Mangaluru Blast: ಸಂಚಾರದಲ್ಲಿದ್ದ ಆಟೋದಲ್ಲಿ ಸ್ಫೋಟ ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಮಂಗಳೂರು, ನವೆಂಬರ್ 20: ನಗರದಲ್ಲಿನ ಆಟೋದಲ್ಲಿ ಸ್ಫೋಟಗೊಂಡ ತಕ್ಷಣ ಭಾರೀ ಪಟಾಕಿ ಹೊಡೆದಂತಹ ಶಬ್ದ ಕೇಳಿ ಬಂದಿದೆ. ಏನೆಂದು ನೋಡುವಾಗ ಭಾರೀ ಹೊಗೆ ಕಾಣಿಸಿಕೊಂಡಿತು, ಸ್ಥಳಕ್ಕೆ ಹೋಗುವಷ್ಟರಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದವು, ತಕ್ಷಣ ನಾವು ಅವರನ್ನು ರಿಕ್ಷಾವೊಂದರಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಿದೆವು ಎಂದು ಘಟನೆಯ ಸಂದರ್ಭದಲ್ಲಿದ್ದ ಪ್ರತ್ಯಕ್ಷದರ್ಶಿ ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.
"ಸಂಜೆ ವೇಳೆ ಸುಮಾರು 4.30 ಯಿಂದ 5 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಆಟೋ ಡ್ರೈವರ್ ತಲೆ ಕೂದಲು ಸಂಪೂರ್ಣ ಸುಟ್ಟಿತ್ತು. ಕೈಯಲ್ಲೂ ಸುಟ್ಟ ಗಾಯಗಳಾಗಿದೆ. ಪ್ರಯಾಣಿಕ ಡಬ್ಬಲ್ ಶರ್ಟ್ ಹಾಕಿದ್ದು, ಮೇಲಿನ ಶರ್ಟ್ ಸಂಪೂರ್ಣ ಸುಟ್ಟು ಹೋಗಿತ್ತು. ಒಳಗಿನ ಶರ್ಟ್‌ಗೂ ಬೆಂಕಿ ಹತ್ತಿದ್ದು, ಅದನ್ನು ಎಳೆದು ಹರಿದು ಹಾಕಿದ್ದೇವೆ. ಬಳಿಕ ಅವನ ಮೈಮೇಲಿದ್ದ ಬೆಂಕಿ ನಂದಿಸಲು ನೀರು ಹಾಕಿದ್ದೆವು. ಬಳಿಕ ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ನಗರದ ಗರೋಡಿಯಲ್ಲಿ ಶನಿವಾರ ಆಟೋ ರಿಕ್ಷಾದಲ್ಲಿ ಸ್ಪೋಟ ನಡೆದ ಸಂದರ್ಭದಲ್ಲಿ ಅನತಿ ದೂರದಲ್ಲಿರುವ ತಮ್ಮ ತರಕಾರಿ ಅಂಗಡಿಯಲ್ಲಿದ್ದ ಸುಭಾಷ್ ಶೆಟ್ಟಿ ತಿಳಿಸಿದ್ದಾರೆ.
ಆಟೋ ಡ್ರೈವರ್ ನನಗೆ ಪರಿಚಿತರು. ಅವರು ಪ್ರಯಾಣಿಕನನ್ನು ಕಂಕನಾಡಿ ಜಂಕ್ಷನ್ನ್‌ನಲ್ಲಿ ಆಟೋಗೆ ಹತ್ತಿಸಿಕೊಂಡಿದ್ದೆ ಎಂದಿದ್ದರು. ಮೊದಲಿಗೆ ನಾವು ಆಟೋದ ಗ್ಯಾಸ್ ಸಿಲಿಂಡರ್ ಒಡೆದು ಹೋಗಿರಬಹುದು ಎಂದು ಅಂದುಕೊಂಡಿದ್ದೆವು. ಆ ಬಳಿಕ ನೋಡಿದಾಗ ಆಟೋದಲ್ಲಿ ಕುಕ್ಕುರ್, ಸ್ವಲ್ಪ ಹೊಡೆದಿತ್ತು. ವೈರ್‌ಗಳು ಹಾಗೂ ಸಣ್ಣ ಸಣ್ಣ ಬ್ಯಾಟರಿಗಳು ಕಾಣಿಸಿದವು. ಆದರೆ ಇದು ಉಗ್ರ ಕೃತ್ಯವೋ , ಆಕಸ್ಮಿಕವೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಆಟೋ ಡ್ರೈವರ್ ನನಗೆ ಪರಿಚಯವಿದ್ದಿದ್ದರಿಂದ , ಆದರೆ ಪ್ರಯಾಣಿಕನ ಬಗ್ಗೆ ಏನೂ ಗೊತ್ತಿಲ್ಲ, ಆದರೆ ಆತನನ್ನು ಕಂಕನಾಡಿಯಿಂದ ಹತ್ತಿಸಿಕೊಂಡಿದ್ದೆ ಎಂದು ಡ್ರೈವರ್ ತಿಳಿಸಿದರೂ, ಆದರೆ ಎಲ್ಲಿಗೆ ಬಿಡಬೇಕೆಂದಿದ್ದರು ಎನ್ನುವುದನ್ನು ನಾನು ಕೇಳಲಿಲ್ಲ. ಸ್ಥಳದಲ್ಲಿ ನಟ್ಟು, ಬೋಲ್ಟ್, ಏನೋ ಪುಡಿ, ಬ್ಯಾಟರಿಗಳಿದ್ದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಸುಭಾಷ್ ಮಾಹಿತಿ ನೀಡಿದ್ದಾರೆ.

ಉಗ್ರ ಕೃತ್ಯ ಎಂದು ಖಚಿತಪಡಿಸಿದ ಡಿಜಿಪಿ
ಇನ್ನು ಈ ಘಟನೆ ಆಕಸ್ಮಿಕ ಘಟನೆಯಲ್ಲ, ಗಂಭೀರ ಹಾನಿಯನ್ನು ಮಾಡುವ ಉದ್ದೇಶದಿಂದ ನಡೆದಿರುವ ಭಯೋತ್ಪಾದಕ ಕೃತ್ಯ. ಈ ಪ್ರಕರಣವನ್ನು ರಾಜ್ಯ ಪೊಲೀಸರು ಹಾಗೂ ಕೇಂದ್ರದ ಏಜೆನ್ಸಿಗಳು ಒಟ್ಟಿಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications