ಬಿಜೆಪಿ ಸೇರಿದ ಜನಾರ್ದನ ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ!
ಮಂಗಳೂರು, ನವೆಂಬರ್ 12 : ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ನಿಕಟವರ್ತಿ ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅವರನ್ನು ಕೆಲವು ದಿನಗಳ ಹಿಂದೆ ಉಚ್ಛಾಟನೆ ಮಾಡಲಾಗಿತ್ತು.
ಮಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಹರಿಕೃಷ್ಣ ಬಂಟ್ವಾಳ ಪಕ್ಷಕ್ಕೆ ಸೇರ್ಪಡೆಗೊಂಡರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಾವುಟ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಕಳೆದ ನಾಲ್ಕು ದಶಕಗಳಿಂದ ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಅವರು ಗುರುತಿಸಿಕೊಂಡಿದ್ದರು.

ಹರಿಕೃಷ್ಣ ಬಂಟ್ವಾಳ ಕರಾವಳಿ ಜಿಲ್ಲೆಯಲ್ಲಿ ನಿರ್ಣಾಯಕ ಸಮುದಾಯವಾಗಿರುವ ಬಿಲ್ಲವ ಸಮುದಾಯಕ್ಕೆ ಸೇರಿದವರು. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಅವರು ಟಿಕೆಟ್ ವಂಚಿತರಾಗಿದ್ದರು. ಆದ್ದರಿಂದ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈ ಹಿನ್ನಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆದ್ದರಿಂದ, ಅವರು ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.











Click it and Unblock the Notifications