ಹರೀಶ್ ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ: ಸಿಎಂ ಸಿದ್ದರಾಮಯ್ಯ ಹೀಗೆ ಟಾಂಟ್ ಕೊಡಲು ಕಾರಣವೇನು?
ಮಂಗಳೂರು, ಅಕ್ಟೋಬರ್, 28: ಹರೀಶ್ ಪೂಂಜಾ ಎಂಎಲ್ಎ ಆಗಿರೋದು ಮೊನ್ನೆ, ನಾನು 1983ರಲ್ಲಿ ಎಂಎಲ್ಎ ಆಗಿದ್ದೇನೆ. 85ರಲ್ಲೇ ಮಿನಿಸ್ಟರ್ ಆಗಿದ್ದೇನೆ. ಅಂದು ಯಾರೂ ನನ್ನನ್ನು ಹಾಗೆ ಕರೆದಿಲ್ಲ. ರಾಜಕೀಯದಲ್ಲಿ ಇನ್ನೂ ಅವರು ಬಚ್ಚಾ. ಬಿಜೆಪಿ ಸರ್ಕಾರ, ಮುಖ್ಯಮಂತ್ರಿಗಳಿಗೆ ಹಾಗೆ ಹೇಳಲಿ ಹರೀಶ್ ಪೂಂಜಾ. ನಮಗೆ ಹೇಳೋದು ಬೇಡ ಎಂದು 'ಕಲೆಕ್ಷನ್ ಮಾಸ್ಟರ್ ಸಿಎಂ ಆಫ್ ಕರ್ನಾಟಕ' ಪೋಸ್ಟ್ ಮಾಡಿದ ಹರೀಶ್ ಪೂಂಜಾಗೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ 60ಕೋಟಿ ರೂ. ಆಫರ್ ಬಂದಿದೆ. ಎಷ್ಟು ಮಂದಿ ಕಾಂಗ್ರೆಸ್‌ನವರಿಗೆ ಈ ರೀತಿಯ ಆಫರ್ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇದನ್ನು ಸಿ.ಟಿ.ರವಿಯವರಿಗೆ ಕೇಳಿ. ನನಗೆ ಇದರ ಬಗ್ಗೆ ಗೊತ್ತಿಲ್ಲ. ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈ ರೀತಿಯ ಆಫರ್‌ಗಳ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.

ರಾಮಲಿಂಗಾ ರೆಡ್ಡಿಯವರು ಸಿ ಗ್ರೇಡ್ ದೇವಾಲಯಕ್ಕೆ ಫ್ರೀ ಕರೆಂಟ್ ಕೊಡಬೇಕೆಂಬ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರೊಂದಿಗೆ ಚರ್ಚೆ ಮಾಡುತ್ತೇನೆ. ನಿಗಮ ಮಂಡಳಿ ನೇಮಕ ಬಗ್ಗೆ ಮಾತನಾಡಿ, ಮೊದಲ ಹಂತದಲ್ಲಿ ಎಂಎಲ್ಎಗಳಿಗೆ ನಿರ್ದೇಶಕರನ್ನಾಗಿ ಮಾಡುತ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಎಂಎಲ್ಎಗಳಿಗೆ ಕೊಡಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಮಾಡಲಾಗುತ್ತದೆ.
ಬರಕ್ಕೆ ಕೇಂದ್ರದಿಂದ ಇಂದಿನವರೆಗೆ ಒಂದು ರೂಪಾಯಿ ಬಂದಿಲ್ಲ. ನಾವು ಎರಡು ವರದಿ ಸಲ್ಲಿಸಿದ್ದೇವೆ. ಕೇಂದ್ರದ ತಂಡ ಬಂದಿದೆ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 236 ತಾಲೂಕುಗಳಲ್ಲಿ 116 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. 17,910 ಕೋಟಿ ರೂಪಾಯಿ ಕೇಳಿದ್ದೇವೆ.
33 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಆಗಿದೆ. ಬೆಳೆ ನಷ್ಟ ಆಗಿದೆ. ಇಂದಿನವರೆಗೆ ನಮ್ಮ ಮಂತ್ರಿಗಳು ಹೋದಲ್ಲಿ ಭೇಟಿಯನ್ನು ಮಾಡಿಲ್ಲ. ಭೇಟಿಗೂ ಸಮಯವನ್ನು ಕೊಟ್ಟಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಮಲಧೋರಣೆ ತೋರಿಸುತ್ತಿದೆ.
ಕಾರ್ಕಳ ಪರಶುರಾಮ ಮೂರ್ತಿಯ ಬಗ್ಗೆ ಪ್ರಶ್ನೆಗೆ ಅದನ್ನು ನಕಲಿಯೋ ಅಸಲಿಯೋ ಎಂದು ತನಿಖೆ ಮಾಡಿಸುತ್ತೇವೆ. ಸೌಜನ್ಯಾ ಪ್ರಕರಣದ ಮರುತನಿಖೆ ಬಗ್ಗೆಗಿನ ಪ್ರಶ್ನೆಗೆ ಅದು ಸಿಬಿಐ ಮಾಡಿರೋದು, ಕೇಂದ್ರ ಸರಕಾರ ಮರುತನಿಖೆ ಮಾಡಿಸಬೇಕು. ನಾವೇನು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್
ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿಕೊಂಡಿದ್ದಾ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರಿನ ಸಿಎಂ ನಿವಾಸದ ಫೋಟೋ ಶೇರ್ ಮಾಡಿ ಕಲೆಕ್ಷನ್ ಮಾಸ್ಟರ್ (ಸಿಎಂ) ಆಫ್ ಕರ್ನಾಟಕ ಎಂಬ ಟ್ಯಾಗ್‌ಲೈನ್ ಬರೆದುಕೊಂಡಿದ್ದರು.
ಈ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಬೆಳ್ತಂಗಡಿ ಠಾಣೆಯಲ್ಲಿ ರಾಜ್ಯದ ಸಿಎಂ ಅವರನ್ನು ಅವಹೇಳನ ಮಾಡಿದ್ದಾಗಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications