Laksha Deepotsava: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ತೆರೆ
ಮಂಗಳೂರು, ಡಿಸೆಂಬರ್ 14: ದಕ್ಷಿಣ ಭಾರತದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಐದು ದಿನಗಳ ಕಾಲ ನಡೆಯುವ ಲಕ್ಷ ದೀಪೋತ್ಸವಕ್ಕೆ ತೆರೆ ಬಿದ್ದಿದೆ. ದೀಪೋತ್ಸವದ ಸಂಭ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ. ಕೊನೆಯ ದಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಸಿಂಗಾರಗೊಂಡು ಲಕ್ಷಾಂತರ ಭಕ್ತರ ಸಮಾಗಮಕ್ಕೆ ಸಾಕ್ಷಿಯಾಯಿತು.
ಕಾರ್ತಿಕ ಮಾಸದ ಲಕ್ಷ ದೀಪದ ಸಂಭ್ರಮ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮೇಳೈಸಿದೆ. ಲಕ್ಷ ದೀಪೋತ್ಸವದ ಹಿನ್ನಲೆಯಲ್ಲಿ ಧರ್ಮಸ್ಥಳ ಕ್ಷೇತ್ರ ದೀಪಾಲಂಕಾರದಿಂದ ಕಂಗೊಳಿಸಿದೆ. ಧರ್ಮಸ್ಥಳದಲ್ಲಿ ಕೊನೆಯ ದಿನ ಭಕ್ತ ಸಾಗರವೇ ಹರಿದುಬಂದಿದ್ದು ಜನ ರಾತ್ರಿ ಇಡೀ ಧರ್ಮಸ್ಥಳದಲ್ಲೇ ಕಳೆದು ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಕಳೆದ ಐದು ದಿನಗಳಿಂದ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಲಕ್ಷ ದೀಪೋತ್ಸವ ನಡೆದಿದೆ. ಡಿಸೆಂಬರ್ 13 ಬುಧವಾರ ಭಗವಾನ್ ಶ್ರೀಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ನಡೆದ ಸಮವಸರಣ ಪೂಜೆಯೊಂದಿಗೆ ಅಪಾರ ಭಕ್ತರ ಸಮಾಗಮದಲ್ಲಿ ಲಕ್ಷ ದೀಪೋತ್ಸವ ಸಂಭ್ರಮಕ್ಕೆ ತೆರೆ ಬಿದ್ದಿದೆ.
ದೀಪೋತ್ಸವ ಕೊನೆಯ ದಿನ ಹಿನ್ನೆಲೆ ದೇಗುಲದ ಮುಂಭಾಗವನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು ಹದಿನೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಹೂವಿನ ಸಿಂಗಾರ ಮಾಡಲಾಗಿದ್ದು, ಮೂವತ್ತಕ್ಕೂ ಅಧಿಕ ಕಾರ್ಮಿಕರು ದೇವಸ್ಥಾನದ ಮುಂಭಾಗ ಅತ್ಯಾಕರ್ಷಕವಾಗಿ ಅಲಂಕಾರ ಮಾಡಿದ್ದಾರೆ. ವಿಶೇಷವಾಗಿ ವಿದೇಶಿ ಹೂವುಗಳಿಂದ ಈ ಅಲಂಕಾರ ಮಾಡಲಾಗಿದ್ದು, ನಂದಿ ವಿಗ್ರಹ, ಡಮರುಗ, ತ್ರಿಶೂಲವನ್ನು ಹೂವಿನಿಂದಲೇ ನಿರ್ಮಿಸಿದ್ದು ವಿಶೇಷವಾಗಿತ್ತು. ಬೆಂಗಳೂರು ಮೂಲದ ಭಕ್ತರ ತಂಡ ಪ್ರತಿವರ್ಷ ಈ ಅಲಂಕಾರ ಸೇವೆಯನ್ನು ಮಾಡುತ್ತದೆ.

ಐದು ದಿನಗಳ ಕಾಲ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ಕರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿ ಮಾರುಕಟ್ಟೆ ಉತ್ಸವ, ಗೌರಿ ಮಾರುಕಟ್ಟೆ ಉತ್ಸವದ ಜೊತೆಗೆ ಸರ್ವ ಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ ಹೀಗೆ ವಿವಿಧ ಸಮ್ಮೇಳನಗಳು ನಡೆದಿದೆ. ದೇವಸ್ಥಾನ, ಅನ್ನ ಛತ್ರ ರಾಜಬೀದಿಗಳು ದೀಪಾಲಂಕಾರದಿಂದ ಕಂಗೊಳಿಸಿದೆ. ರಾಜ್ಯದ ವಿವಿಧ ಭಾಗದ ಕಲಾತಂಡಗಳು ಕ್ಷೇತ್ರಕ್ಕೆ ಆಗಮಿಸಿ ರಾತ್ರಿ ಇಡೀ ಸೇವೆ ನೀಡುವುದು ಲಕ್ಷ ದೀಪೋತ್ಸವದ ವಿಶೇಷವಾಗಿದ್ದು ಈ ಬಾರಿಯೂ ಹಲವು ತಂಡಗಳು ಕ್ಷೇತ್ರಕ್ಕೆ ಆಗಮಿಸಿದೆ.
ಒಟ್ಟಿನಲ್ಲಿ ಐದು ದಿನಗಳ ಕಾಲ ನಡೆದ ಲಕ್ಷ ದೀಪದ ಸಂಭ್ರಮದಲ್ಲಿ ಕರಾವಳಿ ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಅಲ್ಲದೇ ಧರ್ಮಸ್ಥಳದ ದೀಪಾಲಂಕಾರ ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications