ಬೆಳ್ತಂಗಡಿ ಅರ್ಚಕರಿಗೆ ಕೇರಳದ ಶ್ರೀಮಂತ ಅನಂತ ಪದ್ಮನಾಭ ದೇಗುಲದ ಮಹಾ ಪ್ರಧಾನ ಅರ್ಚಕ ಪಟ್ಟ
ಮಂಗಳೂರು, ಜನವರಿ 31: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾ ಪ್ರಧಾನ ಅರ್ಚಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ.
ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾ ಪ್ರಧಾನ ಅರ್ಚಕ ಹುದ್ದೆ ಸಿಗುವುದು ಎಂದರೆ ಪೂರ್ವ ಜನ್ಮದ ಪುಣ್ಯದ ಫಲದೊಂದಿಗೆ ವೈಕುಂಠದಲ್ಲಿ ದೇವರನ್ನು ಸ್ವತಃ ಪೂಜಿಸಿದಂತಹ ಗರಿಮೆ ಎನ್ನುವುದು ಕೋಟ್ಯಂತರ ಅನಂತಪದ್ಮನಾಭ ಸ್ವಾಮಿ ಭಕ್ತರ ನಂಬಿಕೆಯಾಗಿದೆ.

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಅರ್ಚಕರಾಗಿ ಸೇರಿದ ಎಂಟು ತಿಂಗಳಲ್ಲಿಯೇ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ಮಹಾ ಪ್ರಧಾನ ಅರ್ಚಕ ಸ್ಥಾನ ಸಿಕ್ಕಿದ್ದು, ಅತಿ ಸಣ್ಣ ವಯಸ್ಸಿನಲ್ಲಿ ಮಹಾ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಮಹಾಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನವಾಗಿದೆ.
ಸತ್ಯನಾರಾಯಣ ತೋಡ್ತಿಲ್ಲಾಯ ಅವರ ಪರಿಚಯ
ಸತ್ಯನಾರಾಯಣ ತೋಡ್ತಿಲ್ಲಾಯ ಅವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ಶಾರದ ದಂಪತಿಯ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು.

ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿರುವ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈ ಹಿಂದೆ ಅಕ್ಕರ ದೇಸಿ ಸಮುದಾಯ ಸಂಘವು ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಅರ್ಚಕರ ಹುದ್ದೆಗೆ ಸತ್ಯನಾರಾಯಣರವರ ಹೆಸರನ್ನು ಶಿಫಾರಸು ಮಾಡಿತ್ತು. ಬಳಿಕ ಅವರು ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದು, ಇದೀಗ ದೇಶದ ಶ್ರೀಮಂತ ದೇವಾಲಯದ ಮಹಾ ಪ್ರಧಾನ ಅರ್ಚಕರಾಗಿದ್ದಾರೆ.












Click it and Unblock the Notifications