ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ – ಹೊಸ ಮುಖವೊ ಹಳೆ ಹುಲಿಯೋ

By Shami
|
Google Oneindia Kannada News

Dakshina Kannada Congress ticket : Harsha Moily vs Poojari
ಮಂಗಳೂರು, ಜ. 23 : ದಕ್ಷಿಣ ಕನ್ನಡ ಎಂದು ಹೊಸ ಹೆಸರು ಪಡೆದುಕೊಂಡಿರುವ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿ ಹೊಸ ರಾಜಕೀಯ ಕದನ ಆರಂಭವಾಗಿದ್ದು, ಹಳೆಯ ರಾಜಕೀಯ ಹುಲಿ ಜನಾರ್ದನ ಪೂಜಾರಿ ಅವರು ಯುವ ಉದ್ಯಮಿ ಹರ್ಷ ಮೊಯ್ಲಿ ಎಂಬ ಯುವಕನೊಂದಿಗೆ ಟಿಕೇಟಿಗಾಗಿ ಸೆಣಸಾಡುವ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕದಲ್ಲಿ ಎಂಬಿಎ ಶಿಕ್ಷಣ ಪಡೆದು ಬ್ರಿಟನ್ ಮತ್ತು ಅಮೆರಿಕದಲ್ಲಿ ಕೃಷಿ, ಪ್ರೈವೇಟ್ ಇಕ್ವಿಟಿ, ಮೂಲಭೂತ ಸೌಕರ್ಯ ಮುಂತಾದ ಉದ್ಯಮಗಳಲ್ಲಿ ದುಡಿದು, ದೇಶದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಅನುಭವ ಪಡೆದು ಗ್ರಾಮೀಣ ಪ್ರದೇಶದ ರೈತರ ಬದುಕು ಹಸನು ಮಾಡುವ ಕಂಪನಿ ಮಾಡಿ ಯಶಸ್ವಿಯಾಗಿರುವ ಸಾಮಾಜಿಕ ಉದ್ಯಮಿ (Social Entrepreneur) ಹರ್ಷ ಮೊಯ್ಲಿ ಲೋಕಸಭಾ ಟಿಕೆಟ್ ಆಕಾಂಕ್ಷಿ.

ಈ ಸುದ್ದಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿದ್ದೆಗೆಡಿಸಿದೆ. 1977ರಿಂದ ನಾಲ್ಕು ಬಾರಿ ಗೆದ್ದು, ಮತ್ತೆ ನಾಲ್ಕು ಬಾರಿ ಸೋತು ಸುಣ್ಣವಾಗಿ ಹೋಗಿರುವ 80ರ ಹರೆಯದ ಜನಾರ್ದನ ಪೂಜಾರಿ ಅವರಿಗೆ ಮತ್ತೆ ಲೋಕಸಭೆ ಪ್ರವೇಶಿಸುವ ಹುಮ್ಮಸ್ಸಿದೆ. ಮೊನ್ನೆ ಮೊನ್ನೆವರೆಗೂ ಎಲ್ಲರೂ ಪೂಜಾರಿ ಅವರಿಗೆ ಟಿಕೆಟ್ ದೊರೆಯುತ್ತದೆ ಮತ್ತು ಬಿಜೆಪಿಯ ಗೆಲುವು ಸುಲಭವಾಗುತ್ತದೆ ಎಂದು ನಂಬಿದ್ದರು.

ಆದರೆ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ತಮ್ಮ ಪುತ್ರ ಹರ್ಷ ಮೊಯ್ಲಿಯನ್ನು ಕಳೆದ ಆರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಲು ಕಳುಹಿಸಿದ್ದಾರೆ. ಮಾತ್ರವಲ್ಲದೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಸರ್ವೆ ನಡೆಸಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿಗೆ ವರದಿ ಕಳುಹಿಸಿದ್ದಾರೆ. ಆ ವರದಿಯಲ್ಲಿ ಕಾಂಗ್ರೆಸ್ ಸತತವಾಗಿ ಯಾಕೆ ಸೋಲುತ್ತಿದೆ, ಜನಾರ್ದನ ಪೂಜಾರಿ ಅವರ ಪ್ಲಸ್ ಮತ್ತು ಮೈನಸ್ ಬಗ್ಗೆ ವಿವರಿಸಲಾಗಿದೆ. ಮಾತ್ರವಲ್ಲದೆ, ರಾಹುಲ್ ಗಾಂಧಿ ಅನುಮತಿ ಪಡೆದೇ ಹರ್ಷ ಮೊಯ್ಲಿ ರಾಜಕೀಯ ಕಣಕ್ಕಿಳಿದಿದ್ದಾರೆ.

ಹಾಗಂತ ಯಾರೂ ಕೂಡ ಪೂಜಾರಿ ಅವರನ್ನು ಕಡೆಗಣಿಸುವಂತಿಲ್ಲ. ವಿಧಾನಸಭಾ ಚುನಾವಣೆಯಾದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಪೂಜಾರಿ ಅವರನ್ನು ನೇಮಕ ಮಾಡುವ ಬಗ್ಗೆ ಸ್ವತಃ ವೀರಪ್ಪ ಮೊಯ್ಲಿ ಅವರೇ ಪೂಜಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ, ಲೋಕಸಭೆಗೆ ಸ್ಪರ್ಧಿಸುವ ಹೊರತಾಗಿ ಬೇರಾವುದೇ ನೇಮಕಕ್ಕೆ ಪೂಜಾರಿ ಸಿದ್ಧರಿರಲಿಲ್ಲ.

ಸತತವಾಗಿ ಆರು ಚುನಾವಣೆಗಳಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಸೋತಿದೆ. ನಾಲ್ಕು ಬಾರಿ ಪೂಜಾರಿ ಮತ್ತು ಎರಡು ಬಾರಿ ಮೊಯ್ಲಿ. ಕಳೆದ ಬಾರಿ ಪೂಜಾರಿ ಗೆದ್ದೇ ಗೆಲ್ಲುತ್ತಾರೆ ಎಂಬ ಪರಿಸ್ಥಿತಿಯಲ್ಲಿ ಯಾವುದೇ ಪ್ರಚಾರ ಕಾರ್ಯ ನಡೆಸದ ಪರಿಣಾಮ ಪೂಜಾರಿ ಸೋತಿದ್ದರು. ಬಿಲ್ಲವರೇ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿದ್ದು, ಅನಂತರ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು, ದಲಿತರು, ಕ್ರಿಶ್ಚಿಯನರಿದ್ದರು ಪೂಜಾರಿ ಸೋತು ಹೋಗಿದ್ದರು.

ಜನಸಂಘ ಮತ್ತು ಬಿಜೆಪಿ ಆಗಾಗ ಅಭ್ಯರ್ಥಿಯನ್ನು ಬದಲಾಯಿಸಿದ ಪರಿಣಾಮ ಮಂಗಳೂರಿನಲ್ಲಿ ಗೆಲ್ಲಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ಮೊದಲಿಗೆ ಎ.ಕೆ.ಸುಬ್ಬಯ್ಯ ಜನಸಂಘದ ಅಭ್ಯರ್ಥಿಯಾಗಿದ್ದರೆ ಅನಂತರ ಕರಂಬಳ್ಳಿ ಸಂಜೀವ ಶೆಟ್ಟಿ, ಉರಿಮಜಲು ರಾಮಭಟ್ಟ, ಧನಂಜಯ ಕುಮಾರ್, ಡಿ.ವಿ. ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಹೀಗೆ ಐದು ಮಂದಿಯನ್ನು ಕಣಕ್ಕಿಳಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಎಂಟು ಬಾರಿ ಜನಾರ್ದನ ಪೂಜಾರಿ ಮತ್ತು ಎರಡು ಬಾರಿ ವೀರಪ್ಪ ಮೊಯ್ಲಿ ಅವರನ್ನು ಕಣಕ್ಕಿಳಿಸಿ ಹೊಸ ಮುಖಗಳಿಗೆ ಅವಕಾಶವನ್ನು ನೀಡಲೇ ಇಲ್ಲ. ಕಳೆದ ಬಾರಿ ಬಿಲ್ಲವ ಸಮುದಾಯದವರೇ ಆದ ವಿನಯ ಕುಮಾರ್ ಸೊರಕೆ ಪ್ರಬಲ ಆಕಾಂಕ್ಷಿಯಾಗಿದ್ದರು ಪೂಜಾರಿ ಅವರು ಅವರಿಗೆ ಅವಕಾಶ ನೀಡಲಿಲ್ಲ.

ಜನಾರ್ದನ ಪೂಜಾರಿ ಅವರು ಯುವಕರಿಗೆ ಅವಕಾಶ ಬಿಟ್ಟು ಕೊಡಬೇಕು. ಆ ಕೆಲಸವನ್ನು ಪೂಜಾರಿ ಅವರು ಮಾಡುತ್ತಿಲ್ಲ ಎಂದು ಮೂರು ದಿವಸಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಯುವವಾಹಿನಿ ಸಮಾರಂಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು. ಇದು ಅಕ್ಷರಶಃ ನಿಜ ಎನ್ನುತ್ತಾರೆ ಕಾಂಗ್ರೆಸ್ ಬೆಂಬಲಿಗರಾದ ಬಿಲ್ಲವರ ಯುವಕರು. ಹಳೆಯ ಕಾಲದ ರಾಜಕೀಯ ಸಿದ್ಧಾಂತ ಅನುಸರಿಸುತ್ತಿರುವ ಪೂಜಾರಿ ಅವರು ತಾನೊಬ್ಬನೇ ಬಿಲ್ಲವ ಅಂದುಕೊಂಡಿದ್ದಾರೆ.

ಅವರ ಕಾಲ ಮುಗಿದಿದೆ ಎಂದು ಅವರಿಗೆ ಗೊತ್ತಾಗುತ್ತಿಲ್ಲ. ಈಗ ಏನಿದ್ದರೂ ಯುವಕರ ಜಮಾನ. ಜಾತಿ, ಮತ ಸಮಸ್ಯೆ ಇಲ್ಲ. ಜನಾರ್ದನ ಪೂಜಾರಿ ಅವರು ಬದಲಿ ಮುಖಂಡನನ್ನು ಪರಿಚಯಿಸಿದೇ ಇರುವ ಕಾರಣ ಇಂದು ಹರ್ಷ ಮೊಯ್ಲಿಗೆ ಅವಕಾಶ ಸಿಕ್ಕಿದೆ ಎನ್ನುತ್ತಾರೆ ಬಿಲ್ಲವ ಯುವಕರು. ಹರ್ಷ ಮೊಯ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಗ ಮಾತ್ರ ಅಲ್ಲ. ವಿದೇಶದಲ್ಲಿ ಕಲಿತು, ಉದ್ಯೋಗ ಮಾಡಿದಲ್ಲದೆ ಸ್ವದೇಶದಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಮೋಕ್ಷ ಯುಗ ಆಕ್ಸೆಸ್ ಎಂಬ ಕಂಪನಿ ಮಾಡಿ ಯಶಸ್ಸು ಕಂಡಿದ್ದಾನೆ. ಕಾರ್ಯಕರ್ತರನ್ನು ಶಕ್ತರನ್ನಾಗಿ ಮಾಡಬೇಕೆಂಬ ಹಂಬಲ ಇದೆ. ದೊಡ್ಡ ಪ್ರಮಾಣದ ಯುವ ಮತದಾರರನ್ನು ತಲುಪುವ ಸಂಪರ್ಕ ಸಾಮರ್ಥ್ಯ ಹರ್ಷನಲ್ಲಿದೆ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ಸಿಗ ತೇಜೋಮಯ ಪೂಜಾರಿ.

ಹರ್ಷ ಮೊಯ್ಲಿಗೆ ಟಿಕೆಟ್ ನೀಡಿದರೆ ಬಿಲ್ಲವ ಸಮುದಾಯ ತಿರುಗಿ ಬೀಳಬಹುದು ಎನ್ನಲಾಗುತ್ತಿದೆ. ಬಿಲ್ಲವರು ಕಾಂಗ್ರೆಸ್ ಪಕ್ಷವನ್ನು ಅಥವಾ ಪೂಜಾರಿ ಅವರು ಬೆಂಬಲಿಸುವುದೇ ಆದರೆ ಕಾಂಗ್ರೆಸ್ ಯಾಕೆ ಸತತವಾಗಿ ಆರು ಬಾರಿ ಸೋತು ಹೋಯಿತು ಎಂಬ ಜಿಜ್ಞಾಸೆ ಉಂಟಾಗುತ್ತದೆ. ಕಟ್ಟಾ ಕಾಂಗ್ರೆಸ್ಸಿಗರು ಪಕ್ಷಕ್ಕೆ ಓಟು ಕೊಡುತ್ತಾರೆ. ಇನ್ನು ಬಿಲ್ಲವರ ಮತಗಳು ವಾಸ್ತವವಾಗಿ ಬಿಜೆಪಿ ಮತಗಳೇ ಆಗಿರುತ್ತವೆ. ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ನಡೆದರೆ ದಲಿತ, ಅಲ್ಪಸಂಖ್ಯಾತ ಮತಗಳೊಂದಿಗೆ ಕಾಂಗ್ರೆಸ್ ಬಿಲ್ಲವ, ಬಂಟ, ಹಿಂದುಳಿದ ವರ್ಗಗಳ ಮತ ದೊರಕಿದರೆ ಕಾಂಗ್ರೆಸ್ ಗೆಲುವು ಸುಲಭ.

ಪೂಜಾರಿ ಸೋಲುವ ಮುಖ್ಯ ಕಾರಣಗಳು ಎರಡು. ಮೊದಲನೆಯದಾಗಿ ಅವರ ಬೆಂಬಲಿಗರ ಮೈಗಳ್ಳತನ ಮತ್ತು ಪ್ರಚಾರ ವೈಫಲ್ಯ. ಪೂಜಾರಿ ಅವರಿಗೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕದ ಕೊರತೆ, ಚುನಾವಣೆಗೆ ಮುನ್ನ ಮತದಾರರ ನೋಂದಾವಣೆ ಆಗದಿರುವುದು, ಕಾರ್ಯತಂತ್ರ, ಮನೆ ಮನೆ ಭೇಟಿ ಇಲ್ಲದಿರುವುದು ಮತ್ತು ಅಂತಿಮವಾಗಿ ಪೊಲಿಂಗ್ ಏಜೆಂಟ್ ಬೂತುಗಳಲ್ಲಿ ಇಲ್ಲದಿರುವುದು - ಪೂಜಾರಿ ಸೋಲಿಗೆ ಪ್ರಮುಖ ಕಾರಣಗಳು.

ಈ ಕಾರಣಗಳಿಂದಾಗಿಯೇ ಹರ್ಷ ಮೊಯ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಈಗಾಗಲೇ ಎರಡು ಸುತ್ತಿನ ಕ್ಷೇತ್ರ ಪರ್ಯಟನೆ ಮಾಡಿರುವ ಹರ್ಷ ಮೊಯ್ಲಿ ಕಾರ್ಯಕರ್ತರೊಂದಿಗೆ ಬೆರೆತು ಅವರಲ್ಲಿ ಒಂದು ಭರವಸೆ ಮೂಡಿಸಿದ್ದಾರೆ. ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪೆನಿಗಳಲ್ಲಿ ದುಡಿದ ಅನುಭವ ಇರುವ ಉದ್ಯಮಿಯ ಕಾರ್ಯತಂತ್ರ, ಅನುಷ್ಠಾನ ಕೂಡ ವ್ಯವಸ್ಥಿತವಾಗಿರುತ್ತದೆ.

ಅಂತಿಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ, ಬ್ಲಾಕ್ ಅಧ್ಯಕ್ಷ, ಜಿಲ್ಲಾ ಪದಾಧಿಕಾರಿ, ಶಾಸಕ, ಸಚಿವರಿಗೆ ಹೊಸ ಮುಖ ಸ್ಪರ್ಧಿಸಲಿ ಎಂಬ ಪ್ರಬಲ ಆಕಾಂಕ್ಷೆ ಇರುವುದು ಎದ್ದು ಕಾಣುತ್ತದೆ. ಜಿಲ್ಲೆಯ ಎಂಟರಲ್ಲಿ ಏಳು ಮಂದಿ ಕಾಂಗ್ರೆಸ್ ಶಾಸಕರಿದ್ದು ಬಹುತೇಕ ಮಂದಿ ಹೊಸ ಮುಖಕ್ಕೆ ಮಣೆ ಹಾಕಲು ಮುಂದಾಗಿದ್ದಾರೆ ಎಂಬುದು ಪೂಜಾರಿ ಅವರನ್ನು ನಿದ್ದೆಗೆಡಿಸಿದ ವಿಚಾರ.

ಹಾಲಿ ಸಂಸದ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಎದುರು ಹರ್ಷ ಮೊಯ್ಲಿ ಮಾತ್ರವಲ್ಲ, ಯಾವುದೇ ಹೊಸ ಮುಖವಾದರು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದರೆ, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಅಭ್ಯರ್ಥಿಗಳಾದರೆ ಸೋಲು ಕಟ್ಟಿಟ್ಟ ಬುತ್ತಿ, ಏಕೆಂದರೆ, ಈ ತ್ರಿಮೂರ್ತಿಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ರೋಷ, ದ್ವೇಷ ಮಡುಗಟ್ಟಿದೆ.

English summary
New face vs Old war horse. UPA Minister Veerappa Moilys son Harsha Moily set to get Cong ticket to contest from Dakshina Kannada Lok Sabha Constituency. Veteran congressmen Janardhana Poojari upset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X