• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸನ್ಮಾನಕ್ಕೆ ಅಭಿಮಾನಿಗಳ ತಳ್ಳಾಟ; ಗಲಿಬಿಲಿಯಾಗಿ ಓಟಕ್ಕಿತ್ತ ಹಾಜಬ್ಬ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 9: ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಬ್ಬ ಮಂಗಳೂರಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿಯವರಿಂದ ಪದ್ಮಶ್ರೀ ಪುರಸ್ಕೃತಗೊಂಡು ಮಂಗಳವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಅಭಿನಂದಿಸಲು ಅವರ ಅಭಿಮಾನಿಗಳಿಂದ ನಡೆದ ನೂಕುನುಗ್ಗಲಾಟದಿಂದ ಗಲಿಬಿಲಿಗೊಂಡ ಹಾಜಬ್ಬ ಅಲ್ಲಿಂದ ಓಟಕಿತ್ತ ಪ್ರಸಂಗ ನಡೆದಿದೆ.

ಹರೇಕಳ ಹಾಜಬ್ಬನವರನ್ನು ಅಭಿನಂದಿಸುವ ಭರದಲ್ಲಿ ಹಾರ, ಶಾಲು, ಹೂಗುಚ್ಛಗಳನ್ನು ಹಿಡಿದು ನಾ ಮುಂದು, ತಾ ಮುಂದು ಎಂದು ತಳ್ಳಾಟ ನಡೆಸಿದ್ದಾರೆ. ಆದರೆ ಯಾವುದೇ ಅಭಿನಂದನೆ, ಪ್ರಶಂಸೆಗೆ ಬಾಗದ, ಬೀಗದ ಹಾಜಬ್ಬನವರು ಇದರಿಂದ ಗಲಿಬಿಲಿಗೊಂಡು ಅಲ್ಲಿಂದ ಓಟಕಿತ್ತಿದ್ದಾರೆ.

ಆದರೂ ಅವರು ಕಾರಿನ ಬಳಿ ಬಂದರೂ ಬಿಡದ ಅಭಿಮಾನಿಗಳು ಮತ್ತೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಅವರು ತಮಗೆಲ್ಲಾ ಇದೆಲ್ಲಾ ಯಾವುದೂ ಬೇಡ ಎಂದರೂ, ಅವರಿಗೆ ಒತ್ತಾಯಪೂರ್ವಕವಾಗಿ ಹಾರ, ಶಾಲು, ಹೂಗುಚ್ಛಗಳನ್ನು ನೀಡಿರುವ ಘಟನೆ ನಡೆದಿದೆ. ಬಳಿಕ ಪೊಲೀಸರು ಅವರನ್ನು ಹರಸಾಹಸಪಟ್ಟು ಕಾರಿನಲ್ಲಿ ಕೂರಿಸಿ ಕಳುಹಿಸಿಕೊಟ್ಟಿದ್ದಾರೆ.

ಆ ಬಳಿಕ ಹಾಜಬ್ಬರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸ್ವಾಗತ ಸನ್ಮಾನ ಕಾರ್ಯಕ್ರಮವೂ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಜಬ್ಬರನ್ನು ಗೌರವಪೂರ್ವಕವಾಗಿ ಸನ್ಮಾನ ಮಾಡಿದ್ದಾರೆ. ಶಾಲು ಹೊದಿಸಿ, ಪೇಟಾ ತೊಡಿಸಿ, ಫಲಪುಷ್ಪ ಕೊಟ್ಟು ಗೌರವಾರ್ಪಣೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, "ಹಾಜಬ್ಬರ ವ್ಯಕ್ತಿತ್ವ, ಮುಗ್ಧತೆ, ಆದರ್ಶ ಇಡೀ ದೇಶಕ್ಕೆ ಪರಿಚಯವಾಗಿದೆ. ಹಾಜಬ್ಬರ ಸರಳತೆಗೆ ಇಡೀ ದೇಶದ ಜನ ಮಾರು ಹೋಗಿದ್ದಾರೆ. ಕಿತ್ತಳೆ ಹಣ್ಣನ್ನು ಮಾರಿ ಶಾಲೆ ಕಟ್ಟಿದ ಹಾಜಬ್ಬರ ಜೀವನದ ಗುರಿಯೇ ಶಿಕ್ಷಣವಾಗಿದೆ. ಅವರ ಸೇವೆಗೆ ಎಷ್ಟೇ ಸನ್ಮಾನ ಮಾಡಿದರೂ ಅದು ತೃಣಕ್ಕೆ ಸಮಾನವಾಗುತ್ತದೆ," ಎಂದು ಕೊಂಡಾಡಿದ್ದಾರೆ.

Mangaluru; Fans Throng To Facilitate Harekala Hajabba At Airport After He Received Padma Shri Award

ಈ ವೇಳೆ ಮಾತನಾಡಿದ ಹಾಜಬ್ಬ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ ಬೆಂಬಲದ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಆದ ಅನುಭವವನ್ನು ಹಾಜಬ್ಬ ಹಂಚಿಕೊಂಡಿದ್ದಾರೆ.

"ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕಾರ ಮಾಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದ್ಮಶ್ರೀ ಪುರಸ್ಕೃತರಿಗಾಗಿ ಟೀ-ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ನನ್ನ ಬಳಿ ಬಂದ ಪ್ರಧಾನಿ ಮೋದಿಯವರು, ನನ್ನ ಕೈಯನ್ನು ಹಿಡಿದು ಬೇರೆಯವರಿಗೆ ಪರಿಚಯ ಮಾಡಿದರು. ನನ್ನ ಕೈ ಹಿಡಿದು ಮಂಗಳೂರಿನಲ್ಲಿ ಕಿತ್ತಳೆ ಹಣ್ಣನ್ನು ಮಾರಿ ಶಾಲೆ ಕಟ್ಟಿದವರಿವರು," ಅಂತಾ ಎಲ್ಲರ ಬಳಿ ಪರಿಚಯ ಮಾಡಿಸಿದರು ಅಂತಾ ಹರೇಕಳ ಹಾಜಬ್ಬ ಖುಷಿ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮುಂದೆ ಬಡ ವಿದ್ಯಾರ್ಥಿಗಳಿಗಾಗಿ ಪಿಯು ಕಾಲೇಜು ಕಟ್ಟುವ ಆಸೆಯಿದ್ದು, ಇದಕ್ಕೆ ಸರ್ಕಾರ ನೆರವು ನೀಡುವ ವಿಶ್ವಾಸವಿದೆ.‌ ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮನವಿ ಮಾಡಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗೌರವಾರ್ಪಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕಟೀಲ್ ಕಚೇರಿಗೆ ಹಾಜಬ್ಬ ತೆರಳಿದ್ದಾರೆ. ನಳಿನ್ ಕುಮಾರ್ ಕಟೀಲ್ ಇಲ್ಲದಿದ್ದರೂ ಸಿಬ್ಬಂದಿ ಭೇಟಿಯಾಗಿ ಪದ್ಮಶ್ರೀ ಪ್ರಶಸ್ತಿ ತೋರಿಸಿದ್ದಾರೆ. ಹಾಜಬ್ಬರಿಗೆ ನಳಿನ್ ಕುಮಾರ್ ಕಟೀಲ್‌ರವರ ಕಚೇರಿಯಲ್ಲೇ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಿದ್ದು, ಅದನ್ನು ನೆನಪಿಸಿ ಧನ್ಯವಾದ ಸಲ್ಲಿಸಿದ್ದಾರೆ.

English summary
Harekala Hajabba, the country's fourth highest civilian Padma Shri Awardee has arrived in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X