ವಿಡಿಯೋ; ವಿವಾದದ ಕಿಡಿಹೊತ್ತಿಸಿದ ಚೈತ್ರಾ ಕುಂದಾಪುರ ಭಾಷಣ!
ಮಂಗಳೂರು, ಅಕ್ಟೋಬರ್ 05: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಸೋಮವಾರ ಸಂಜೆ ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ಭಜರಂಗದಳ ಮತ್ತು ದುರ್ಗಾವಾಹಿನಿಯ ವತಿಯಿಂದ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಚೈತ್ರ ಕುಂದಾಪುರ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಬಳಿ ಕಳೆದ ಕೆಲ ದಿನಗಳ ಹಿಂದೆ ಭಜರಂಗದಳ ದ ಕಾರ್ಯಕರ್ತರು ಸ್ಥಳೀಯ ಕಾಲೇಜಿನ ಯುವತಿಯರಯ ಅನ್ಯಧರ್ಮದ ಯುವಕರ ಜೊತೆ ಟ್ರಿಪ್ ಹೋಗುವುದನ್ನು ತಡೆದಿದ್ದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು.
ಆ ಬಳಿಕ ಸುರತ್ಕಲ್‌ನಲ್ಲಿ ಕಾಂಗ್ರೆಸ್, ಸಿಎಫ್ಐ ಸೇರಿದಂತೆ ಹಲವು ಸಂಘಟನೆಗಳು ಭಜರಂಗದಳದ ವಿರುದ್ದ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದವು. ಇದಾದ ಬಳಿಕ ಭಜರಂಗದಳ ಸುರತ್ಕಲ್‌ನಲ್ಲಿ ಹಿಂದೂ ಜನಜಾಗೃತಿ ಸಮಾವೇಶ ಮಾಡಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದೆ.

ಜನಜಾಗೃತಿ ಸಭೆಯಲ್ಲಿ ಪ್ರಮುಖ ಭಾಷಣ ಮಾಡಿದ ದುರ್ಗಾ ವಾಹಿನಿ ಮುಖಂಡೆ ಚೈತ್ರಾ ಕುಂದಾಪುರ, ಹಿಂದೂ ಯುವತಿಯರ ಜೊತೆ ಸುತ್ತಾಡುವ ಅನ್ಯಧರ್ಮದ ಯುವಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
"ಮುಸ್ಲಿಮರು ಲವ್ ಜಿಹಾದ್ ನಿಲ್ಲಿಸಬೇಕು.ಇಲ್ಲವಾದಲ್ಲಿ ಶೇ 70ರಷ್ಟು ಇರುವ ಹಿಂದೂಗಳು, ಮುಸ್ಲಿಂ ಹೆಣ್ಣು ಮಕ್ಕಳನ್ನು ಮತಾಂತರ ಮಾಡೋಕೆ ಎರಡು ದಿನ ಸಾಕು. ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ಹೆಣ್ಣು ಮಕ್ಕಳನ್ನು ಲವ್ ಮಾಡೋಕೆ ಹೊರಟರೆ, ಮುಸ್ಲಿಮರ ಮನೆಯಲ್ಲಿ ಬುರ್ಖಾ ಕಾಣೋದಿಲ್ಲ. ಪ್ರತೀ ಮನೆಯ ಮುಸ್ಲಿಂ ಹೆಣ್ಣುಮಕ್ಕಳ ಹಣೆಗೆ ಕುಂಕುಮ ಇಟ್ಟು ಕರೆದುಕೊಂಡು ಬರುತ್ತೇವೆ" ಅಂತಾ ವಿವಾದಾತ್ಮಕ ಭಾಷಣ ಮಾಡಿದ್ದಾರೆ.
"ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡೋಕೆ ಗೊತ್ತು. ಅದೇ ರೀತಿ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರೋಕೂ ಗೊತ್ತು" ಅಂತಾ ಚೈತ್ರಾ ಕುಂದಾಪುರ ಬಹಿರಂಗ ಸವಾಲು ಹಾಕಿದ್ದಾರೆ.
"ಭಜರಂಗದಳದ ಕಾರ್ಯಕರ್ತರು ಹಿಂದೂ ಯುವತಿಯರು ಅನ್ಯಧರ್ಮದ ಯುವಕರ ಜೊತೆ ಹೋಗೋದನ್ನು ತಡೆದರೆ ಅದು ನೈತಿಕ ಪೊಲೀಸ್ ಗಿರಿ ಆಗುತ್ತದೆ. ಆದರೆ ಇನ್ನು ಮುಂದೆ ಭಜರಂಗದಳದ ಕಾರ್ಯಕರ್ತರು ಯಾರ ಕಾರನ್ನೂ ತಡೆಯಲು ಹೋಗಬಾರದು. ದುರ್ಗಾವಾಹಿನಿಯ ಕಾರ್ಯಕರ್ತೆಯರು ಈ ಕೆಲಸವನ್ನು ಮಾಡಬೇಕು. ಆಗ ಯಾರು ನೈತಿಕ ಪೊಲೀಸ್ ಗಿರಿ ಅಂತಾ ಹೇಳುತ್ತಾರೆ? ಎಂಬುವುದನ್ನು ನೋಡೋಣ" ಎಂದರು.
"ಭಜರಂಗದಳದ ಕಾರ್ಯಕರ್ತರನ್ನು ರೌಡಿಗಳು ಅಂತಾ ಬುದ್ಧಿಜೀವಿಗಳು ಹೇಳುತ್ತಾರೆ. ಧರ್ಮ ರಕ್ಷಣೆಗಾಗಿ ನಾವು ರೌಡಿಗಳು ಆಗುತ್ತೇವೆ. ರೌಡಿ ಅಂತಾ ಹೇಳೋಕೆ ಹೆಮ್ಮೆ ಇದೆ" ಎಂದು ಚೈತ್ರಾ ಕುಂದಾಪುರ ಸಮರ್ಥನೆ ಮಾಡಿ ಕೊಂಡಿದ್ದಾರೆ.
ಇನ್ನೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋ ಕಳ್ಳತನದ ಬಗ್ಗೆಯೂ ಭಾಷಣದಲ್ಲಿ ಮಾತನಾಡಿದ ಚೈತ್ರಾ ಕುಂದಾಪುರ, ಕಾರ್ಯಕರ್ತರಿಗೆ ತಲ್ವಾರ್ ಹಿಡಿಯೋಕೆ ಪ್ರೇರೇಪಿಸಿದ್ದಾರೆ.
"ಮನೆಯ ಕೊಟ್ಟಿಗೆಗೆ ತಲ್ವಾರ್ ಹಿಡಿದುಕೊಂಡು ಗೋ ಕಳ್ಳತನಕ್ಕೆ ಬಂದರೆ, ಅದೇ ತಲ್ವಾರ್ ನಲ್ಲಿ ಉತ್ತರ ಕೊಡೋಕೆ ಗೊತ್ತಿದೆ. ಹೀಗೆ ತಲ್ವಾರ್ ಹಿಡಿದುಕೊಂಡು ಬರುವವರ ಕೈ ಕಾಲುಗಳನ್ನು ತುಂಡು ಮಾಡಬೇಕು. ಗೋ ಕಳ್ಳತನ ಮಾಡಲು ಬರುವವರು ಬರುವಾಗ ತನ್ನ ಕೈ ಕಾಲುಗಳ ಆಸೆ ಕಳೆದುಕೊಂಡು ಬರಬೇಕೆಂದು" ಚೈತ್ರಾ ಕುಂದಾಪುರ ಎಚ್ಚರಿಕೆ ನೀಡಿದ್ದಾರೆ.
ಚೈತ್ರಾ ಕುಂದಾಪುರ ಈ ಭಾಷಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಪೊಲೀಸರು ಸ್ವಯಂ ಪ್ರೇರಿತರಾಗಿ ಚೈತ್ರಾ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈಗಾಗಲೇ ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಬೂದಿ ಮುಚ್ಚಿರುವ ಕೆಂಡದಂತೆ ಇರುವ ಮಂಗಳೂರಿನಲ್ಲಿ ಮತ್ತೆ ದ್ವೇಷದ ಕಿಡಿ ಹೊತ್ತಿಸಿರುವ ಚೈತ್ರಾ ಕುಂದಾಪುರ ಮೇಲೆ ಪೊಲೀಸ್ ಕ್ರಮ ಕೈಗೊಳ್ಳುವಂತೆ ಎಡಪಂಥೀಯ ಸಂಘಟನೆಗಳು ಆಗ್ರಹಿಸಿವೆ.












Click it and Unblock the Notifications