ಕುಕ್ಕೆ ಸುಬ್ರಹ್ಮಣ್ಯಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಭಕ್ತರ ಒತ್ತಾಯ
ಮಂಗಳೂರು, ಡಿಸೆಂಬರ್, 07: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕೆಂಬುವ ಕೂಗು ಜೋರಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಪ್ರಾಣಕ್ಕೆ ರಕ್ಷಣೆಗಾಗಿ ಸುಸಜ್ಜಿತ ಆಸ್ಪತ್ರೆ ಬೇಕೆನ್ನುವ ಕೂಗು ಹಲವು ವರ್ಷಗಳಿಂದ ಭಕ್ತರು, ಸ್ಥಳೀಯರದ್ದಾಗಿದೆ. ಆದರೆ ಜನಪ್ರತಿನಿಧಿಗಳು ಇನ್ನು ಇದರ ಕಡೆ ಗಮನಹರಿಸಿಲ್ಲ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ವರು ಭಕ್ತರು ತುರ್ತು ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಭಕ್ತರ ಮತ್ತು ಸ್ಥಳೀಯರ ಆಕ್ರೋಶ ಭುಗಿಲೆದ್ದಿದೆ.
ಸುಬ್ರಹ್ಮಣ್ಯಕ್ಕೆ ಸುಸಜ್ಜಿತ ಆಸ್ಪತ್ರೆ ಬೇಕು
ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದೆಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ. ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಲೇ ಇರುತ್ತಾರೆ. ಭಕ್ತಾಧಿಗಳಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ, ಸೂಕ್ತ ಚಿಕಿತ್ಸೆಗೆ ಸರಿಯಾಗಿ ವ್ಯವಸ್ಥೆ ಇಲ್ಲದಂತಾಗಿದೆ. ಭಕ್ತರಿಗೆ 24 ಗಂಟೆ ಕಾರ್ಯನಿರ್ವಹಿಸುವ ಆಸ್ಪತ್ರೆಯ ಅಗತ್ಯತೆ ಇದೆ. ನಾಲ್ಕು ತಿಂಗಳ ಅಂತರದಲ್ಲಿ ತುರ್ತು ಚಿಕಿತ್ಸೆ ಸಿಗದೆ ನಾಲ್ವರು ಭಕ್ತರು ಸಾವಿಗೀಡಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ನದಿಯಲ್ಲಿ ಮುಳುಗಿ ಸೂಕ್ತ ಚಿಕಿತ್ಸೆ ದೊರಕದೆ ಸಾವನ್ನಪ್ಪಿದ್ದರು. ಸುಬ್ರಹ್ಮಣ್ಯ ಸಮುದಾಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸೌಲಭ್ಯವಿಲ್ಲದಂತಾಗಿದೆ. ತುರ್ತು ಚಿಕಿತ್ಸೆಗಾಗಿ 100 ಕಿಲೋ ಮೀಟರ್ ದೂರದ ಮಂಗಳೂರು ಮತ್ತು 60 ಕಿಲೋ ಮೀಟರ್ ದೂರದ ಪುತ್ತೂರನ್ನು ಅವಲಂಭಿಸಬೇಕಾದ ಅನಿವಾರ್ಯತೆ ಭಕ್ತರು ಮತ್ತು ಸ್ಥಳೀಯರದ್ದಾಗಿದೆ.

ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆ ನಿರ್ಮಿಸಬೇಕು
ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆ ಕುಕ್ಕೆ ಸುಬ್ರಹ್ಮಣ್ಯಕ್ಕಿದೆ. ಇಲ್ಲಿ ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆ ನಿರ್ಮಿಸಬೇಕು ಎನ್ನುವ ಸಾರ್ವಜನಿಕರ ಮನವಿಗೆ ಈವರೆಗೂ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ದೇವಸ್ಥಾನದ ಬಳಿ ಆಸ್ಪತ್ರೆಗೆ ನಿರ್ಮಿಸಲು ಬೇಕಾದ ವೆಚ್ಚಕ್ಕೆ ಯಾವುದೇ ಕೊರತೆ ಇಲ್ಲ. ಸರ್ಕಾರ ಇದಕ್ಕೆ ಸ್ಪಂದಿಸಿ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಭಕ್ತಾಧಿಗಳ ಆಗ್ರಹವಾಗಿದೆ.
ಚಿಕಿತ್ಸೆ ನೀಡಲು ಸೌಲಭ್ಯಗಳ ಕೊರತೆ
ಸುಬ್ರಹ್ಮಣ್ಯ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭಾನುಮತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿ ಸುಸಜ್ಜಿತ ಆಸ್ಪತ್ರೆಯ ಅಗತ್ಯ ಇದೆ. ಸಮುದಾಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದೆ. ಆದರೆ ಗಂಭೀರ ಆರೋಗ್ಯ ಸ್ಥಿತಿ ಆದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯ ಇಲ್ಲಿ ಇಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ್ಯ ಲಲಿತಾ ಗುಂಡಡ್ಕ ಮಾತನಾಡಿ, ಸುಬ್ರಹ್ಮಣ್ಯದಲ್ಲಿ ಆಸ್ಪತ್ರೆ ಬೇಕು ಎನ್ನುವುದು ಹಲವು ವರ್ಷಗಳಿಂದ ಜನರ ಬೇಡಿಕೆಯಾಗಿದೆ. ಪಂಚಾಯತ್ ಮಟ್ಟದಲ್ಲಿ ಈ ಪ್ರಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಅಂತಾ ಒತ್ತಾಯ ಮಾಡಿದ್ದಾರೆ.












Click it and Unblock the Notifications