ಧರ್ಮಸ್ಥಳ ಪಿಎಸ್‌ಐ ವಿರುದ್ಧ ಎಫ್‌ಐಆರ್
ದಕ್ಷಿಣ ಕನ್ನಡ, ಮಾರ್ಚ್ 26: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಮನಬಂದಂತೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಆರೋಪದ ಮೇಲೆ ಧರ್ಮಸ್ಥಳ ಠಾಣೆಯ ಪಿಎಸ್‌ಐ ಪಿ.ಕಿಶೋರ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
202ರಲ್ಲಿ ನೆಲಮಂಗಲ ಮೂಲದ ಪಿಎಸ್‌ಐ ಕಿಶೋರ್ ಜೊತೆಗೆ ನಾಗರಬಾವಿ ನಿವಾಸಿ ಬಿಬಿಎ ಪದವೀಧರೆಯ ವಿವಾಹವಾಗಿತ್ತು. ವಧುವಿನ ಮನೆಯವರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಮದುವೆಯ ಸಂದರ್ಭದಲ್ಲಿ ವರನಿಗೆ ಬ್ರೇಸ್‌ಲೆಟ್, ಉಂಗುರ, ಚೈನು, ಬೆಲೆಬಾಳುವ ಸೂಟುಬೂಟು, ಮದುವೆ ಖರ್ಚಿಗೆ 10 ಲಕ್ಷ ರೂಪಾಯಿ, 23.60 ಲಕ್ಷ ರೂಪಾಯಿ ಕಾರು ಎಲ್ಲವನ್ನೂ ಪಡೆದಿದ್ದರು. ಮದುವೆಯಾದ ಮೊದಲು ಎಲ್ಲವೂ ಚೆನ್ನಾಗಿಯೇ ಇದ್ದು, ಬಳಿಕ ಸಂತ್ರಸ್ತಗೆ ವರದಕ್ಷಿಣೆ ಕಿರುಕುಳ ಆರಂಭವಾಗಿದೆ.

ಮದುವೆಯ ಸಮಯದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ ಕಿಶೋರ್ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ವರ್ಗಾವಣೆ ಪಡೆದುಕೊಂಡರು. ಹೀಗಾಗಿ ಧರ್ಮಸ್ಥಳದಲ್ಲಿ ಮನೆ ಮಾಡಲು ಮತ್ತು ಅಲ್ಲಿನ ಮನೆಗೆ ಪೀಠೋಪಕರಣಗಳನ್ನು ತೆಗೆದುಕೊಳ್ಳಲು ನಮ್ಮ ಮನೆಯಿಂದ ಹಣ ತರುವಂತೆ ಒತ್ತಾಯಿಸಿದ್ದಾರೆ. ಆಗ ನಾನು ವಿರೋಧಿಸಿದಾಗ ಕೋಪಗೊಂಡ ಅವರು ಪ್ರತಿ ದಿನವೂ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದರು. ತವರು ಮನೆಯಿಂದ ಪ್ರತಿ ತಿಂಗಳು 50 ಸಾವಿರ ರೂಪಾಯಿ ತರುವಂತೆ ಒತ್ತಾಯಿಸಿದರು. ಅವರು ಮಾತ್ರವಲ್ಲದೇ ಅವರ ತಂದೆ-ತಾಯಿ ತಮ್ಮ ಕೂಡ ನನಗೆ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಎಲ್ಲರೂ ಸೇರಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಪಿಎಸ್‌ಐ ಕಿಶೋರ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಇತ್ತೀಚಿಗೆ ಇದೇ ತಿಂಗಳ 21ನೇ ತಾರೀಕಿನಂದು ಕ್ಷುಲ್ಲಕ ವಿಚಾರಕ್ಕೆ ಗಲಾಟೆ ತೆಗೆದು ಬೆಲ್ಟ್ ಹಾಗೂ ಲಟ್ಟಣೆಗೆಯಿಂದ ಮನಸೋ ಇಚ್ಚೆಯಂತೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಈ ವೇಳೆ ಯಾರೋ ನಮ್ಮ ತವರುಮನೆ ಪರಿಚಯಸ್ಥರು ಈ ವಿಚಾರವನ್ನು ಅವರಿಗೆ ತಿಳಿಸಿದ್ದಾರೆ. ಕೂಡಲೇ ನನ್ನ ಪೋಷಕರು ಬಂದು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಹಲ್ಲೆಯಿಂದ ನಾನು ತೀವ್ರ ಅಸ್ವಸ್ಥಳಾದ ಕಾರಣ ನನ್ನನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು.
ನನ್ನ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡಿ, ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ದಾಖಲೆ ಹಾಗೂ ವೈದ್ಯಕೀಯ ವರದಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ತ ಬೆಂಗಳೂರಿನಲ್ಲಿ ದೂರು ದಾಖಲಾಗುತ್ತಿದ್ದಂತೆ ಪಿಎಸ್‌ಐ ಕಿಶೋರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿಕೊಂಡು ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications