ಕಾಡಾನೆ ಸೆರೆ ವೇಳೆ ಅರಣ್ಯಾಧಿಕಾರಿಗಳ ಮೇಲೆ ಸ್ಥಳೀಯರಿಂದ ಕಲ್ಲು ತೂರಾಟ, ಏಳು ಮಂದಿ ಬಂಧನ
ಫೆಬ್ರವರಿ 20 ರಂದು ಕಡಬದ ಮೀನಾಡಿ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆದಿತ್ತು. ರಂಜಿತಾ (21) ಮತ್ತು ರಮೇಶ್ ರೈ (52 ) ಎಂಬುವವರು ಮೃತಪಟ್ಟಿದ್ದರು.
ದಕ್ಷಿಣ ಕನ್ನಡ, ಫೆಬ್ರವರಿ. 24: ಜಿಲ್ಲೆಯ ಕಡಬ ಗ್ರಾಮದಲ್ಲಿ ಇಬ್ಬರನ್ನು ಕೊಂದಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಈ ಪ್ರದೇಶದಲ್ಲಿ ಮಾನವ - ಪ್ರಾಣಿ ಸಂಘರ್ಷ ತಪ್ಪಿಸಲು ಇನ್ನೂ ಕೆಲವು ಆನೆಗಳನ್ನು ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಜೊತೆಗೆ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಗ್ರಾಮಸ್ಥರನ್ನು ಬಂಧಿಸಲಾಗಿದೆ.
ಆನೆ ಸೆರೆ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಉಪ ಸಂರಕ್ಷಣಾಧಿಕಾರಿ ದಿನೇಶ್ ಕುಮಾರ್, "ಇಬ್ಬರ ಜೀವವನ್ನು ಬಲಿತೆಗೆದುಕೊಂಡ ಆನೆಯನ್ನು ನಾವು ಯಶಸ್ವಿಯಾಗಿ ಸೆರೆ ಹಿಡಿದಿದ್ದೇವೆ" ಎಂದಿದ್ದಾರೆ. ಅರಣ್ಯ ಇಲಾಖೆಯ 3 ದಿನದ ಆಪರೇಷನ್ ಎಲಿಫೆಂಟ್ ಕಾರ್ಯಚರಣೆಯಲ್ಲಿ 5 ಸಾಕಾನೆಗಳು, ನುರಿತ ತಜ್ಞ ವೈದ್ಯರು, ಅರಣ್ಯ ಅಧಿಕಾರಿಗಳು, ಶಾರ್ಪ್ ಶೂಟರ್‌ಗಳು ಸಾಥ್ ನೀಡಿದ್ದರು.

ಫೆಬ್ರವರಿ 20 ರಂದು ಕಡಬದ ಮೀನಾಡಿ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆದಿತ್ತು. ರಂಜಿತಾ (21) ಮತ್ತು ರಮೇಶ್ ರೈ (52 ) ಎಂಬುವವರು ಮೃತಪಟ್ಟಿದ್ದರು. ಘಟನೆ ನಡೆದ ಒಂದು ದಿನದ ನಂತರ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಹಿಡಿಯಲು ಕಡಬ ಪ್ರದೇಶದಲ್ಲಿ 'ಆಪರೇಷನ್ ಎಲಿಫೆಂಟ್' ಆರಂಭಿಸಿದ್ದರು. ನಾಗರಹೊಳೆ ಮತ್ತು ದುಬಾರೆ ಶಿಬಿರದಿಂದ ಆಗಮಿಸಿದ ಇತರ 5 ಆನೆಗಳ ನೆರವಿನೊಂದಿಗೆ ಮಂಗಳವಾರ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಲಾಯಿತು. ಕಾಡಾನೆಯ ಚಲನವಲನ ಪತ್ತೆಗೆ ಡ್ರೋನ್ ಕ್ಯಾಮೆರಾಗಳನ್ನೂ ಬಳಸಲಾಗಿದೆ.
ಇನ್ನು, ಇದೇ ವೇಳೆ ಕಾಡಾನೆಗಳನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯಾಧಿಕಾರಿಗಳ ತಂಡ ಸೆರೆ ಹಿಡಿದು ಸಾಗಿಸುವಾಗ ಅರಣ್ಯಾಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟದಿಂದಾಗಿ ಎರಡು ಪೊಲೀಸ್ ಇಲಾಖೆಯ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ವಲಯ ಅರಣ್ಯಾಧಿಕಾರಿಯೊಬ್ಬರ ಬ್ರೀಝಾ ಕಾರುಗಳಿಗೆ ಹಾನಿ ಉಂಟಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications