ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಎಡೆ ಮಡೆಸ್ನಾನದಲ್ಲಿ 333 ಭಕ್ತರು
ಮಂಗಳೂರು, ನವೆಂಬರ್ 23: ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿಯ ಸಂಭ್ರಮ ಮನೆ ಮಾಡಿದೆ. ಹದಿನಾರು ದಿನ ನಡೆಯಲಿರುವ ಈ ವಾರ್ಷಿಕ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ವಿಶೇಷ ಸೇವೆಗಳಲ್ಲಿ ಎಡೆ ಮಡೆಸ್ನಾನವೂ ಒಂದಾಗಿದ್ದು, ಗುರುವಾರದಂದು (ಪಂಚಮಿ) ನಡೆದ ಈ ಸೇವೆಯಲ್ಲಿ 333 ಭಕ್ತರು ಪಾಲ್ಗೊಂಡಿದ್ದರು.
ವಿವಾದದ ಕೇಂದ್ರಬಿಂದುವಾಗಿದ್ದ ಮಡೆ ಮಡೆ ಸ್ನಾನ ಕ್ಷೇತ್ರದಲ್ಲಿ ನಿಷೇಧಗೊಂಡ ಬಳಿಕ ಇದು ಮೂರನೇ ಬಾರಿಗೆ ಸುಬ್ರಹ್ಮಣ್ಯದಲ್ಲಿ ಎಡೆ ಮಡೆಸ್ನಾನವನ್ನು ನಡೆಸಲಾಯಿತು. ದೇವರ ನೈವೇದ್ಯವನ್ನು ದೇವಸ್ಥಾನದ ಪ್ರಾಂಗಣದಲ್ಲಿ ಬಡಿಸಿ, ಅದನ್ನು ಗೋವುಗಳಿಗೆ ನೀಡಲಾಗುತ್ತದೆ. ಆ ನಂತರ ಇದರ ಮೇಲೆ ಭಕ್ತಾಧಿಗಳು ಉರುಳುಸೇವೆ ಮಾಡುತ್ತಾರೆ. ಈ ಉರುಳು ಸೇವೆಯನ್ನು ಎಡೆ ಮಡೆಸ್ನಾನ ಎನ್ನುತ್ತಾರೆ.

ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬ್ರಾಹ್ಮಣರು ಊಟ ಮಾಡಿ ಬಿಟ್ಟ ಎಂಜಿಲ ಎಲೆಯ ಮೇಲೆ ಉರುಳು ಸೇವೆ ಮಾಡುವ ಮಡೆಮಡೆ ಸ್ನಾನವನ್ನು ನೆರವೇರಿಸಿಕೊಂಡು ಬರಲಾಗುತ್ತಿತ್ತು. ಅದು ನಿಷೇಧಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ಇಲ್ಲಿ ಈಗ ಎಡೆ ಮಡೆಸ್ನಾನವನ್ನು ಆರಂಭಿಸಲಾಗಿದೆ.
ಕ್ಷೇತ್ರದಲ್ಲಿ ನಡೆಯುವ ಈ ವಿಶೇಷ ಸೇವೆಯಲ್ಲಿ ನೂರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸುತ್ತಿದ್ದಾರೆ. ಈ ಸೇವೆಯನ್ನು ಮಾಡಿದಲ್ಲಿ ದೇಹಕ್ಕೆ ಅಂಟಿಕೊಂಡ ಚರ್ಮ ರೋಗಾದಿಗಳು ಸೇರಿದಂತೆ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.

ಶ್ರೀ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 8.30ರ ಮುಹೂರ್ತದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸುತ್ತಾರೆ.












Click it and Unblock the Notifications