ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಬಿ.ವೈ.ವಿಜಯೇಂದ್ರ
ಮಂಗಳೂರು, ಜುಲೈ, 29: ದಕ್ಷಿಣ ಕನ್ನಡ ಜಿಲ್ಲೆಯ ಬಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದಾ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಗುರುವಾರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರವೀಣ್ ಪತ್ನಿ ನೂತನಾಗೆ ಸರ್ಕಾರಿ ಉದ್ಯೋಗ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಅನೇಕ ಬಿಜೆಪಿ ನಾಯಕರು, ಶಾಸಕರು, ಸಂಘಟನೆಗಳ ಮುಖಂಡರು, ಕಾಂಗ್ರೆಸ್ ನಾಯಕರು ಪ್ರವೀಣ್ ಮನೆಗೆ ಭೇಟಿ ನೀಡಿದ್ದರು. ಪ್ರವೀಣ್ ಅವರ ಮನೆ ಶಿಥಿಲಾವಸ್ಥೆಯಲ್ಲಿದ್ದು, ಹೊಸದಾಗಿ ನಿರ್ಮಾಣದ ವ್ಯವಸ್ಥೆ ಮಾಡಲಾಗುವುದು ಎಂದು ಬಿ.ವೈ. ವಿಜಯೇಂದ್ರ ಭರವಸೆ ನೀಡಿದರು. ಪ್ರವೀಣ್ ಹತ್ಯೆಗೈದ ಅಪರಾಧಿಗಳು ಇನ್ಯಾವತ್ತೂ ಹೊರಗಡೆ ಬರದಂತೆ ಮಾಡಿಸಬೇಕು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅನುಸರಿಸುವ ಎನ್‌ಕೌಂಟರ್ ಕ್ರಮವನ್ನು ಇಲ್ಲಿಯೂ ಜಾರಿಗೊಳಿಸಬೇಕು ಎಂದು ಪ್ರವೀಣ್ ಸಂಬಂಧಿಕರು ನಾಯಕರ ಬಳಿ ಒತ್ತಾಯಿಸಿದರು.
ಸಚಿವ ಎಸ್.ಅಂಗಾರ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮತ್ತು ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಭೇಟಿ ನೀಡಿ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ತಂದೆ ಶೇಖರ ಪೂಜಾರಿ ಆರೋಗ್ಯದಲ್ಲಿ ಬೆಳಗ್ಗೆ ಏರುಪೇರಾಗಿದ್ದು , ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುತ್ರನನ್ನು ಕಳೆದುಕೊಂಡ ದುಃಖದಲ್ಲಿರುವ ಶೇಖರ ಪೂಜಾರಿ ಹೃದಯ ಬಡಿತದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಬೆಳ್ಳಾರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಈಗ ಆರೋಗ್ಯವಾಗಿದ್ದಾರೆಂದು ಅಲ್ಲಿನ ವೈದ್ಯರ ಮೂಲಗಳು ತಿಳಿಸಿವೆ.
ಮುತಾಲಿಕ್‌ಗೆ ಪ್ರವೇಶ ನಿರ್ಬಂಧ:
ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದು, ನಿನ್ನೆ ಸಂಜೆ 4ರಿಂದಲೇ ಈ ಆದೇಶ ಅನ್ವಯವಾಗಿದೆ. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಗೆ ಬರುವ ಬಂಟ್ವಾಳ, ಬೆಳ್ತಂಗಡಿ, ಸುಳ್ಯ , ಪುತ್ತೂರು, ಕಡಬ ತಾಲೂಕುಗಳಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ರವೀಣ್ ಮೃತದೇಹ ಮೆರವಣಿಗೆ ಸಮಯದಲ್ಲಿ ಅಲ್ಲಲ್ಲಿ ಘರ್ಷಣೆ ಉಂಟಾಗಿ ಸಾರ್ವಜನಿಕ ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಉದ್ವಿಗ್ನ ಪರಿಸ್ಥಿತಿಯಲ್ಲಿ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಬೆಳ್ಳಾರೆ ಮತ್ತು ಮೃತ ಪ್ರವೀಣ್ ಮನೆಗೆ ನೀಡುವುದಾಗಿ ಮಾಹಿತಿ ಲಭ್ಯವಾಗಿದ್ದು, ಇಲ್ಲಿಗೆ ಆಗಮಿಸಿ ಪ್ರಚೋದನಕಾರಿ ಹೇಳಿಕೆ ನೀಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯ ತೆ ಇರುವುದರಿಂದ ಈ ಆದೇಶ ಮಾಡಿದ್ದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications