ನಳಿನ್ ಕುಮಾರ್ ಕಟೀಲ್ ಹೇಳಿದಂತೆ 1 ಡಾಲರ್‌ಗೆ 20 ರೂ. ಆಗಿದ್ಯಾ?: ಯು.ಟಿ. ಖಾದರ್ ವ್ಯಂಗ್ಯ
ಮಂಗಳೂರು, ಏಪ್ರಿಲ್ 25: ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಕಾಂಗ್ರೆಸ್ ಇಬ್ಭಾಗ ಆಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಲೇವಡಿ ಮಾಡಿದ್ದಾರೆ.
"ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಂತಿಲ್ಲ. ನಳಿನ್ ಕುಮಾರ್ ಕಟೀಲ್ ಅವರು ಡಾಲರ್‌ಗೆ 20 ರೂ. ಮಾಡುತ್ತೇವೆ ಅಂತಾ ಹೇಳಿದ್ದಾರೆ. ಮರಳನ್ನು ಎರಡು ಸಾವಿರ ರೂ.ಗೆ ಸಿಗುವ ಹಾಗೆ, ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದರು. ಇದರಲ್ಲಿ ಏನಾದರೂ ಆಯ್ತಾ?," ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.

ಎರಡು ವರ್ಷದಲ್ಲಿ ನಮ್ಮ ಜಿಲ್ಲೆಗೆ ಏನಾದರೂ ಆಗಿದ್ಯಾ?
"ಇಂತಹ ಬಹಳಷ್ಟು ಹೇಳಿಕೆ ಬಂದಿದೆ. ಹಿಂದೆ ಎಲ್ಲಾ ಅವರ ಹೇಳಿಕೆ ನೋಡಿಕೊಂಡು ಬಂದಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ಮುಟ್ಟಿಸುತ್ತೇವೆ, ಅದು ಎಲ್ಲಿದೆ, ಬಂದಿದ್ಯಾ? ಕರಾವಳಿಗೆ ಪ್ರತ್ಯೇಕ ಮರಳು ನೀತಿ ಹೇಳಿದ್ದರು, ಕೊನೆಗೆ ನಮಗೆ ಮರಳೇ ಇಲ್ಲ. ಎರಡು ವರ್ಷದಲ್ಲಿ ನಮ್ಮ ಜಿಲ್ಲೆಗೆ ಏನಾದರೂ ಆಗಿದ್ಯಾ? ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಸಾಕಷ್ಟು ಹೇಳಿದ್ದಾರೆ, ಯಾವುದೂ ಆಗಿಲ್ಲ ಹೀಗಾಗಿ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಿಲ್ಲ," ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಮುಸ್ಲಿಂ ಮಾಲೀಕತ್ವದ ಮಳಿಗೆಗಳಲ್ಲಿ ಚಿನ್ನಾಭರಣ ಖರೀದಿ ಮಾಡದಂತೆ ಅಭಿಯಾನ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ. ಖಾದರ್, "ಈ ರೀತಿ ಕರೆ ನೀಡಿದರೂ ಸರ್ಕಾರ ಮೌನವಾಗಿರುವುದೇ ಸಮಸ್ಯೆ. ಬೇಕಾಬಿಟ್ಟಿ ಮಾತನಾಡುವುದಕ್ಕೆ ಅವಕಾಶ ಕೊಟ್ಟಿರುವುದೇ ಸಮಸ್ಯೆಯಾಗಿದೆ," ಎಂದು ಕಿಡಿಕಾರಿದರು.

ವಿಶ್ವದ ಯಾವುದೇ ರಾಷ್ಟ್ರದಲ್ಲಿ ಈ ಸಮಸ್ಯೆ ಇಲ್ಲ
"ಮಾತನಾಡುವುದನ್ನು ಮೌನವಾಗಿ ಕೇಳಿದ ಸರ್ಕಾರದ ಸಮಸ್ಯೆಯಾಗಿದ್ದು, ಮಾತನಾಡುವವರು ಸಮಸ್ಯೆ ಅಲ್ಲ. ವಿಶ್ವದ ಯಾವುದೇ ರಾಷ್ಟ್ರದಲ್ಲಿ ಈ ಸಮಸ್ಯೆ ಇಲ್ಲ. ಬೇರೆ ಜಾತಿ- ಧರ್ಮದವರ ಜೊತೆ ವ್ಯಾಪಾರ ಮಾಡಬೇಡಿ ಅನ್ನುವ ಸಮಸ್ಯೆ ಇಲ್ಲ. ಕರ್ನಾಟಕದ ಹಲವು ಜನ ಬೇರೆ ಬೇರೆ ದೇಶದಲ್ಲಿದ್ದಾರೆ. ಇಡೀ ವಿಶ್ವದ ಯಾವುದೇ ಕಡೆಯಲ್ಲಿ ಈ ರೀತಿಯ ಅಭಿಯಾನ ನಡೆದಿಲ್ಲ. ಸರ್ಕಾರದ ಮೌನವೇ ದೇಶಕ್ಕೆ ನಷ್ಟ ತರುತ್ತದೆ. ಇದು ಕೇವಲ ನಮ್ಮ ದೇಶದಲ್ಲಿ ನಡೀತಾ ಇದೆ. ಇದರಿಂದ ದೇಶಕ್ಕೆ ನಷ್ಟ, ಬೇರೆ ದೇಶದ ಎದುರು ನಮ್ಮ ಘನತೆ ಗೌರವ ಏನಾಗಬಹುದು ಯೋಚಿಸಲಿ," ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವುದನ್ನು ವಿಪಕ್ಷ ಉಪನಾಯಕ ಯು.ಟಿ. ಖಾದರ್ ವಿರೋಧಿಸಿದ್ದಾರೆ. ಪಿಎಸ್‌ಐ ಅಕ್ರಮ ನೇಮಕದ ಬಗ್ಗೆ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಅಧಿಕಾರಿಗಳ ಬೆಂಬಲ ಇಲ್ಲದೆ ಈ ನೇಮಕಾತಿ ಸಾಧ್ಯವಿಲ್ಲ, ನೇಮಕಾತಿ ಮುಖ್ಯಸ್ಥ ಯಾರು? ಇದನ್ನು ತನಿಖೆ ಮಾಡಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡುತ್ತಾರೆ. ಈ ಬೆದರಿಕೆಗೆ ಕಾಂಗ್ರೆಸ್ ಬಗ್ಗಲ್ಲ ಮತ್ತು ಹೆದರುವುದೂ ಇಲ್ಲ ಎಂದರು.

ಹೇಳಿದವರಿಗೆ ನೋಟಿಸ್ ಕೊಡುವುದು ಸರ್ಕಾರದ ವ್ಯವಸ್ಥೆಯಾ
ಪ್ರಿಯಾಂಕ್ ಖರ್ಗೆ ಸಾರ್ವಜನಿಕವಾಗಿ ಇರುವ ಮಾಹಿತಿಯನ್ನೇ ಕೊಟ್ಟಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಬಂದ ವಿಚಾರವನ್ನೇ ಅವರು ಮಾತನಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇಲ್ಲವಾ? ಇದು ಗುಪ್ತಚರ ವೈಫಲ್ಯ. ಪ್ರಕರಣದ ತನಿಖೆ ಮಾಡುವ ಬದಲು ಹೇಳಿದವರಿಗೆ ನೋಟಿಸ್ ಕೊಡುವುದು ಸರ್ಕಾರದ ವ್ಯವಸ್ಥೆಯಾ?. ಸರ್ಕಾರದ ಜೊತೆ ಯಾರು ಕೂಡ ಮಾತನಾಡದಂಥ ಪ್ರಯತ್ನ ಮಾಡುತ್ತಿದ್ದಾರೆ, ಅದನ್ನು ಕಾಂಗ್ರೆಸ್ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಜನ ಕೂಡ ಈ ಸರ್ಕಾರವನ್ನು ಕ್ಷಮಿಸಲ್ಲ ಎಂದು ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಬ್ಲ್ಯುಡಿಯಲ್ಲೂ ಬ್ಲೂಟೂತ್ ಬಳಸಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರ ಇರುವಾಗಲೇ ಇದೆಲ್ಲ ಯಾಕೆ ಆಗುತ್ತೆ. ಇಲಾಖೆ ಮೇಲೆಯೇ ಈ ಬಗ್ಗೆ ತನಿಖೆ ಆಗಲಿ, ಮುಖ್ಯಸ್ಥರನ್ನು ಕರೆಸಿ ಕೇಳಲಿ. ಪೊಲೀಸ್ ಇಲಾಖೆ ಮೇಲೆ ಪೊಲೀಸ್ ಇಲಾಖೆ ತನಿಖೆ ಮಾಡಿದರೆ ನ್ಯಾಯ ಸಿಗುತ್ತದಾ?. ನ್ಯಾಯಾಂಗ ತನಿಖೆ, ನಿವೃತ್ತ ನ್ಯಾಯಾಧೀಶರ ಮೂಲಕ ಅಥವಾ ಸಿಬಿಐ ತನಿಖೆಗೂ ಕೊಡಲಿ ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆ ಮೂಲಕ ತನಿಖೆ ಮಾಡಿದರೆ ನ್ಯಾಯ ಸಿಗುತ್ತದಾ?
ನೇಮಕಾತಿ ಮುಖ್ಯಸ್ಥ ಯಾರು? ಸಿಐಡಿ ಮುಖ್ಯಸ್ಥ ಯಾರು? ಇದರಿಂದ ಏನಾಗುತ್ತದೆ. ಪೊಲೀಸ್ ಇಲಾಖೆ ಮೇಲಾಧಿಕಾರಿಗಳ ಬೆಂಬಲ ಇಲ್ಲದೇ ಅಕ್ರಮ ಆಗಲು ಸಾಧ್ಯವಿಲ್ಲ. ಮತ್ತೆ ಅದನ್ನು ಪೊಲೀಸ್ ಇಲಾಖೆ ಮೂಲಕ ತನಿಖೆ ಮಾಡಿದರೆ ನ್ಯಾಯ ಸಿಗುತ್ತದಾ?. ನೋಟಿಸ್ ಕೊಟ್ಟ ಉದ್ದೇಶ ಏನು? ಖರ್ಗೆ ಅದನ್ನು ಸೃಷ್ಟಿ ಮಾಡಿದರೇ ಎಂದು ಯು.ಟಿ. ಖಾದರ್ ಅಸಮಾಧಾನ ಹೊರಹಾಕಿದರು.
ಸರ್ಕಾರದ ವೈಫಲ್ಯ ಇದೆ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಇಲಾಖೆ ವೈಫಲ್ಯವಿದೆ. ಪೊಲೀಸ್ ಇಲಾಖೆಗೆ ಸಿಗದ್ದು ರಾಜಕೀಯ ನಾಯಕರಿಗೆ ಸಿಗುತ್ತದೆ ಅಂದರೆ ಅದು ಸರ್ಕಾರದ ವೈಫಲ್ಯ. ಸಾಕ್ಷ್ಯವನ್ನು ಅವರಿಗೆ ಕೊಡಲೇಬೇಕು ಅಂತ ಏನೂ ಇಲ್ಲ. ಇದಕ್ಕೂ ಮುನ್ನ ಆರೋಪ ಮಾಡಿದ ಎಲ್ಲರಿಗೂ ನೋಟಿಸ್ ಜಾರಿಯಾಗಿದ್ಯಾ?. ಪ್ರಿಯಾಂಕ್‌ಗೆ ನೋಟಿಸ್ ಕಳಿಸಿರುವುದು ಅವರು ತಪ್ಪು ಮಾಡಿದ್ದಾರೆ ಅಂತ ಬಿಂಬಿಸುವ ಪ್ರಯತ್ನ. ಈ ಮೂಲಕ ಸರ್ಕಾರದ ವೈಫಲ್ಯ ಮುಚ್ಚಿ ಹಾಕುವ ಯತ್ನವೆಂದು ಯು.ಟಿ. ಖಾದರ್ ಆರೋಪಿಸಿದರು.












Click it and Unblock the Notifications