಲಿಗಳು ಬರುತ್ತಿವೆ. ಒಬ್ಬ ಹಣದ ಮೇಲೆ ರಾಜಕಾರಣ ಮತ್ತೊಬ್ಬ ಚೆಕ್ ಬೌನ್ಸ್‌ನಲ್ಲಿ ಹೆಸರು ಮಾಡಿದವ. ಟಿಕೆಟ್‌ಗೆ ಎರಡು ಬಾವಲಿಗಳು ಹೊಡೆದಾಡಿ ಕೊಳ್ಳುತ್ತಿವೆ. ಈ ಬಾವಲಿಗಳು ಎಷ್ಟೇ ಹಾರಾಡಲಿ ಹಿಂದೂಗಳ ಓಟ್ ಮಾರಾಟಕ್ಕೆ ಇಲ್ಲ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮೊಯಿದ್ದೀನ್ ಬಾವ ಮತ್ತು ಇನಾಯತ್ ಆಲಿ ವಿರುದ್ಧ ಶಾಸಕ ಡಾ. ಭರತ್ ಶಟ್ಟಿ ವ್ಯಂಗ್ಯವಾಡಿದ್ದರು.












Click it and Unblock the Notifications