ಕದ್ರಿ ಜೋಗಿ ಮಠದಲ್ಲಿ ಗುರು-ಶಿಷ್ಯರ ಕಾದಾಟ: ಮೂಲ ವಿಗ್ರಹ ಮಾರಾಟಕ್ಕೆ ಸಂಚು..?
ಮಂಗಳೂರು, ಆಗಸ್ಟ್ 27: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸಂಬಂಧವಿರುವ ಕದ್ರಿ ಜೋಗಿ ಮಠದ ಬ್ರಹ್ಮಕಲಶೋತ್ಸವದ ಬಳಿಕ ಮಠಾಧೀಶರು ಹಾಗೂ ಭಕ್ತರ ನಡುವಿನ ಜಟಾಪಟಿ ತಾರಕಕ್ಕೇರಿದೆ.
ಬ್ರಹ್ಮಕಲಶೋತ್ಸವದ ವೇಳೆ ಶಿಷ್ಯರಿಗೆ ತಿಳಿಯದಂತೆ ಮಠಾಧೀಶರು ಜೋಗಿ ಮಠದ ಕಾಲಭೈರವ ದೇವರ ಮೂಲ ಮೂರ್ತಿಯನ್ನು ಹೊರಗಿಟ್ಟು ನೂತನ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಿದ್ದಾರೆ. ಇದು ಜೋಗಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಮಂಗಳೂರು ನಗರದಲ್ಲಿಯೇ ಏಕೈಕ ಕಾಲಭೈರವ ದೇವರ ದೇವಾಲಯ ಕದ್ರಿಯಲ್ಲಿದೆ. ಇಲ್ಲಿನ ಕಾಲಭೈರವ ದೇವರ ಮೂರ್ತಿ ಬಹಳ ಕಾರಣಿಕವುಳ್ಳದ್ದು ಎಂಬುದು ಭಕ್ತರ ನಂಬಿಕೆ. ಆದರೆ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ವೇಳೆ ಮಠಾಧೀಶ ರಾಜಯೋಗಿ ಶ್ರೀ ನಿರ್ಮಲನಾಥ ಮಹಾರಾಜರು ತಮ್ಮ ರಾಜಸ್ತಾನಿ ಭಕ್ತರೊಂದಿಗೆ ಸೇರಿಕೊಂಡು, ಜೋಗಿ ಸಮುದಾಯವನ್ನು ಕಡೆಗಣಿಸಿ ಸ್ವಇಚ್ಛೆಯಿಂದ ಹಳೆಯ ಮೂರ್ತಿಯನ್ನು ಬದಲಾಯಿಸಿದ್ದಾರೆ.
ಆ ಜಾಗಕ್ಕೆ ರಾಜಸ್ತಾನಿ ಭಕ್ತರು ನೀಡಿರುವ ನೂತನ ಗ್ರಾನೈಟ್ ಕಾಲಭೈರವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಹಳೆಯ ಶಿಲಾಮಯ ಕಾಲಭೈರವನ ವಿಗ್ರಹವನ್ನು 70 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇದು ಶಿಷ್ಯರಿಗೆ ತಿಳಿದು ಜಿಲ್ಲಾಧಿಕಾರಿ, ಪುರಾತತ್ತ್ವ ಇಲಾಖೆಗಳಿಗೆ ದೂರು ನೀಡಿ ಮೂಲ ಮೂರ್ತಿಯನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ.
ಆದ್ದರಿಂದ ಕದ್ರಿ ಜೋಗಿ ಮಠದ ಹಿತರಕ್ಷಣಾ ಸಮಿತಿಯು ಪುರಾತತ್ತ್ವ ಇಲಾಖೆ ಮೂಲಕ ಕಾಲಭೈರವನ ಮೂಲ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ. ಅಲ್ಲದೆ ತನಿಖೆಗೆ ಆಗ್ರಹವನ್ನೂ ಮಾಡಲಾಗಿದೆ. ಆದರೆ ಮಠಾಧೀಶರು ನಮ್ಮ ಮನವಿಗೆ ಸೊಪ್ಪು ಹಾಕದೆ, ಡಿಸಿಯವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇದೀಗ ಮಠದ ಶಿಷ್ಯ ಪರಂಪರೆ ಮಠಾಧೀಶರ ವಿರುದ್ಧವೇ ಸಿಡಿದೆದ್ದಿದ್ದು, ಆಗಸ್ಟ್ 27ರಂದು ಸಮಸ್ತ ಜೋಗಿ ಸಮುದಾಯು ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ ಎಂದು ತಿಳಿಸಿದ್ದಾರೆ.

ಸದ್ಯದ ಮಹಾರಾಜರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕದ್ರಿ ಜೋಗಿ ಮಠದ ಜೀರ್ಣೋದ್ಧಾರ ಮತ್ತು ಕಾರ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಹರಿನಾಥ ಎಂ, 'ಜೋಗಿ ಸಮಾಜದ ಜನರ ಭಾವನೆಗಳಿಗೆ ಮಹಾರಾಜರು ಧಕ್ಕೆ ತಂದಿದ್ದಾರೆ. ಕೇವಲ ಹಣದ ಉದ್ದೇಶ ಮಾತ್ರ ಮಠದಲ್ಲಿದೆ. ಮಹಾರಾಜರು ಭಕ್ತರ ಭಾವನೆಗಳಿಗೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಮೂಲ ವಿಗ್ರಹವನ್ನು ಮತ್ತೆ ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಮಠದ ಕಾರ್ಯಕ್ರಮದಲ್ಲಿ ಸಮಾಜ ಭಾಗವಹಿಸುವುದಿಲ್ಲ. ತಮ್ಮ ಹಕ್ಕನ್ನು ಜೋಗಿ ಸಮಾಜ ಕೇಳಲಿದೆ. ಜೋಗಿ ಸಮಾಜದ ಸರ್ವರೂ ಉಪವಾಸ ಸತ್ಯಾಗ್ರಹ ಮಾಡಿ ಬೇಡಿಕೆಗಳನ್ನು ಆಗ್ರಹಿಸಲಿದ್ದೇವೆ' ಎಂದು ಹೇಳಿದರು.












Click it and Unblock the Notifications