ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ನೀತಿ ಸಂಹಿತೆ ಉಲ್ಲಂಘನೆ
ಮಂಗಳೂರು, ಮಾರ್ಚ್ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕಡೆ ರಾಜಕೀಯ ಮುಖಂಡರ ಭಾವಚಿತ್ರ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಚೇಂಬರ್‌ನಲ್ಲೇ ಸಿಎಂ-ಪಿಎಂ ಫೋಟೋ ಇನ್ನೂ ಇರುವುದು ಚರ್ಚೆಗೆ ಗ್ರಾಸವಾಗಿದೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೋ ಇನ್ನೂ ಹಾಕಲಾಗಿದೆ. ನಿಯಮದ ಪ್ರಕಾರ ರಾಜಕೀಯ ವ್ಯಕ್ತಿಗಳ ಫೋಟೋ ಅಳವಡಿಸಬಾರದು. ಈಗಾಗಲೇ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಡಿ.ಸಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಆದರೆ ಅವರ ಕಚೇರಿಯಲ್ಲೇ ನಿಯಮ ಉಲ್ಲಂಘನೆ ಮಾಡಲಾಗಿದೆ.

ಇನ್ನು ಚುನಾವಣಾ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ರವಿಕುಮಾರ್, ದ.ಕ.ಜಿಲ್ಲೆಯಲ್ಲಿ ದಾಖಲೆಗಳಿಲ್ಲದ 10 ಲಕ್ಷ ರೂ. ನಗದು, 200 ಲೀಟರ್ ಲಿಕ್ಕರ್ ಹಾಗೂ 65ಕಜಿ ಡ್ರಗ್ಸ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು.
ಕೋಲ, ನೇಮ, ಯಕ್ಷಗಾನ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಸಲು ಚುನಾವಣಾ ನೀತಿಸಂಹಿತೆಯಂತೆ ಯಾವುದೇ ಅಡ್ಡಿ ಇಲ್ಲ. ಆದರೆ ಇಲ್ಲಿ ಬ್ಯಾನರ್ ಅಳವಡಿಸಬೇಕಿದ್ದಲ್ಲಿ ಸ್ಥಳೀಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಮೈಕ್‌ಗಳ ಬಳಕೆಗೆ ಪೊಲೀಸ್ ಅನುಮತಿ ಅಗತ್ಯ ಎಂದು ತಿಳಿಸಿದರು.
ದ.ಕ ಜಿಲ್ಲೆಯ ಮತದಾರರ ವಿವರ
ದ.ಕ ಜಿಲ್ಲೆಯಲ್ಲಿ 17,58,647 ಮತದಾರರಿದ್ದಾರೆ. ಅದರಲ್ಲಿ 8,60,396 ಪುರುಷರು, 8,98,176 ಮಹಿಳೆಯರು ಹಾಗೂ 75 ಮಂದಿ ತೃತೀಯ ಲಿಂಗಿಗಳು ಇದ್ದಾರೆ. ಇದರಲ್ಲಿ ಜಿಲ್ಲೆಯಾದ್ಯಂತ 18-19 ವರ್ಷದ ಯುವ ಮತದಾರರ ಸಂಖ್ಯೆ 33,577 ಇದೆ. ಜಿಲ್ಲೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿಯಾಗಿ ದ.ಕ.ಜಿಪಂ ಸಿಇಒ ಡಾ.ಕುಮಾರ್ ಅವರನ್ನು ನೇಮಿಸಲಾಗಿದೆ.

29 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಜೊತೆಗೆ ಕೆಲವೊಂದು ಪ್ರದೇಶಗಳಲ್ಲಿ ಮೊಬೈಲ್ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುತ್ತದೆ. ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ದೂರುಗಳನ್ನು ಸ್ವೀಕರಿಸಲು 24 ಗಂಟೆಗಳ ಕಾಲ ಕಾರ್ಯಾಚರಣೆ ಮಾಡುವ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಚುನಾವಣಾ ಸಂಬಂಧ ನೀತಿಸಂಹಿತೆ ಉಲ್ಲಂಘನೆಯಾದ ಪ್ರಕರಣಗಳಿದ್ದಲ್ಲಿ 1950 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು. ಅಲ್ಲದೆ C-VIGIL ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಮೂಲಕವೂ ದೂರು ನೀಡಬಹುದು ಎಂದರು.
ಅನಧಿಕೃತ ಬ್ಯಾನರ್‌ಗಳ ತೆರವು
ಒಂದು ವಾರದಿಂದ ಮಾರ್ಚ್ 29ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ 507 ಗೋಡೆ ಬರಹಗಳು, 1421 ಪೋಸ್ಟರ್ ಗಳು, 1,746 ಬ್ಯಾನರ್ ಗಳು, ಇತರೆ 634 ಸೇರಿದಂತೆ ಒಟ್ಟು 4,308 ಪ್ರಕರಣಗಳಲ್ಲಿ ಬ್ಯಾನರ್ ಗಳನ್ನು ತೆಗೆಯಲಾಗಿದೆ. ಜೊತೆಗೆ ಒಂದು ಪ್ರಕರಣ ದಾಖಲಾಗಿದೆ. ಖಾಸಗಿ ಸ್ಥಳಗಳಲ್ಲಿರುವ 21 ಗೋಡೆಬರಹಗಳು, 172 ಪೋಸ್ಟರ್ , 184 ಬ್ಯಾನರ್ , ಇತರೆ 17 ಸೇರಿದಂತೆ ಒಟ್ಟು 494 ಪ್ರಕರಣಗಳಲ್ಲಿ ಬ್ಯಾನರ್ ಗಳನ್ನು ತೆಗೆಯಲಾಗಿದೆ. ಕೃಷಿಕರಿಗೆ ಬೆಳೆಗಳ ರಕ್ಷಣೆಗೆ ಹಾಗೂ ಸ್ವಯಂ ರಕ್ಷಣೆಗೆ ನೀಡಲಾಗಿರುವ ಗನ್‌ಗಳನ್ನು ಸಂಬಂಧಪಟ್ಟವರು ಸ್ಥಳೀಯ ಠಾಣೆ, ಅಧಿಕೃತ ವಿತರಕರ ಬಳಿ ನಿನ್ನೆಯಿಂದ 10ದಿನಗಳೊಳಗೆ ಡೆಪಾಸಿಟ್ ಮಾಡಬೇಕು ಎಂದು ತಿಳಿಸಿದರು.

ಈಗಾಗಲೇ ಇವಿಎಂಗಳು ಬಂದಿದೆ. ಏ.5ರಂದು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸಲಾಗುತ್ತದೆ. ಮೂರು ವಿಭಾಗದ ರಕ್ಷಣೆ ನೀಡಲಾಗುತ್ತದೆ. ಪ್ಯಾರಾ ಮಿಲಿಟರಿ ಪಡೆ,ರಾಜ್ಯ ಪೊಲೀಸ್ ಮತ್ತು ಸಿವಿಲ್ ಪೊಲೀಸ್ ಭದ್ರತೆ ಒದಗಿಸಲಿದ್ದಾರೆ. ಚುನಾವಣೆ ನಿಮಿತ್ತ 16 ತಂಡಗಳ ರಚನೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅನಧಿಕೃತ ಬ್ಯಾನರ್ ತೆರವುಗೊಳಸಲಾಗಿದೆ ಎಂದು ಹೇಳಿದರು.
25 ರೌಡಿಶೀಟರ್‌ಗಳು ಗಡಿಪಾರು
ಸಾರ್ವಜನಿಕರು ಅಕ್ರಮದ ಬಗ್ಗೆ ಮಾಹಿತಿ ನೀಡಿದರೆ ಎರಡು ಗಂಟೆಯ ಒಳಗೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ರೌಡಿಶೀಟರ್‌ಗಳ
ಪರೇಡ್ ಮಾಡಿದ್ದೇವೆ. 25 ಮಂದಿಯನ್ನು ಗಡಿಪಾರು ಮಾಡಲಾಗಿದೆ. 2 ಮಂದಿಯ ಮೇಲೆ ಗೂಂಡಾ ಆಕ್ಟ್ ಕಾಯಿದೆ ದಾಖಲಿಸಿದ್ದೇವೆ. ಕಾನೂನುಗೆ ವಿರುದ್ಧ ಮಾಡುವವರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಚುನಾವಣೆ ಹೊರತು ಪಡಿಸಿ ಕಾನೂನು ಸುವ್ಯವಸ್ಥೆಗೆ ಅಡ್ಡಿ ಮಾಡಲು ಅವಕಾಶ ಇಲ್ಲ. ಚುನಾವಣಾ ನೆಪದಲ್ಲಿ ಕೋಮುದ್ವೇಷ ಹರಡಿಸಿ ಮತೀಯ ಭಾವನೆ ಕೆರಳಿಸೋಕೆ ಅವಕಾಶ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಾತು ಮುಂದುವರಿಸಿದ ಅವರು, 50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಾಟ ಮಾಡುವವರು ಲಿಖಿತ ದಾಖಲೆಗಳನ್ನು ಹೊಂದಿರಬೇಕು. 50 ಸಾವಿರ ಒಳಗಡೆ ಸಾಗಾಟಕ್ಕೆ ಯಾವುದೇ ಕ್ರಮ ಇಲ್ಲ. ದಾಖಲೆ ಮತ್ತು ಸಕಾರಣ ನೀಡಿದರೆ ಪರಿಶೀಲನೆ ಮಾಡಿ ಬಿಡುತ್ತೇವೆ. ಸಾಮಾಜಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷ, ಚಿಹ್ನೆ, ಪ್ರಚಾರದ ಪ್ರೇರೇಪಣೆ ಇರಬಾರದು. ಮನೆಯಲ್ಲಿ ಕಾರ್ಯಕ್ರಮ ಮಾಡುವವರು ಸ್ಥಳೀಯ ಅಧಿಕಾರಿಗೆ ಮಾಹಿತಿ ನೀಡಬೇಕು. ಮದುವೆ ಮಾಡುವಾಗಲೂ ಮಾಹಿತಿ ನೀಡಬೇಕು. ನಿಯಮ ಮೀರಿದರೆ ಕಾರ್ಯಕ್ರಮ ಆಯೋಜಿಸಿದವರ ಮೇಲೆ ಕೇಸ್ ದಾಖಲಿಸಲಾಗುವುದು. ಸಾರ್ವಜನಿಕರು ಕೋಮು ಭಾವನೆ ಪ್ರಚೋದಿಸುವ ಪೋಸ್ಟ್ ಹಾಕಿದರೆ
ಮೀಡಿಯಾ ಮಾನಿಟರ್ ಪರಿಶೀಲನೆ ಮಾಡಲಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸುತ್ತದೆ ಎಂದು ರವಿ ಕುಮಾರ್ ಹೇಳಿದ್ದಾರೆ.












Click it and Unblock the Notifications