ಬಿಜೆಪಿಗೆ ಕಂಟಕವಾದ ಬಂಟರ-ಬಿಲ್ಲವರ ಅಸಮಾಧಾನ: ಕರಾವಳಿ ನಾಯಕರ ಮುಂದಿನ ನಡೆಯೇನು?
ಕರಾವಳಿಯಲ್ಲಿ ಬಂಟ ಸಮುದಾಯದ ಹಾಗೂ ಬಿಲ್ಲವ ಸಮುದಾಯ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಅಸಮಾಧಾನಗೊಂಡಿದೆ.ಬಂಟ ಸಮುದಾಯದ ಮುಖಂಡರನ್ನು ಚುನಾವಣಾ ಕಣಕ್ಕಿಳಿಸಿ 3-4 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಮಂಗಳೂರು, ಫೆಬ್ರವರಿ 27: ಬಂಟ ಸಮುದಾಯಕ್ಕೆ ನಿಗಮ ಘೋಷಣೆ ಹಾಗೂ ಸಮುದಾಯವನ್ನು 3ಬಿಯಿಂದ 2ಎಗೆ ವರ್ಗಾಯಿಸದಿದ್ದಲ್ಲಿ ಕರಾವಳಿಯಲ್ಲಿ ಬಂಟ ಸಮುದಾಯದ ಮುಖಂಡರನ್ನು ಚುನಾವಣಾ ಕಣಕ್ಕಿಳಿಸಿ 3-4 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಎಚ್ಚರಿಕೆಯನ್ನು ಬಂಟ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಘೋಷಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಈ ಬಗ್ಗೆ ಮಾತನಾಡಿದ್ದು, ಬಂಟ ಸಮುದಾಯವು ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ ಕಂಡು ಬರುತ್ತಿದೆ. ಆದರೆ ಶೇ.75% ಮಂದಿ ಈಗಲೂ ಬಡತನದಲ್ಲಿಯೇ ಇದ್ದಾರೆ. ಆದ್ದರಿಂದ ಬಂಟ ಸಮುದಾಯಕ್ಕೆ ದೊರಬೇಕಾದ ಮೀಸಲಾತಿಗೆ 3ಬಿಯಿಂದ 2ಎಗೆ ಸಮುದಾಯವನ್ನು ವರ್ಗಾಯಿಸುವಂತೆ ಹಾಗೂ ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅನೇಕ ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆ ಇರಿಸಲಾಗಿತ್ತು ಎಂದರು.

ಇತ್ತೀಚಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಿಎಂ ಬೊಮ್ಮಾಯಿಯವರಿಗೂ ಬೇಡಿಕೆ ಇಡಲಾಗಿತ್ತು. ಆದರೆ ಬಜೆಟ್ನಲ್ಲಿಯಾಗಲಿ, ವಿಧಾನಸಭೆಯ ಅಧಿವೇಶನದಲ್ಲಾಗಲಿ ನಮಗೆ ಸ್ಪಂದನೆ ದೊರಲಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಉತ್ತರ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟರು ಯಾವತ್ತೂ ಯಾರಲ್ಲೂ ಬೇಡುವುದಿಲ್ಲ. ತಮ್ಮ ಬೇಡಿಕೆ ಈಡೇರಿಕೆಗಾಗಿ ಬಾವುಟ ಹಿಡಿದು ಬೀದಿಗಿಳಿದು ಹೋರಾಟ, ಪ್ರತಿಭಟನೆಯನ್ನೂ ಮಾಡುವುದಿಲ್ಲ. ಆದರೆ ತಕ್ಷಣವೇ ನಮ್ಮ ಎರಡು ಬೇಡಿಕೆಗಳು ಈಡೇರದಿದ್ದಲ್ಲಿ ಈ ಚುನಾವಣೆಯಲ್ಲಿ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ. ಜಾಗತಿಕವಾಗಿ ಇರುವ ಎಲ್ಲಾ ಬಂಟ ಸಮುದಾಯದವರನ್ನು ಊರಿಗೆ ಕರೆಸಿ ಚುನಾವಣೆಯಲ್ಲಿ ಬಂಟರ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ ಎಂದು ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.
ಇನ್ನೊಂದೆಡೆ ಪ್ರಬಲ ಬಿಲ್ಲವ ಸಮುದಾಯವೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಘೋಷಿಸಿರುವ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವು ಬಲವಿಲ್ಲದ ನಿಗಮ ಎಂದು ಬಿಲ್ಲವ ಮುಖಂಡರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್, ಸಮುದಾಯವು ಕನಿಷ್ಠ ಪಕ್ಷ 500 ಕೋಟಿ ರೂ. ಹಣ ಮೀಸಲಿಟ್ಟು ನಿಗಮ ಘೋಷಣೆ ಮಾಡಬೇಕೆಂದು ಕಳೆದ 4 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಆದರೆ ಸರಕಾರ ಇಂತಿಷ್ಟು ಹಣ ಮೀಸಲಿಟ್ಟು, ಸಮಿತಿಯನ್ನೂ ರಚನೆ ಮಾಡದೆ ನಿಗಮವನ್ನು ತರಾತುರಿಯಲ್ಲಿ ಘೋಷಣೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ನಿಗಮ ಸ್ಥಾಪನೆಯ ಪ್ರಕ್ರಿಯೆ ಪೂರ್ಣಗೊಂಡು ಸಮುದಾಯಕ್ಕೆ ನಿಗಮದ ಲಾಭ ಕೈಸೇರಲು ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ. ಆದ್ದರಿಂದ ಈ ಸರಕಾರದ ಅವಧಿಯಲ್ಲಿ ನಿಗಮದಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಗಮ ಘೋಷಣೆ ಸಮುದಾಯದ ಸಂಘಟಿತ ಹೋರಾಟದ ಫಲ. ಈಗಿರುವ ಸರಕಾರದಿಂದ ನಿಗಮಕ್ಕೆ ನ್ಯಾಯ ದೊರಕಲು ಕಾನೂನಿನ ತೊಡಕು ಎದುರಾಗುತ್ತದೆ. ಆದರೆ ಮುಂದೆ ಅಧಿಕಾರಕ್ಕೆ ಬರುವ ಸರಕಾರವು ನಿಗಮದ ಕಾರ್ಯವನ್ನು ಮುಂದುವರಿಸಲು ಸುಲಭವಾಗಲಿದೆ. ಅಲ್ಲದೆ ಮುಂದೆ ಯಾವುದೇ ಸರಕಾರ ಬಂದರೂ ಈ ನಿಗಮವನ್ನು ಕೈಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿಗಮ ಸ್ಥಾಪನೆಯ ಹೆಜ್ಜೆ ಮಹತ್ವಪೂರ್ಣದ್ದಾಗಿದೆ. ಆದರೆ ಪೂರ್ಣ ಪ್ರಮಾಣದ ನಿಗಮವಾಗಿ ಹಣಕಾಸಿನ ಬಿಡುಗಡೆ ಆಗುವವರೆಗೆ ಈಗಿರುವ ದೇವರಾಜು ಅರಸು ನಿಗಮದಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನವೂ ದೊರಕುವುದಿಲ್ಲ ಎಂದರು.
ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮದ ಮುಂದಿನ ಪ್ರಕ್ರಿಯೆಗೆ ತಕ್ಷಣ ಚಾಲನೆ ನೀಡಬೇಕು. ಆದಷ್ಟು ಶೀಘ್ರದಲ್ಲೇ ನಿಗಮಕ್ಕೆ ಹಣಕಾಸು ಮೀಸಲಿಟ್ಟು, ಸಮಿತಿ ರಚನೆಯಾಗಬೇಕೆಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಸರಕಾರವನ್ನು ಆಗ್ರಹಿಸಿದ್ದಾರೆ.
ಬಿಜೆಪಿ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಲ್ಲವ ಮುಖಂಡ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, "ಬಿಲ್ಲವ ಮುಖಂಡರು ಚುನಾವಣಾ ಟಿಕೆಟ್ ಲಾಬಿಗಾಗಿ ರಾಜ್ಯ ಸರಕಾರ ಘೋಷಿಸಿರುವ ಶ್ರೀನಾರಾಯಣಗುರು ಅಭಿವೃದ್ಧಿ ನಿಗಮದಲ್ಲಿ ಅಪಸ್ವರ ಎತ್ತುತ್ತಿದ್ದಾರೆ. ಈ ಮೂಲಕ ಬಿಲ್ಲವ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ" ಎನ್ನುವ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರಕಾರ ಇರುವಾಗ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮದ ಬಗ್ಗೆ ಬೇಡಿಕೆ ಇಡದೆ ಮೌನವಾಗಿದ್ದ ಪದ್ಮರಾಜ್ ಆರ್. ಹಾಗೂ ಸತ್ಯಜಿತ್ ಸುರತ್ಕಲ್ ಅವರು ಚುನಾವಣೆ ಹತ್ತಿರವಿರುವ ವೇಳೆ ಈ ರೀತಿ ಯಾಕೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಚುನಾವಣೆ ಟಿಕೆಟ್ ಘೋಷಣೆ ಬಳಿಕ ಅಭಿವೃದ್ಧಿ ನಿಗಮದ ಬಗ್ಗೆ ಯಾವುದೇ ಸೊಲ್ಲೆತ್ತದೆ ಮೌನವಾಗುತ್ತಾರೆ. ಈ ಮೂಲಕ ಇವರ ಬಂಡವಾಳ ಬಯಲಾಗಲಿದೆ ಎಂದು ಹೇಳಿದ್ದಾರೆ.
ನಿಗಮ ಘೋಷಣೆ ಮಾಡಿದ ತಕ್ಷಣ 500 ಕೋಟಿ ರೂ. ಕೊಡಬೇಕೆಂದರೆ ಅದು ಸಾಧ್ಯವೇ. ಕೊಡುವ ತಾಕತ್ತು ಇದ್ದೇ ನಿಗಮ ಘೋಷಣೆ ಮಾಡಲಾಗಿದೆ. ಆದರೆ ಯಾವಾಗ ಹೇಗೆ ಮಾಡಬೇಕೆಂಬ ಪ್ರಕ್ರಿಯೆ ಇದೆ. ಅದನ್ನು ಮಾಡಿಯೇ ಮಾಡಲಾಗುತ್ತದೆ. ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ನಾರಾಯಣ ಗುರು ವಸತಿ ಶಾಲೆ ಸ್ಥಾಪನೆ, ಉಡುಪಿಯಲ್ಲಿ ಕೋಟಿ ಚೆನ್ನಯ ಸೈನಿಕ ತರಬೇತಿ ಶಾಲೆ ಸ್ಥಾಪನೆಗೆ ಆದೇಶ, ಪುತ್ತೂರು ನೂತನ ಬಸ್ ನಿಲ್ದಾಣಕ್ಕೆ ಕೋಟಿ - ಚೆನ್ನಯರ ಹೆಸರು, ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಬಿಜೆಪಿ ಸರಕಾರದಿಂದಲೇ ಆಗಿದ್ದು. ಆದ್ದರಿಂದ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಬಿಲ್ಲವ ಸಮುದಾಯದೊಳಗೆ ಗೊಂದಲ ಸೃಷ್ಟಿಸಲು ಈ ಅಪಸ್ವರ ಎತ್ತಲಾಗುತ್ತಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ನಾರಾಯಣ ಗುರುಗಳು ಜಾತಿಗೆ ಸೀಮಿತವಾದ ಗುರುಗಳು ಅಲ್ಲವೇ ಅಲ್ಲ. ಇಂದು ಜಾತಿಗೋಸ್ಕರ ಹೋರಾಟ ಮಾಡುವ ಸ್ವಾಮಿಗಳಿಂದಲೇ ದೇಶಕ್ಕೆ ಅಪಾಯ. ಹಿಂದೆ ಮಾನವ ಕುಲಕ್ಕೆ ಕೆಲಸ ಮಾಡುವಂತಹ ಸ್ವಾಮೀಜಿಗಳಿದ್ದರು. ಆದರೆ ಇಂದು ಧಾರ್ಮಿಕ ಚಿಂತನೆಯುಳ್ಳ ಸ್ವಾಮೀಜಿಗಳು ಮರೆಯಾಗಿ ಜಾತಿ, ಟಿವಿ, ಆನ್ಲೈನ್, ಧರ್ಮಾಧಾರಿತ ಸ್ವಾಮಿಗಳು ಕಂಡು ಬರುತ್ತಿದ್ದಾರೆ. ಇವರಿಂದ ದೇಶ ಉದ್ಧಾರವಾಗಲು ಸಾಧ್ಯವೇ ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದ್ದಾರೆ.












Click it and Unblock the Notifications