Harish Poonja: ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಮುಂದಾದ ಪೊಲೀಸರು: ಹೈಡ್ರಾಮ
ಮಂಗಳೂರು, ಮೇ 22: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಬಿಜೆಪಿ ಶಾಸಕರನ್ನು ಬಂಧಿಸಲು ಮನೆಗೆ ಆಗಮಿಸಿದ್ದಾರೆ.
ಅಕ್ರಮ ಕಲ್ಲು ಕೋರೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ಬಂಧಿಸಿರುವುದನ್ನು ಖಂಡಿಸಿ ಶಾಸಕ ಹರೀಶ್ ಪೂಂಜಾ ಬಿಜೆಪಿ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆದಿದ್ದರು. ಈ ವೇಳೆ ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಮೊದಲ ಎಫ್‌ಐಆರ್ ದಾಖಲಾಗಿತ್ತು.

ಬಳಿಕ ಮೇ.20 ರಂದು ತಾಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಿ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಎರಡನೇ ಪ್ರಕರಣ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದು, ಇಂದು ಅವರ ಗರ್ಡಾಡಿ ನಿವಾಸಕ್ಕೆ ಆಗಮಿಸಿದ್ದಾರೆ. ಯಾವುದೇ ಸಮಯದಲ್ಲೂ ಹರೀಶ್ ಪೂಂಜಾ ಬಂಧನವಾಗುವ ಸಾಧ್ಯತೆ ಎದುರಾಗಿದೆ.
ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಆಗಮಿಸಿರುವ ಹಿನ್ನೆಲೆಯಲ್ಲಿ ಗರ್ಡಡಿಯ ನಿವಾಸಕ್ಕೆ ವಕೀಲರ ತಂಡ ಭೇಟಿ ನೀಡಿದ್ದಾರೆ. ಪೊಲೀಸರ ಜೊತೆ ವಕೀಲರ ತಂಡ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ. ಇತ್ತ ಹರೀಶ್ ಪೂಂಜಾ ಮನೆಯ ಹೊರಗಡೆಯಲ್ಲಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವಿನ ಹೈಡ್ರಾಮಕ್ಕೆಹರೀಶ್ ಪೂಂಜಾ ನಿವಾಸ ಸಾಕ್ಷಿಯಾಗಿದೆ. ಇನ್ನು ಬಿಜೆಪಿ ಶಾಸಕರ ಬಂಧನಕ್ಕೆ ಪೊಲೀಸರು ಸಿದ್ಧರಾಗಿರುವ ಹಿನ್ನೆಲೆಯಲ್ಲ ಸಂಸದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್ ಸೇರಿದಂತೆ ಬಿಜೆಪಿ ನಾಯಕರ ದಂಡು ಗರ್ಡಡಿಯ ನಿವಾಸದತ್ತ ದೌಡಾಯಿಸಿದ್ದಾರೆ.












Click it and Unblock the Notifications