ತುಳುನಾಡಿನ ನಾಗಬ್ರಹ್ಮ ಮಂಡಲದಲ್ಲಿ ಮಹತ್ವದ ಕ್ರಾಂತಿ: ಇತಿಹಾಸದಲ್ಲೇ ಮೊದಲ ಬಾರಿ ಬಿಲ್ಲವ ಪಾತ್ರಿಯಿಂದ ನಾಗಬ್ರಹ್ಮ ಮಂಡಲ
ಮಂಗಳೂರು, ಮಾರ್ಚ್ 10: ಪರಶುರಾಮ ಸೃಷ್ಟಿಯ ತುಳುನಾಡು ನಾಗಾರಾಧನೆಯಲ್ಲಿ ಬಹಳ ಪಾವಿತ್ರ್ಯತೆಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಹಲವು ನೆಲೆಗಳಲ್ಲಿ ನಾಗಾರಾಧನೆ ನಡೆಯುತ್ತಿದ್ದರೂ ಕರಾವಳಿ ನಾಗಾರಾಧನೆಯ ಮೂಲ ನೆಲ ಎಂದು ನಂಬಲಾಗಿದೆ. ಇಲ್ಲಿ ನಾಗನಿಗೆ ಸಂಬಂಧಿಸಿ ತನು ಎರೆಯುವುದು, ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ನಾಗದರ್ಶನ, ಆಶ್ಲೇಷಾ ಬಲಿ, ಢಕ್ಕೆಬಲಿ, ಬ್ರಹ್ಮಮಂಡಲ, ನಾಗಮಂಡಲ, ಕಾಡ್ಯನಾಟ ಮೊದಲಾದ ಸೇವೆಗಳು ನಡೆಯುತ್ತದೆ.
ಆದರೆ ಇವರಿಗೆ ವೈದಿಕರಿಂದ ನಡೆಯುತ್ತಿದ್ದ ನಾಗಬ್ರಹ್ಮಮಂಡಲ ಸೇವೆ ಇದೇ ಮೊದಲ ಬಾರಿಗೆ ಚೌಕಟ್ಟು ಮೀರಿ ಬಿಲ್ಲವ ಶಾಂತಿ ಪಾತ್ರಿಗಳಿಂದ ನಡೆದಿದೆ. ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರದಲ್ಲಿ ಕಾವೂರು ಶ್ರೀಮನೋಜ್ ಶಾಂತಿ ಹಾಗೂ ಬಳಗದವರಿಂದ ಅರ್ಧ ಮಂಡಲ ಅಂದರೆ ಚತುಶ್ಪವಿತ್ರ ನಾಗ ಬ್ರಹ್ಮಮಂಡಲ ಸೇವೆ ಸಂಭ್ರಮದಿಂದ ನಡೆದಿದೆ.

ಈ ನಾಗಬ್ರಹ್ಮ ಮಂಡಲೋತ್ಸವ ಐತಿಹಾಸಿಕ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದೆ. ಈ ಹಿನ್ನೆಲೆಯಲ್ಲಿ ನಾಗಮಂಡಲ ಸೇವೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ನಾಗಮಂಡಲ ಢಕ್ಕೆಬಲಿಯ ವಿಸ್ತೃತ ಹಾಗೂ ವೈಭವೀಕೃತ ರೂಪ. ನಾಗಮಂಡಲದ ಪ್ರಮಾಣಕ್ಕನುಗುಣವಾಗಿ ರಂಗದ ಅಳತೆಯಿರುತ್ತದೆ.
ನಾಗಮಂಡಲದಲ್ಲಿ ಪೂರ್ಣಮಂಡಲ, ಅರ್ಧಮಂಡಲ, ಕಾಲುಮಂಡಲ ಎಂಬ ಪ್ರಭೇದವಿದೆ. ಪೂರ್ಣ ಮಂಡಲದಲ್ಲಿ 16 ಪವಿತ್ರ ಗಂಟುಗಳು, 14ಹೆಡೆಯ ಸರ್ಪಾಕೃತಿ, ಅರ್ಧಮಂಡಲದಲ್ಲಿ 8 ಪವಿತ್ರಗಂಟುಗಳು, 7ಹೆಡೆಯ ಸರ್ಪಾಕೃತಿ, ಕಾಲು ಮಂಡಲದಲ್ಲಿ 4ಪವಿತ್ರ ಗಂಟುಗಳು 5 ಹೆಡೆಯ ಸರ್ಪಾಕೃತಿಯ ಮಂಡಲ ಬಿಡಿಸಲಾಗುತ್ತದೆ. ಕೆಂಪು, ಕಪ್ಪು, ಹಳದಿ, ಬಿಳಿ ಹಾಗೂ ಹಸಿರು ಪಂಚವರ್ಣದ ಹುಡಿಗಳಿಂದ ಮಂಡಲ ರಚನೆಯಿರುತ್ತದೆ.
ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ ಜರುಗಿದ ಬಳಿಕ ನಾಲಮಂಡಲ ಸೇವೆ ನಡೆಯುತ್ತದೆ. ನಾಗಪಾತ್ರಿ ಹಾಗೂ ನಾಗಕನ್ನಿಕೆ ಢಕ್ಕೆ ಬಲಿಯ ರೀತಿ ನರ್ತಿಸುತ್ತಾರೆ. 'ವೈದ್ಯ'ರ ತಂಡದವರೇ ಡಮರು ಮೇಳವನ್ನು ನಿರ್ವಹಿಸುತ್ತಾರೆ. ಇವರಲ್ಲಿ ಅರ್ಧನಾರಿ ವೇಷತೊಟ್ಟು ಕೈಯಲ್ಲಿ ಕಂಚಿನ ಢಕ್ಕೆ ಹಿಡಿದವನು ನಾಗಯಕ್ಷಿಯನ್ನೂ , ನಾಗಪಾತ್ರಿಯು ಪುರುಷನನ್ನೂ ಪ್ರತಿನಿಧಿಸುತ್ತಾರೆ. ಇವರು ನಾಗನೃತ್ಯದ ವಿವಿಧ ಭಂಗಿಯನ್ನು ಪ್ರದರ್ಶಿಸಿ ಕೊನೆಗೆ ತೋಳುಗಳನ್ನು ಹೆಣೆದುಕೊಂಡು ಪವಿತ್ರ ಗಂಟಿನ ಆಕಾರದಲ್ಲಿ ನರ್ತಿಸುತ್ತಾರೆ. ಇದು ಮಿಥುನಬಂಧದ ಪ್ರತೀಕ. ಆ ಬಳಿಕ ಗಂಟು ಬಿಡಿಸುವ ಚಲನೆಯೂ ಇದೆ.

ಈ ನಡುವೆ ನಾಗಪಾತ್ರಿ ಅಡಿಕೆ ಹೂವನ್ನು ಮುಖಕ್ಕೂ ಮೈಗೂ ಉಜ್ಜಿಕೊಂಡು ಉಗ್ರವಾಗಿ ಕಂಪಿಸಿ ಹಾವಿನ ರೀತಿಯಲ್ಲಿ ಬುಸುಗುಡುತ್ತಾ, ಹೆಡೆಯೆತ್ತಿ ಆಡುವಂತೆ, ನೆಲದಲ್ಲಿ ಹೊರಳಾಡುತ್ತಾನೆ. ಬೆಳ್ಳಂಬೆಳಗ್ಗೆ ನಾಗಮಂಡಲಸೇವೆ ಸಂಪೂರ್ಣಗೊಳ್ಳುತ್ತದೆ. ಒಟ್ಟಿನಲ್ಲಿ ಇದೊಂದು ಫಲಸಮೃದ್ಧಿಯ, ಸಂತಾನಪೇಕ್ಷೆಯ ಆಚರಣೆಯಾಗಿ ಗೋಚರವಾಗುತ್ತದೆ. ಜೊತೆಗೆ ಸರ್ಪದೋಷ, ದೃಷ್ಟಿದೋಷ, ಚರ್ಮವ್ಯಾಧಿ ನಿವಾರಣೆ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚೆಗೆ ನಾಗಮಂಡಲದ ಸಂಖ್ಯೆ ಹೆಚ್ಚುತ್ತಿದೆ.
120 ವರ್ಷಗಳ ಹಿಂದೆ ಬ್ರಹ್ಮಶ್ರೀ ನಾರಾಯಣ ಗುರುಗಳು 'ನಿಮ್ಮ ಶಿವನನ್ನು ನೀವೇ ಪೂಜೆ ಮಾಡಿ' ಎಂದು ಕರೆ ನೀಡಿ ಹೊಸಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಇದೀಗ ಬಿಲ್ಲವ ಸಮುದಾಯ 'ನಮ್ಮ ನಾಗನನ್ನು ನಾವೇ ಆರಾಧನೆ ಮಾಡುತ್ತೇವೆ' ಎಂದು ನಾಗಾರಾಧನೆಯ ಇತಿಹಾಸದಲ್ಲಿ ಹೊಸಭಾಷ್ಯವನ್ನು ಬರೆದಿದ್ದಾರೆ. ಅಲ್ಲದೆ ಬಿಲ್ಲವ ನಾಗಪಾತ್ರಿ ಮನೋಜ್ ಶಾಂತಿ ನಾಗಮಂಡಲದಲ್ಲಿಯೇ ವಿನೂತನ ಪರಂಪರೆಯೊಂದನ್ನು ಸೃಷ್ಟಿಸಿದ್ದಾರೆ.

ಬಿಲ್ಲವ ಸಮುದಾಯದ ನಾಗಪಾತ್ರಿ, ವೈದ್ಯರು, ತಂತ್ರಿ, ಶಾಂತಿಗಳಿಂದಲೇ ನಾಗಮಂಡಲ
ಕಂಕನಾಡಿ ಶ್ರೀ ಬ್ರಹ್ಮಬೈದ್ಯರ್ಕಳ ಗರಡಿ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದ ನಾಗಪಾತ್ರಿ, ವೈದ್ಯರು, ತಂತ್ರಿ, ಶಾಂತಿಗಳಿಂದಲೇ ನಾಗಮಂಡಲ ಸೇವೆ ನಡೆಯಿತು. ಈ ನಾಗಮಂಡಲದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದವರು ಬಿಲ್ಲವಪಾತ್ರಿ ಕಾವೂರು ಶ್ರೀ ಮನೋಜ್ ಶಾಂತಿಯವರು. ಇವರೇ ನಾಗಪಾತ್ರಿಯಾಗಿದ್ದರು.
ಹಿಂದೆ ಬೈದ್ಯ ಕುಲದವರು ನಾಗಾರಾಧನೆ ಮಾಡುತ್ತಿದ್ದರೂ, ಕ್ರಮೇಣ ನಿರ್ದಿಷ್ಟ ಸಮುದಾಯದವರು ನಾಗಾರಾಧನೆಯನ್ನು ನಿರ್ವಹಿಸಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಇದೀಗ ಈ ಪರಂಪರೆಯನ್ನು ಮುರಿದು ಮನೋಜ್ ಶಾಂತಿಯವರು ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದ್ದಾರೆ.
ಇವರ ತಾತ ನಾಗಾರಾಧನೆ ಸೇರಿದಂತೆ ವೈದಿಕ ಪೂಜಾ ವಿಧಾನವನ್ನೂ ಅರಿತಿದ್ದರು. ಈ ವಿಚಾರ ಮನೋಜ್ ಶಾಂತಿಯವರನ್ನು ಆಕರ್ಷಿಸಿತ್ತು. ಆದ್ದರಿಂದ ಅವರು ಕಂಕನಾಡಿ ಗರಡಿ ಕ್ಷೇತ್ರದ ಗಂಗಾಧರ ಶಾಂತಿಯವರಿಂದ ವೈದಿಕ ಪೂಜಾ ಕೈಂಕರ್ಯವನ್ನು ಕರಗತ ಮಾಡಿಕೊಂಡಿದ್ದರು.
ಜೊತೆಗೆ ಜೋತಿಷ್ಯ ಸೇರಿದಂತೆ ನಾಗದರ್ಶನ, ಆಶ್ಲೇಷಾ ಪೂಜೆಯನ್ನು ನೆರವೇರಿಸುತ್ತಿದ್ದರು. ಆದರೆ ನಾಗಮಂಡಲ ಮಾಡಬೇಕೆಂಬ ಹಂಬಲ ಕಳೆದ 15ವರ್ಷಗಳಿಂದ ಅವರನ್ನು ಕಾಡುತ್ತಿತ್ತು. ಅದಕ್ಕಾಗಿ ಬಹಳಷ್ಟು ನಾಗಮಂಡಲಗಳನ್ನು ನೋಡಿ, ಹಲವಾರು ವಿದ್ವಾಂಸರುಗಳು ನಾಗಾರಾಧನೆ, ನಾಗಮಂಡಲಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದಿ ಆ ಕಲೆಯನ್ನು ಸಿದ್ಧಿಸಿಕೊಂಡಿದ್ದರು. ಆದರೆ ನಾಗಮಂಡಲ ಮಾಡುವ ಸದಾವಕಾಶ ಕೂಡಿ ಬಂದಿರಲಿಲ್ಲ.
ಕಂಕನಾಡಿ ಗರಡಿಯ 150ರ ಸಂಭ್ರಮದ ಸಂದರ್ಭ ಅಧ್ಯಕ್ಷ ಚಿತ್ತರಂಜನ್ ಅವರು ನಾಗಬ್ರಹ್ಮ ಮಂಡಲ ಮಾಡಬೇಕೆಂದು ಮನೋಜ್ ಶಾಂತಿಯವರ ಮುಂದೆ ಪ್ರಸ್ತಾವವಿಟ್ಟಿದ್ದಾರೆ. ಬ್ರಹ್ಮಬೈದ್ಯರ್ಕಳರ ಮೇಲೆ ಭಾರ ಹಾಕಿ ಅವರ ಪ್ರಸ್ತಾವಕ್ಕೆ ಅಸ್ತು ಅಂದಿದ್ದಾರೆ. ಸಂಪೂರ್ಣ ನಾಗಬ್ರಹ್ಮ ಮಂಡಲ ಕಾರ್ಯವನ್ನು ಸುಸೂತ್ರವಾಗಿ ಮಾಡಿ ಪೂರೈಸಿದ್ದಾರೆ. ಅಲ್ಲದೇ ನಾಗಮಂಡಲದಲ್ಲಿ ವೈದ್ಯರಾಗಿ, ಅರ್ಧನಾರಿಯಾಗಿ ನಿರ್ವಹಿಸಿದ್ದ ಅಜಿತ್ ಪೂಜಾರಿ ಹಾಗೂ ಅಭಿಜಿತ್ ಪೂಜಾರಿ ಎಂಬ ಸಹೋದರರನ್ನು ಇವರೇ ತಯಾರು ಮಾಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವ ಸಂದೇಶವು ಈ ನಾಗಮಂಡಲದ ರೂಪದಲ್ಲಿ ಸಾಕಾರಗೊಂಡಿದಡ ಎಂಬ ಮಾತು ಈಗ ತುಳುನಾಡಿನಲ್ಲಿ ಕೇಳಿ ಬರುತ್ತಿದೆ.












Click it and Unblock the Notifications