ಬಂಟ್ವಾಳದಲ್ಲಿ ಜೂನ್ 2ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ
ಮಂಗಳೂರು, ಮೇ 27: ಕಲ್ಲಡ್ಕದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂದು ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ, ಬಂಟ್ವಾಳ ತಾಲೂಕಿನಾದ್ಯಂತ ಮೇ 27ರ (ಶನಿವಾರ) ಬೆಳಗ್ಗೆ 9 ಗಂಟೆಯಿಂದ ಜೂನ್ 2ರ ವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ಉಪವಿಭಾಗ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಯುವಕರಿಬ್ಬರ ಮೇಲೆ ಚೂರಿ ಇರಿತ ಪ್ರಕರಣ ನಡೆದ ಸಂಬಂಧ ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ 'ಕಲ್ಲಡ್ಕ ಬಂದ್' ಸಂದೇಶದ ಪರಿಣಾಮವಾಗಿ ಶನಿವಾರ ಕಲ್ಲಡ್ಕ ಭಾಗಶಃ ಬಂದ್ ಆಗಿತ್ತು.

ಕಲ್ಲಡ್ಕ ಪೇಟೆ ಮತ್ತು ಸುತ್ತಮುತ್ತ ಅಂಗಡಿಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಈ ಮಧ್ಯೆ ಬಂದ್ ಗೆ ಪರ, ವಿರೋಧ ವ್ಯಕ್ತವಾಗಿದ್ದರಿಂದ ಕಲ್ಲಡ್ಕದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡದಂಥ ಸನ್ನಿವೇಶ ಇದೆ.
ಕಲ್ಲಡ್ಕದ ಜುಮಾ ಮಸೀದಿಯಲ್ಲಿ ನಮಾಜ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿ ಸಹಿತ ಇಬ್ಬರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಶುಕ್ರವಾರ ಮಧ್ಯಾಹ್ನ ಚೂರಿಯಿಂದ ಹಲ್ಲೆ ನಡೆಸಿ, ಪರಾರಿಯಾಗಿತ್ತು.
ಈ ಕೃತ್ಯವನ್ನು ಖಂಡಿಸಿ ಹಾಗೂ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ 'ಕಲ್ಲಡ್ಕ ನಾಗರಿಕರು' ಎಂಬ ಹೆಸರಿನಲ್ಲಿ ಕಲ್ಲಡ್ಕ ಬಂದ್ ಗೆ ಕರೆ ನೀಡಿದ್ದ ಸಂದೇಶವೊಂದು ಶುಕ್ರವಾರ ರಾತ್ರಿ ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಕಾರಣಕ್ಕೆ ಶನಿವಾರ ಕಲ್ಲಡ್ಕ ಮೇಲಿನಪೇಟೆ, ಕೆಳಗಿನಪೇಟೆ ಹಾಗೂ ಸುತ್ತಮುತ್ತಲು ಅಂಗಡಿ ತೆರೆಯುವ ಧೈರ್ಯವನ್ನು ಮಾಲೀಕರು ತೋರಲಿಲ್ಲ.
ಬೆರಳೆಣಿಕೆಯಷ್ಟು ಅಂಗಡಿಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಕಲ್ಲಡ್ಕದಲ್ಲಿ ಜನ ಸಂಚಾರ ವಿರಳವಾಗಿತ್ತು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಆದರೆ ಕಲ್ಲಡ್ಕ-ವಿಟ್ಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು.
ಆಟೋರಿಕ್ಷಾಗಳ ಸಹಿತ ಇತರ ಬಾಡಿಗೆ ವಾಹನಗಳು ಕೂಡ ಬೆಳಗ್ಗೆಯಿಂದ ರಸ್ತೆಗಿಳಿಯಲಿಲ್ಲ. ಇನ್ನು ಸ್ಥಳಕ್ಕೆ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೂ ಗುಂಪೊಂದು ಕಲ್ಲು ತೂರಾಟಕ್ಕೆ ಯತ್ನಿಸಿದ ಘಟನೆ ಕೂಡ ನಡೆಯಿತು.












Click it and Unblock the Notifications