ಬಂಟ್ವಾಳದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಅಣ್ಣ ತಂಗಿ
ಮಂಗಳೂರು, ಜೂನ್ 16: ಅವಿವಾಹಿತರಾಗಿದ್ದ ಅಣ್ಣ ತಂಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಂಗಬೆಟ್ಟು ಎಂಬಲ್ಲಿ ನಡೆದಿದೆ.
ಜೂ.15ರ ಸೋಮವಾರ ತಡರಾತ್ರಿ ಬಂಟ್ವಾಳದ ಸಂಗಬೆಟ್ಟು ಎಂಬಲ್ಲಿ ನೀಲಯ್ಯ ಶೆಟ್ಟಿ ಗಾರ್ (42) ಹಾಗೂ ಕೇಸರಿ (39) ಎಂಬ ಅಣ್ಣ ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸರಗೊಂಡು ಜೂನ್ 15ರ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ತಮ್ಮ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನೀಲಯ್ಯ ಅವರ ಮತ್ತೊಬ್ಬ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಇವರೆಲ್ಲ ಇನ್ನೊಂದು ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದರು. ಇದ್ದಕ್ಕಿಂದಂತೆ ಕಿರುಚುವ ಶಬ್ದ ಕೇಳಿ ಎಚ್ಚರಗೊಂಡು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಬಳಿಕ ಇಬ್ಬರನ್ನೂ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕೆಲ ತಿಂಗಳ ಹಿಂದೆ ಇವರ ತಂದೆ ತಾಯಿ ಅನಾರೋಗ್ಯದಿಂದ ತೀರಿಕೊಂಡಿದ್ದರು. ನೀಲಯ್ಯ ಕೈ ಮಗ್ಗ ನಡೆಸುತ್ತಿದ್ದು, ಅವರಿಗೂ ಅನಾರೋಗ್ಯವಿದ್ದ ಕಾರಣ ಅದನ್ನು ನಿಲ್ಲಿಸಿದ್ದರು. ಕೇಸರಿ ಅವರೂ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications