ಡಿಕೆ ರವಿ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಲಿ
ಮಂಗಳೂರು, ಮಾ. 18 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ. ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಜನಾರ್ದನ ಪೂಜಾರಿ ಅವರು, ದೊಡ್ಡಕೊಪ್ಪಲು ಕರಿಯಪ್ಪ ರವಿ ಅವರು ಭೂ ಮಾಫಿಯಾ, ಮರಳು ಮಾಫಿಯಾದ ವಿರುದ್ಧ ಸಮರ ಸಾರಿದವರು. ಸರ್ಕಾರದ ಕಾರ್ಯಕ್ರಮಗಳನ್ನು ಬದ್ಧತೆ ಮತ್ತು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಅನುಷ್ಠಾನಗೊಳಿಸುವಲ್ಲಿ ಶ್ರಮಿಸುತ್ತಿದ್ದರು ಎಂದರು. [ಈ ಸಾವು ನ್ಯಾಯವೇ ಮತ ಹಾಕಿ]

ಡಿಕೆ ರವಿಯಂತಹ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಅವರ ನಿಗೂಢ ಸಾವಿನ ಪ್ರಕರಣವನ್ನು ಶೀಘ್ರವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. [ಮರಣೋತ್ತರ ಪರೀಕ್ಷೆ ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು]
ರವಿ ಅವರು ಕೇಂದ್ರ ಸರ್ಕಾರದ ಮುಖಾಂತರ ನೇಮಕಗೊಂಡ ಅಧಿಕಾರಿ. ಆದ್ದರಿಂದ ಈ ಪ್ರಕರಣದ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು.[ಸದನದಲ್ಲಿ ಸಿಬಿಐ ತನಿಖೆಗೆ ಒತ್ತಾಯ]
ಸಿಬಿಐ ತನಿಖೆಗೆ ಒಪ್ಪಿಸುತ್ತಾರಾ? : ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಮತ್ತು ಜೆಡಿಎಸ್ ಒತ್ತಾಯಿಸುತ್ತಿವೆ. ಸದನದಲ್ಲಿ ಆಹೋರಾತ್ರಿ ಧರಣಿ ಮಾಡುತ್ತಿವೆ. ಆದರೆ, ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ.
ರಾಜ್ಯದಲ್ಲಿನ ವಿವಿಧ ಸಂಘಟನೆಗಳು, ಡಿಕೆ ರವಿ ಅವರ ಮಾವ ಹನುಮಂತರಾಯಪ್ಪ, ಡಿಕೆ ರವಿ ಅವರ ಕುಟುಂಬದವರು ಎಲ್ಲರೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸದ್ಯ ಕಾಂಗ್ರೆಸ್ ನಾಯಕರು ಈ ಕುರಿತು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವುದೇ ಕಾದು ನೋಡಬೇಕು.












Click it and Unblock the Notifications