ವೈದ್ಯರ ಮುಷ್ಕರಕ್ಕೆ ಕರಾವಳಿಯಲ್ಲಿ ಬೆಂಬಲ; ಇಂದು ಒಪಿಡಿ ಸೇವೆ ಇಲ್ಲ
ಮಂಗಳೂರು ಜೂನ್ 17: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಪ್ರಕರಣವನ್ನು ವಿರೋಧಿಸಿ ಭಾರತೀಯ ವೈದ್ಯರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ದೇಶದೆಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರಿನ ಎಲ್ಲ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದೆ. ಎಮರ್ಜೆನ್ಸಿ ಹೊರತುಪಡಿಸಿ ಖಾಸಗಿ ವೈದ್ಯರ ಸೇವೆಯನ್ನು ಒಂದು ದಿನಕ್ಕೆ ಸ್ಥಗಿತ ಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಸರ್ಕಾರಿ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಗಳಲ್ಲಿ ಬದಲಿ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಒಪಿಡಿ ಸಹಿತ ಯಾವುದೇ ಸೇವೆ ನೀಡಲಾಗುವುದಿಲ್ಲ. ವೈದ್ಯರ ಮುಷ್ಕರಕ್ಕೆ ಜಿಲ್ಲೆಯ ಆಯುಷ್ ಫೌಂಡೇಶನ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ಮುಷ್ಕರದ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.

ಉಡುಪಿಯಲ್ಲಿ 20ರಷ್ಟು ಹೈಟೆಕ್ ನರ್ಸಿಂಗ್ ಹೋಂಗಳಿದ್ದು, 100 ಕ್ಲಿನಿಕ್‌ಗಳು ಹೊರರೋಗಿ ವಿಭಾಗ ಸೇವೆ ನೀಡುತ್ತಿಲ್ಲ.ಎಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕ್ಲಿನಿಕ್‌ಗಳಲ್ಲಿ ಅಪಘಾತ ಮತ್ತು ತುರ್ತು ಸೇವೆ ಲಭ್ಯವಿದೆ. ವೈದ್ಯರು, ಶುಶ್ರೂಷಕರು ಎಂದಿನಂತೆ ಕಾರ್ಯನಿರ್ವಹಿಸಲಿದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆ ಅಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications