ಮಂಗಳೂರು; ಮೊದಲ ಮಳೆಯ ಅನಾಹುತ, ಗಿಫ್ಟ್ ಸೆಂಟರ್‌ಗೆ ನುಗ್ಗಿದ ನೀರು
ಮಂಗಳೂರು, ಮಾರ್ಚ್ 09; ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ, ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. 2022ನೇ ಸಾಲಿನ ಮೊದಲ ಮಳೆ ಮಂಗಳೂರು ನಗರದಲ್ಲಿ ಅವಂತಾರವನ್ನು ಉಂಟು ಮಾಡಿದೆ.
ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಅಕಾಲಿಕ ಮಳೆಗೆ ಗಿಫ್ಟ್ ಸೆಂಟರ್ ಒಳಗೆ ಮಳೆ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ. ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಅಕಾಲಿಕ ಮಳೆಯಿಂದಾಗಿ ಹಂಪನಕಟ್ಟೆ ಬಳಿಯ ಅಂಗಡಿಗಳಿಗೆ ನೀರು ನುಗ್ಗಿದ್ದು, ಗಿಫ್ಟ್ ಸೆಂಟರ್ ಒಂದರಲ್ಲಿದ್ದ ವಸ್ತುಗಳು ನೀರಿನಲ್ಲಿ ಮುಳುಗಿವೆ.
ನಗರದಲ್ಲಿನ ಅವೈಜ್ಞಾನಿಕ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ನಗರದಲ್ಲಿ ಸುರಿದ ಅಕಾಲಿಕ ಮಳೆಯಿಂದ ರಸ್ತೆಯ ನೀರು ಅಂಗಡಿಯೊಳಗೆ ನುಗ್ಗಿದೆ. ಗಲ್ಲಿಟ್ರಾಪ್ ಮೂಲಕ ಚರಂಡಿಗೆ ಸೇರಬೇಕಾಗಿದ್ದ ಮಳೆ ನೀರು ಅಂಗಡಿಗೆ ನುಗ್ಗಿದ್ದು, ಕಾಮಗಾರಿ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗಡಿಯಲ್ಲಿ ಮೊಣಕಾಲಿನವರೆಗೆ ನೀರು ನಿಂತಿದ್ದು, ಅಂಗಡಿಯವರು ಬಕೆಟ್ ಮೂಲಕ ನೀರು ಹೊರ ಚೆಲ್ಲಿಲುತ್ತಿದ್ದ ದೃಶ್ಯ ಕಂಡು ಬಂತು. ಗಿಫ್ಟ್, ಫ್ಯಾನ್ಸಿ ಐಟಂಗಳು ನೀರಿನಲ್ಲಿ ಮುಳುಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಉರುಳಿ ಬಿದ್ದ ಮರಗಳು; ಮಳೆಯ ಜೊತೆಗೆ ಜೋರಾಗಿ ಗಾಳಿ ಬೀಸಿದ ಪರಿಣಾಮ ನಗರದಲ್ಲಿ ಮರಗಳು ಉರುಳಿ ಬಿದ್ದಿವೆ. ನಗರದ ರೋಝಾರಿಯೋ ರಸ್ತೆಯಲ್ಲಿ ಮರವೊಂದು ಲಾರಿಯ ಮೇಲೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಮರ ಬೀಳುತ್ತಿದ್ದಂತೆ ಲಾರಿಯಿಂದ ಹಾರಿದ ಚಾಲಕ ಪುರುಷೋತ್ತಮ ಪ್ರಾಣಾಪಾಯದಿಂದ ಪಾರಾದರು.

ಶಾಲೆ-ಕಾಲೇಜು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಬೆಳಗ್ಗೆ 9.15ರ ಸುಮಾರಿಗೆ ಮರ ಉರುಳಿ ಬಿದ್ದಿದೆ. ಮರ ಉರುಳಿ ಬಿದ್ದ ಪರಿಣಾಮ ಬಿ. ಎಸ್. ಎನ್. ಎಲ್ ಕಚೇರಿ ಕೌಪೌಂಡ್ ಗೋಡೆ ಸಹ ಕುಸಿತಗೊಂಡಿದೆ.
ಮರ ರಸ್ತೆಗೆ ಉರುಳುವ ಸಮಯದಲ್ಲಿ ರಸ್ತೆ ಖಾಲಿಯಾಗಿದ್ದರಿಂದ ದೊಡ್ಡ ಅಪಾಯ ತಪ್ಪಿದೆ. ಪಾಂಡೇಶ್ವರ ಅಗ್ನಿಶಾಮಕ ದಳದಿಂದ ಮರ ತೆರವು ಕಾರ್ಯಾಚರಣೆ ನಡೆಯಿತು. ಪಾಂಡೇಶ್ವರ ಪೊಲೀಸರು ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಂಡರು.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ಮಾರ್ಚ್ 11ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.












Click it and Unblock the Notifications