ಕುಮಾರಧಾರಾ ನದಿಗೆ ಯುವತಿ ಬಿದ್ದಳೆಂಬ ಸುಳ್ಳೇ ಸುಳ್ಳು ಸುದ್ದಿ
ಮಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನಿಂದ ಯುವತಿಯೊಬ್ಬಳು ಕೊಡಿಮಬಲ ಸಮೀಪದ ನಾಕೂರು ಎಂಬಲ್ಲಿ ಕುಮಾರಧಾರಾ ನದಿಗೆ ಹಾರಿದ್ದಾಳೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ನಾಗರಿಕರು ನದಿ ತಟದಲ್ಲಿ ಹುಡುಕಾಡಿದ ಘಟನೆ ನಡೆದಿದೆ.
ಯುವತಿ ರೈಲಿನಿಂದ ಹಾರಿದ್ದು, ಆ ನಂತರ ಬೋಗಿಯಲ್ಲಿದ್ದ ಯುವಕನು ಚೈನು ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ ಕಾರಣ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ. ಊರವರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ವಿಷಯ ತಿಳಿದು ಕಡಬ ಪೊಲೀಸರು, ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ನದಿಯ ಕೂಗಳತೆ ದೂರದಲ್ಲಿರುವ ರೈಲ್ವೆ ಗೇಟ್ ಸಿಬ್ಬಂದಿಯಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಆ ನಂತರ ಅವರೂ ಅಂತೆ ಕಂತೆಗಳ ಸುದ್ದಿಯನ್ನೇ ತಿಳಿಸಿದ್ದಾರೆ.
ಆದರೆ, ಸ್ಪಷ್ಟ ಮಾಹಿತಿ ಯಾರಿಂದಲೂ ಸಿಗದಿದ್ದಾಗ ಮಂಗಳೂರಿನ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸುಳ್ಳು ಸುದ್ದಿಯಿಂದಾಗಿ ತಮ್ಮ ಕೆಲಸಗಳನ್ನು ಬಿಟ್ಟು ನದಿ ತಟದಲ್ಲಿ ಸೇರಿದ್ದ ಊರವರು ಸಮಾಧಾನದ ನಿಟ್ಟುಸಿರು ಬಿಟ್ಟರು.












Click it and Unblock the Notifications