'ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರದ ಕಮ್ಯುನಿಸ್ಟರು ಗೋಸುಂಬೆತನ ತೋರಿಸುತ್ತಿದ್ದಾರೆ'
ಮಂಗಳೂರು, ನವೆಂಬರ್. 14: ಶಬರಿಮಲೆ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನೆ ಅರ್ಜಿ ಸ್ವೀಕರಿಸಿರುವುದು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಸುಪ್ರೀಂಕೋರ್ಟ್ ಈ ಹಿಂದಿನ ಆದೇಶಕ್ಕೆ ತಡೆಯಾಜ್ಞೆ ನೀಡದಿರುವುದು ಮತ್ತು ಎರಡು ತಿಂಗಳು ಭಕ್ತರನ್ನು ಆತಂಕದಲ್ಲಿಡುವ ಕೆಲಸ ಯಾಕೆ ಮಾಡಿತು ಅನ್ನುವುದು ಅರ್ಥವಾಗಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಬರಿಮಲೆಯಲ್ಲಿ ಜನವರಿ 21ರೊಳಗೆ ಮಂಡಲ ಪೂಜೆ ಹಾಗೂ ಜ್ಯೋತಿ ನಡೆಯಲಿದೆ. ಸುಪ್ರೀಂ ಕೋರ್ಟ್ ನೀಡಿರುವ ಹಿಂದಿನ ತೀರ್ಪಿಗೆ ತಡೆಯಾಜ್ಞೆ ನೀಡಿದ್ದರೆ ಆತಂಕ, ಗೊಂದಲ ಇಲ್ಲದೆ ಶಬರಿಮಲೆಗೆ ಹೋಗಿ ಬರೋದಿಕ್ಕೆ ಸಾಧ್ಯವಾಗುತ್ತಿತ್ತು.
ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಕೆಲಸ ನ್ಯಾಯಯುತವಾಗಿ ಕೇರಳ ಸರಕಾರ ಮಾಡಬೇಕಿದೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ ಅಂತಿದ್ದರೆ ಕೋರ್ಟ್ ಸಂವಿಧಾನಾತ್ಮಕವಾಗಿ ತೀರ್ಪು ಕೊಡುವುದರಲ್ಲಿ ನ್ಯಾಯವಿದೆ ಎಂದರು.

ಮಹಿಳೆಯರಿಗೆ ಪ್ರವೇಶವಿಲ್ಲ ಎಂದರ್ಥವಲ್ಲ
ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲವೆಂಬ ಕಾಲ ಇವತ್ತು ಎಲ್ಲೂ ಇಲ್ಲ. ಹಾಗೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೂ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಇಲ್ಲ. ಎಲ್ಲಾ ವಯೋಮಿತಿಯ ಮಹಿಳೆಯರು ತೆರಳುವಂತಿಲ್ಲ ಎಂಬ ಪ್ರತೀತಿ ಇದೆ ಅಷ್ಟೆ. ಅದು ಬಿಟ್ಟು ಮಹಿಳೆಯರೇ ಬರಬಾರದೆಂಬುದು ಇಲ್ಲ ಎಂದು ಶಾಸಕರು ತಿಳಿಸಿದರು.

ಕಟ್ಟುಪಾಡಿನ ದೃಷ್ಟಿಯಿಂದ ಸರಿಯಲ್ಲ
ಕಟ್ಟುನಿಟ್ಟಾಗಿ ವ್ರತಾಚರಣೆ ಮಾಡಿ ಹೋಗಬೇಕಾದ್ದರಿಂದ ಈ ಪದ್ಧತಿ ರೂಪುಗೊಂಡಿದೆ ಎಂದು ಹೇಳಿದ ರವಿ ಅವರು ಅದನ್ನು ಆಲೋಚನೆ ಮಾಡದೆ ತೀರ್ಪು ನೀಡಿರುವಂತದ್ದು ದೇವಳದ ಕಟ್ಟುಪಾಡಿನ ದೃಷ್ಠಿಯಿಂದ ಸರಿಯಲ್ಲ.

ರಥಯಾತ್ರೆ ಕೈಗೊಂಡು ಸಮಾರೋಪವಾಗಿದೆ
ಪುನರ್ ವಿಮರ್ಶೆ ಸಂದರ್ಭ ಕೇರಳ ಸರಕಾರ ಬಾರದಿರುವುದು ಕಮ್ಯುನಿಷ್ಟರ ಗೋಸುಂಬೆತನ ತೋರಿಸುತ್ತಿದೆ. ತೀರ್ಪಿಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಬಿಜೆಪಿ ಪ್ರಮುಖರು ಚರ್ಚೆ ಮಾಡುತ್ತೇವೆ. ಭಕ್ತರ ಹಿತದೃಷ್ಟಿಯಿಂದ ಈಗಾಗಲೇ ರಥಯಾತ್ರೆ ಕೈಗೊಂಡು ಸಮಾರೋಪವಾಗಿದೆ ಎಂದು ಸಿಟಿ ರವಿ ತಿಳಿಸಿದರು.

ನಾವು ಚರ್ಚೆ ನಡೆಸುತ್ತೇವೆ
ಸಾಧಕ-ಬಾಧಕಗಳ ಕುರಿತು ನಾವು ಚರ್ಚೆ ನಡೆಸುತ್ತೇವೆ ಎಂದ ರವಿ ಅವರು ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳ ಪ್ರತಿನಿಧಿಗಳ ಜತೆ ಈ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.











Click it and Unblock the Notifications