ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

‘ಶ್ರೀಕ್ಷೇತ್ರದ ಪ್ರಗತಿಪರತೆಗೆ ಪ್ರಧಾನಿ ಭೇಟಿಯಿಂದ ರಾಷ್ಟ್ರೀಯ ಮನ್ನಣೆ’

By Mahesh
|
Google Oneindia Kannada News

ಶ್ರೀಸಾಮಾನ್ಯರ ಹಿತರಕ್ಷಣೆಯ ಯೋಜನೆಗಳೊಂದಿಗೆ ಗುರುತಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಗತಿಪರ ಹೆಜ್ಜೆಗಳು ರಾಷ್ಟ್ರೀಯ ಮನ್ನಣೆ ಪಡೆದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚೆಗಿನ ಭೇಟಿ ಸಾಬೀತುಪಡಿಸಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಸಮಾವೇಶಗೊಂಡ ಭಕ್ತ ಸಮೂಹದ ಸಮ್ಮುಖ ಪ್ರಸಕ್ತ ವರ್ಷದ ಕಾರ್ತಿಕ ಮಾಸದ ಲಕ್ಷದೀಪೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಪ್ರಧಾನಿಯವರ ಇತ್ತೀಚೆಗಿನ ಧರ್ಮಸ್ಥಳ ಭೇಟಿಯನ್ನು ಅಭಿವೃದ್ಧಿಯ ಮಹತ್ವದ ಘಟ್ಟ ಎಂದು ಬಿಂಬಿಸಿದರು.

ಜನಸಾಮಾನ್ಯರ ಪರವಾದ ಅನುಕೂಲಕರ ಯೋಜನೆಗಳ ಅನುಷ್ಠಾನವೇ ಪ್ರಧಾನಿಯವರ ಭೇಟಿಗೆ ಕಾರಣವಾಯಿತು. ಪ್ರಧಾನಿಯವರು ಧರ್ಮಸ್ಥಳ ಭೇಟಿಯ ಸಂದರ್ಭದಲ್ಲಿ ಈ ಯೋಜನೆಗಳು ದೇಶಕ್ಕೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿಂದ ಆರಂಭವಾಗಿರುವ ಪ್ರಗತಿಪರ ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆಯಲ್ಲೂ ಜಾರಿಗೆ ತರುವ ಸಂಕಲ್ಪ ತೊಟ್ಟರು. ಇದು ಶ್ರೀಕ್ಷೇತ್ರದ ಪ್ರಗತಿಪರ ಹೆಗ್ಗುರುತಿಗೆ ಸಿಕ್ಕ ರಾಷ್ಟ್ರೀಯ ಮನ್ನಣೆ ಎಂದು ನುಡಿದರು.

ಮೋದಿಯವರು ದೇಶದ ಅಭಿವೃದ್ಧಿಗಾಗಿ ಪ್ರಾರ್ಥನಾ ಸಂಕಲ್ಪಗೈದರು. ದೇಶಕ್ಕೆ ಒಳಿತಾಗಲಿ, ಶತೃತ್ವ ನಾಶವಾಗಲಿ ಎಂಬ ಸದಾಶಯದ ಆಲೋಚನೆಯೊಂದಿಗೆ ಪ್ರಾರ್ಥಿಸಿದರು. ರಾಷ್ಟ್ರದ ಉನ್ನತ ಹುದ್ದೆಯಲ್ಲಿದ್ದುಕೊಂಡು ಜನರು ಮತ್ತು ದೇಶದ ಒಳಿತನ್ನು ಬಯಸುವ ಪ್ರಾರ್ಥನಾ ಸಂಕಲ್ಪವು ಉದಾತ್ತವಾದುದಾಗಿದ್ದು, ಆ ಕಾರಣಕ್ಕಾಗಿಯೇ ಯಶಸ್ಸು ಸಿದ್ಧಿಸುತ್ತದೆ ಎಂದು ಹೇಳಿದರು.

 ಕ್ಷೇತ್ರದ ಜನಪರ ನಿಲುವುಗಳ ಬಗ್ಗೆ ಮೆಚ್ಚುಗೆ

ಕ್ಷೇತ್ರದ ಜನಪರ ನಿಲುವುಗಳ ಬಗ್ಗೆ ಮೆಚ್ಚುಗೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ಕ್ಷೇತ್ರದ ಜನಪರ ನಿಲುವುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಿಧ ವಲಯದ ಗಣ್ಯಮಾನ್ಯರ ಆಗಮನವು ಒಳಿತಿನ ಕೆಲಸಗಳನ್ನು ನಿರ್ವಹಿಸುವ ಹುಮ್ಮಸ್ಸು ಹೆಚ್ಚಿಸಿದೆ. ಶ್ರೀಕ್ಷೇತ್ರದ ಸಮಾಜಮುಖಿ ಹೆಗ್ಗುರುತಿನ ಪರಂಪರೆ ಮುಂದುವರೆಸಲು ಪ್ರೇರಣೆಯಾಗಿದೆ ಎಂದು ನುಡಿದರು. ಪಾದಯಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಭಕ್ತರಿಗೆ ನುಡಿನಮನ ಸಲ್ಲಿಸಿದರು.

ಐದನೇ ವರ್ಷದ ಪಾದಯಾತ್ರೆ

ಐದನೇ ವರ್ಷದ ಪಾದಯಾತ್ರೆ

ಐದನೇ ವರ್ಷದ ಪಾದಯಾತ್ರೆ ಸಮಿತಿ ಮತ್ತು ಧರ್ಮಸ್ಥಳದ ಸ್ವಯಂಸೇವಕ ಸಂಘದ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿದರು. ಶ್ರೀಮತಿ ಹೇಮಾವತಿ ಹೆಗ್ಗಡೆ ಉಪಸ್ಥಿತರಿದ್ದರು. ಖ್ಯಾತ ನ್ಯಾಯವಾದಿ ಪ್ರತಾಪಸಿಂಹ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಾದಯಾತ್ರಿಗಳಿಗಾಗಿ ತಂಪು ಪಾನೀಯ

ಪಾದಯಾತ್ರಿಗಳಿಗಾಗಿ ತಂಪು ಪಾನೀಯ

ಸಾವಿರಾರು ಜನ ಭಕ್ತರು ಬಹಳ ವೇಗವಾಗಿ ನಡೆದುಕೊಂಡು ಬರುತ್ತಿದ್ದರು. ಬಹಳ ಶಿಸ್ತಿನಿಂದ ದೇವರ ಮೇಲಿನ ಭಕ್ತಿಯಿಂದ ಉತ್ಸಾಹದಿಂದ ಹೆಜ್ಜೆ ಹಾಕುತಿದ್ದರು. ಅವರ ಆಯಾಸ ನೀಗಿಸಲು ಮಾರ್ಗದ ಮಧ್ಯೆದಲ್ಲಿ ತಂಪು ಪಾನೀಯವನ್ನು ನೀಡಲಾಗುತ್ತಿತ್ತು. ಐಸ್‍ಕ್ರೀಮ್ ವಿತರಿಸಲಾಗುತ್ತಿತ್ತು.

 ‘ನಮ್ಮ ನಡಿಗೆ ಮಂಜುನಾಥನ ಕಡೆಗೆ’

‘ನಮ್ಮ ನಡಿಗೆ ಮಂಜುನಾಥನ ಕಡೆಗೆ’

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ 5ನೇ ವರ್ಷದ 'ನಮ್ಮ ನಡಿಗೆ ಮಂಜುನಾಥನ ಕಡೆಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಾಲಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ಭಕ್ತಾದಿಗಳು ಪಾದಯಾತ್ರೆ ಕೈಗೊಂಡರು. ಪಾದಯಾತ್ರೆಯಲ್ಲಿ ಹತ್ತು ಸಾವಿರಕ್ಕೂ ಮಿಗಿಲಾದ ಜನರು ಮಕ್ಕಳು, ಕಿರಿಯರು, ಹಿರಿಯರೆನ್ನದೆ ಭಕ್ತರು ಪಾಲ್ಗೊಂಡಿದ್ದರು.

ಕಲ್ಲಂಗಡಿಯ ಪಾನೀಯದ ವ್ಯವಸ್ಥೆ

ಕಲ್ಲಂಗಡಿಯ ಪಾನೀಯದ ವ್ಯವಸ್ಥೆ

ಪಾನೀಯ ವಿತರಕರು ಬನ್ನಿ ಬನ್ನಿ ದನಿವಾರಿಸಿಕೊಳ್ಳಿ ನೀರು ಕುಡಿದು ನಿಧಾನವಾಗಿ ಸಂಚರಿಸಿ ಎನ್ನುತ್ತಿದ್ದರು. ಪ್ರತಿ ಒಂದು ಕಿ.ಲೋ ಮೀಟರ್ ಅಂತರದಲ್ಲಿ ಪಾನೀಯ ನೀಡಲಾಗುತ್ತಿತ್ತು. ಭಕ್ತಾದಿಗಳಿಗೆ ದಣಿವಾರಿಸಿಕೊಳ್ಳಲು ಕ್ಯಾಂಡಿ, ಪಾನಕ, ಜ್ಯೂಸ್, ಕಲ್ಲಂಗಡಿಯ ಪಾನೀಯದ ವ್ಯವಸ್ಥೆಯಿತ್ತು.

ವರದಿ: ಶಿವರಂಜಿನಿ ಕೊೈಲ,
ಚಿತ್ರಗಳು: ಅಭಿನಂದನ್ ಎಂ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ

ಹೊಸಕಟ್ಟೆ ಉತ್ಸವದೊಂದಿಗೆ ಪೂಜಾರಂಭ

ಹೊಸಕಟ್ಟೆ ಉತ್ಸವದೊಂದಿಗೆ ಪೂಜಾರಂಭ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿದಲ್ಲಿ ಲಕ್ಷದೀಪೋತ್ಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಹೊಸಕಟ್ಟೆ ಉತ್ಸವದೊಂದಿಗೆ ಧಾರ್ಮಿಕ ಪೂಜಾಕಾರ್ಯಗಳಿಗೆ ಚಾಲನೆ ದೊರಕಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ಹೊಸಕಟ್ಟೆ ಉತ್ಸವದ ಪೂಜಾವಿಧಿವಿಧಾನಗಳು ನೆರವೇರಿದವು.

ಹೊಸಕಟ್ಟೆ ಉತ್ಸವ

ಹೊಸಕಟ್ಟೆ ಉತ್ಸವ

ಹೊಸಕಟ್ಟೆ ಉತ್ಸವದ ಪ್ರಯುಕ್ತ ಮಂಜುನಾಥ ಸ್ವಾಮಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಸಂತಮಹಲ್‍ನ ಹೊಸಕಟ್ಟೆಯ ಬಳಿ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ದೇವಳದ 2 ಆನೆಗಳು ಸ್ವಾಮಿಗೆ ಚಾಮರ ಬೀಸಿದವು. ಈ ಸಂದರ್ಭದಲ್ಲಿ ಪತಾಕೆ ಹಾಗೂ ಪಂಜನ್ನು ಹಿಡಿಯಲಾಗಿತ್ತು. ಸಂಗೀತ ಸೇವೆ, ವಾದ್ಯ ಸೇವೆ, ಗೊಂಬೆಗಳು ಉತ್ಸವದ ಮೆರುಗನ್ನು ಹೆಚ್ಚಿಸುವಂತಿದ್ದವು.

ದೇವಳದಲ್ಲಿ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು

ದೇವಳದಲ್ಲಿ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು

ವಿಶೇಷ ಪೂಜೆಗಳು, ನೈವೇದ್ಯ ಸೇರಿದಂತೆ ಅಷ್ಟ ವಿಧವಾದ ಸೇವೆಗಳನ್ನು ನೆರವೇರಿಸಲಾಯಿತು. ದೇವಳದಲ್ಲಿ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಪಲ್ಲಕ್ಕಿಯಲ್ಲಿ ದೇವರ ಮೂರ್ತಿಯನ್ನು ಕೂರಿಸಲಾಯಿತು. ವಸಂತಮಹಲ್‍ನಿಂದ ಜೊತೆಗಿದ್ದ ರಥದೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮರಳಿತು. ಬೆಳ್ಳಿರಥದೊಂದಿಗೆ ಒಂದು ಸುತ್ತು ಹಾಕಿದ ನಂತರ ಹೊಸಕಟ್ಟೆ ಉತ್ಸವ ಸಂಪನ್ನಗೊಂಡಿತು.

ಅಷ್ಟವಿಧವಾದ ಪೂಜೆಗಳು

ಅಷ್ಟವಿಧವಾದ ಪೂಜೆಗಳು

ದೇವರು ಹೊಸಕಟ್ಟೆಯಲ್ಲಿ ಕೂತ ಬಳಿಕ ಅಷ್ಟವಿಧವಾದ ಪೂಜೆಗಳು ನಡೆಯುತ್ತವೆ. ಈ ಬಾರಿಯ ಹೊಸಕಟ್ಟೆ ಉತ್ಸವದಂದು ಭಕ್ತರೊಬ್ಬರ ಹರಕೆಯಂತೆ ಬೆಳ್ಳಿ ರಥದ ಮೂಲಕ ಪಲ್ಲಕ್ಕಿಯ ಮೆರವಣಿಗೆ ವಿಶೇಷವಾಗಿತ್ತು. ಹೊಸಕಟ್ಟೆಯಲ್ಲಿ ಪೂಜೆಗಳ ಬಳಿಕ ಮೆರವಣಿಗೆ ದೇವಳದತ್ತ ಸಾಗಿತು.

ಧರ್ಮಸ್ಥಳವು ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು. ಪೂಜೆಯ ಸಂದರ್ಭದಲ್ಲಿ 45 ಬಗೆಯ ವಿದ್ಯುತ್ ದೀಪಾಲಂಕಾರ ಹಲವರನ್ನು ಆಕರ್ಷಿಸಿತು. ದೇವಸ್ಥಾನದ ಮುಂಭಾಗದಲ್ಲಿ ಐದು ಹಣತೆಯ ದೀಪಗಳು ಬೆಳಗುತ್ತಿದ್ದವು. ಇಲ್ಲಿ ಹಣತೆಯ ದೀಪ ಹಚ್ಚಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ. ಹಲವು ಭಕ್ತರು ಹಣತೆಯ ದೀಪ ಬೆಳಗಿಸುತ್ತಿದ್ದುದು ಕಂಡುಬಂತು.

ವರದಿ: ಪಲ್ಲವಿ ಜೋಶಿ
ಚಿತ್ರಗಳು: ಪೌಲೋಸ್ ಬಿ.ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,ಎಸ್‍ಡಿಎಂ, ಕಾಲೇಜ್ ಉಜಿರೆ

English summary
Laksha Deepotsava begins at Dharmasthala for five days from Nov 13 to 18 and everyday various cultural programmes will be held . Dr. Veerendra Heggade said SDM now got national recognition after PM Modi's visit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X