ಇನ್ನು ಪ್ರತೀ ಶನಿವಾರ ದಕ್ಷಿಣ ಕನ್ನಡ ಶಾಲೆಗಳಲ್ಲಿ ಫುಲ್ ಕ್ಲಾಸ್
ಮಂಗಳೂರು ಆಗಸ್ಟ್ 24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ 6 ದಿನಗಳ ಕಾಲ ರಜೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಠ್ಯದ ಕೊರತೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು. ಇನ್ನು ಪ್ರತೀ ಶನಿವಾರ ಪೂರ್ಣ ತರಗತಿಗಳು ನಡೆಯಲಿವೆ.
ಪ್ರತಿ ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸಲು ಈಗಾಗಲೇ ಶಿಕ್ಷಣ ಇಲಾಖೆಯು ಶಾಲೆಗಳಿಗೆ ಸೂಚನೆ ನೀಡಿದ್ದು, ಇಂದಿನಿಂದ ಶಾಲೆಗಳಲ್ಲಿ ಪೂರ್ಣ ತರಗತಿಗಳು ನಡೆಯಲಿವೆ.
ಭಾನುವಾರ ತರಗತಿ ನಡೆಸುವ ಕುರಿತು ಶಿಕ್ಷಕರ ವಲಯದಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ಮಾತ್ರ ಈ ವಿಶೇಷ ತರಗತಿಗಳು ನಡೆಯಲಿವೆ. ಆದರೆ ಭಾನುವಾರ ಯಾವುದೇ ತರಗತಿಗಳು ನಡೆಯುವುದಿಲ್ಲ ಎಂದು ದಕ್ಷಿಣ ಕನ್ನಡ ಡಿ.ಡಿ.ಪಿ.ಐ.ವೈ. ಶಿವರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಒಟ್ಟು 13 ಶನಿವಾರ, ಉಳಿದ ಕಡೆಗಳಲ್ಲಿ 12 ಶನಿವಾರ ಮಧ್ಯಾಹ್ನದ ತರಗತಿಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದ್ದ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರು.












Click it and Unblock the Notifications