ಸಚಿವರ ಆರೋಪ: ಪರಿಷತ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ
ಮಂಗಳೂರು, ನವೆಂಬರ್ 20: ಮಂಗಳೂರು ಡಿಸಿಸಿ ಬ್ಯಾಂಕ್ ವಿರುದ್ಧ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವ್ಯವಹಾರದ ಗಂಭೀರ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಹೊರಟಿದ್ದ ದಕ್ಷಿಣ ಕನ್ನಡ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದು ಆಶ್ಚರ್ಯ ಸೃಷ್ಟಿಸಿದ್ದಾರೆ.
ಚುನಾವಣಾ ಕಚೇರಿ ಮಾಡಿ, ನವೆಂಬರ್ 23ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಅಂತಾ ಬಹಿರಂಗವಾಗಿ ಹೇಳಿಕೆ ನೀಡಿದ್ದ ರಾಜೇಂದ್ರ ಕುಮಾರ್‌ರ ಧಿಡೀರ್ ನಿರ್ಧಾರ ಬೆಂಬಲಿಗರಲ್ಲಿ ಗೊಂದಲ ಮೂಡಿಸಿದೆ.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶುಕ್ರವಾರ ಮಂಗಳೂರಿನಲ್ಲಿ ನಡೆದ ಜನಸ್ವರಾಜ್ ಯಾತ್ರೆಯಲ್ಲಿ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರವಾಗುತ್ತಿದ್ದು, ಪ್ರತಿವರ್ಷ 19 ಲಕ್ಷ ರೂಪಾಯಿ ಬ್ಯಾಂಕ್‌ನಿಂದ ನವೋದಯ ಟ್ರಸ್ಟ್‌ಗೆ ವರ್ಗಾವಣೆಯಾಗುತ್ತಿದೆ. ಇದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆಯನ್ನು ನೀಡಿದ್ದರು.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಗಂಭೀರ ಆರೋಪದ ಬೆನ್ನಲ್ಲೇ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ರಾಜೇಂದ್ರ ಕುಮಾರ್, ನಾನು ಪಕ್ಷೇತರನಾಗಿಯೇ ಸ್ಪರ್ಧೆ ಮಾಡ್ತೀನಿ ಅಂತ ಹೇಳಿದ್ದೆ. ಆದ್ರೆ ಎಲ್ಲರೂ ಕಾಂಗ್ರೆಸ್‌ನಿಂದ ಸ್ಪರ್ಧೆಯ ಭಾವನೆ ವ್ಯಕ್ತಪಡಿಸಿದರು. ಕಾಂಗ್ರೆಸ್‌ನವರು ಕೂಡ ದೂರವಾಣಿ ಸಂಪರ್ಕ ಮಾಡಿ ಕಾಂಗ್ರೆಸ್‌ನಿಂದ ನಿಲ್ಲಲು ಹೇಳಿದ್ದರು. ಆದರೆ ನಾನು ಅದಕ್ಕೆ ತಯಾರಿಲ್ಲ, ಪಕ್ಷಾತೀತವಾಗಿಯೇ ಇರುತ್ತೇನೆ ಅಂತಾ ಹೇಳಿದ್ದೆ ಎಂದರು.
"ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರದಲ್ಲಿ ಇರುವ ಕಾರಣ ಕೆಲಸ ಮಾಡಲು ಒಳ್ಳೆದಾಗುತ್ತದೆ. ಪಕ್ಷದಿಂದ ಇದ್ದರೆ ಒಂದು ವರ್ಗದ ಜನರಿಗೆ ಮಾತ್ರ ತಲುಪಲು ಆಗುತ್ತೆ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ನಾನು ಆ ಟಿಕೆಟ್ ಬಯಸಿಲ್ಲ. ಈ ಎಲ್ಲಾ ಕಾರಣದಿಂದ ನಾನು ಸದ್ಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ," ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ.

"ಜನರ ಒತ್ತಡ ಮತ್ತು ಸಹಕಾರಿ ಕ್ಷೇತ್ರದ ಧ್ವನಿಯಾಗಿ ಪರಿಷತ್‌ನಲ್ಲಿ ಇರಬೇಕು ಎಂಬ ಭಾವನೆ ಇತ್ತು. ಸಹಕಾರಿ ಕ್ಷೇತ್ರವನ್ನು ಬೆಳೆಸಿದ ರೀತಿಯಲ್ಲೇ ಪಂಚಾಯತ್ ಕ್ಷೇತ್ರ ಬೆಳೆಸಬೇಕಿತ್ತು. ಆದರೆ ರಾಜಕೀಯ ಕಾರಣದಿಂದ ನಾನು ಕಣದಿಂದ ಹಿಂದೆ ಸರಿದಿದ್ದೇನೆ. ರಾಜಕೀಯ ಒತ್ತಡ ಸಹಜ, ಎರಡೂ ಪಕ್ಷದಿಂದಲೂ ಇತ್ತು. ನಾನು ನಿಂತಿದ್ದರೆ ಎರಡೂ ಪಕ್ಷದ ಮತ ವಿಭಜನೆ ಆಗುತ್ತಿತ್ತು," ಅಂತಾ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇನ್ನು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ನಾನು ಮತ್ತು ಸಹಕಾರಿ ಸಚಿವ ಬಹಳಷ್ಟು ಆತ್ಮೀಯರು. ಆದರೆ ರಾಜಕೀಯದ ವೇದಿಕೆಯಲ್ಲಿ ಮಾತಿಗೆ ವಿಷಯ ಬೇಕು. ಅವರ ಮಾತಿನಿಂದ ನನಗೆ ಎಫೆಕ್ಟ್ ಇಲ್ಲ, ಆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಅದರಿಂದ ಏನೂ ಉಪಯೋಗವಿಲ್ಲ, ನಾವಿಬ್ಬರೂ ಯಾವತ್ತಿದ್ದರೂ ಸ್ನೇಹಿತರು," ಅಂತಾ ಸ್ಪಷ್ಟನೆ ನೀಡಿದ್ದಾರೆ.
"ನಾನು ಯಾರಿಗೂ ಬೆಂಬಲಿಸಲ್ಲ, ತಟಸ್ಥವಾಗಿರುತ್ತೇನೆ, ಪಕ್ಷ ನೋಡದೇ ಒಳ್ಳೆಯ ಕೆಲಸಕ್ಕೆ ಬೆಂಬಲ ನೀಡುತ್ತೇನೆ. ನನ್ನ ಬೆಂಬಲಿಗರಿಗೆ ನಿರಾಶೆಯಾಗಿದೆ, ಅವರಿಗೆ ವೈಯಕ್ತಿಕ ಧನ್ಯವಾದ ಸಲ್ಲಿಸುತ್ತೇನೆ," ಎಂದು ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಈ ನಡುವೆ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಸಚಿವರಾದ ಸುನೀಲ್ ಕುಮಾರ್, ಎಸ್. ಅಂಗಾರ ಸೇರಿ ಶಾಸಕರು, ನಾಯಕರ ಸಮ್ಮುಖದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, "ಅತ್ಯಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು, ನಾಯಕರ ಬೆಂಬಲದಿಂದ ಗೆಲ್ಲುತ್ತೇನೆ. ರಾಜಕೀಯ ಪಕ್ಷವಾಗಿ ನಾವು ನಿನ್ನೆ ಚುನಾವಣಾ ಪ್ರಚಾರ ಸಭೆ ಮಾಡಿದ್ದೇವೆ. ಆ ಸಭೆಯಲ್ಲಿ ಸೋಮಶೇಖರ್ ಅವರು ಮಾತನಾಡಿದ್ದಾರೆ. ಅವರ ಮಾತಿಗೂ ರಾಜೇಂದ್ರ ಕುಮಾರ್ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಕ್ಕೂ ಸಂಬಂಧ ಇದ್ಯಾ ಗೊತ್ತಿಲ್ಲ''.
"ರಾಜೇಂದ್ರ ಕುಮಾರ್ ಸ್ಪರ್ಧೆಯಿಂದ ಬಿಜೆಪಿಗೆ ಆತಂಕವಿಲ್ಲ, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಸ್ಪರ್ಧಿಸಬಹುದು. ಬಿಜೆಪಿ ಒಂದು ಸ್ಥಾನಕ್ಕೆ ಸ್ಪರ್ಧಿಸುತ್ತಿದೆ, ಅದರಲ್ಲಿ ನಾವು ಗೆಲ್ಲುತ್ತೇವೆ," ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.