• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು: ನಾಗಮೂರ್ತಿಗಳಿಗೆ ಅಪಚಾರ; ಕೋಡಿಕಲ್ ಬಂದ್ ಮಾಡಿ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 15: ಮಂಗಳೂರು ನಗರ ಹೊರವಲಯದ ಕೋಡಿಕಲ್ ಪ್ರದೇಶದಲ್ಲಿ ನಾಗದೇವರ ಕಲ್ಲಿಗೆ ಭಗ್ನಗೊಳಿಸಿದ ಪ್ರಕರಣವನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಮತ್ತು ಸ್ಥಳೀಯರು ಕೋಡಿಕಲ್ ಬಂದ್‌ ಮಾಡಿ ಪ್ರತಿಭಟಿಸಲಾಯಿತು.

ನವೆಂಬರ್ 13ರಂದು ಕೋಡಿಕಲ್ ಪ್ರದೇಶದಲ್ಲಿರುವ ನಾಗಬ್ರಹ್ಮ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ನಾಗದೇವರ ಮೂರ್ತಿಯನ್ನು ಭಗ್ನಗೊಳಿಸಿದ್ದರು. ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಪೊಲೀಸರಿಗೆ ಆರೋಪಿಗಳ ಬಂಧನ ಮಾಡುವಂತೆ 48 ಗಂಟೆಗಳ ಗಡುವು ನೀಡಿದ್ದರು. ಆದರೆ ಪೊಲೀಸರು ಇನ್ನೂ ಆರೋಪಿಗಳು ಬಂಧನ ಮಾಡದ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕೋಡಿಕಲ್ ಬಂದ್‌ಗೆ ಕರೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಕೋಡಿಕಲ್ ಪ್ರದೇಶದ ಜನರು ಅಂಗಡಿ- ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಕೋಡಿಕಲ್ ಬಂದ್ ಹಿನ್ನಲೆಯಲ್ಲಿ ಕೋಡಿಕಲ್ ಸಂಪರ್ಕಿಸುವ ರಸ್ತೆಗಳನ್ನು ಹಿಂದೂ ಸಂಘಟನೆ ಕಾರ್ಯಕರ್ತರು ರಸ್ತೆ ತಡೆ ಮಾಡಿದ್ದಾರೆ.

ಕೋಡಿಕಲ್ ಮೈದಾನದಲ್ಲಿ ಘಟನೆಯನ್ನು ಖಂಡಿಸಿ ಪ್ರತಿಭಟನಾ ಸಭೆ ನಡೆದಿದ್ದು, ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದಾರೆ.

ಈ ವೇಳೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಒಂದೂವರೆ ತಿಂಗಳಿನಲ್ಲಿ ಮಂಗಳೂರಿನ ಮೂರು ಪ್ರದೇಶದಲ್ಲಿ ನಾಗಬನಕ್ಕೆ ನುಗ್ಗಿ ನಾಗ ದೇವರ ಕಲ್ಲುಗಳನ್ನು ಭಗ್ನ ಮಾಡಿದ್ದಾರೆ. ಬೈಕಂಪಾಡಿ, ಕುಳೂರಿನ ಬಳಿಕ ಈಗ ಕೋಡಿಕಲ್‌ನಲ್ಲಿ ನಾಗ ದೇವರ ಕಲ್ಲುಗಳ ಮೇಲೆ ದಾಳಿ ಮಾಡಲಾಗಿದೆ.‌ ಪೊಲೀಸರು ಈ ಹಿಂದಿನ ಘಟನೆಗಳಲ್ಲಿ ಓರ್ವನನ್ನು ಬಂಧನ ಮಾಡಿ ನಂತರ ಆತ ಮಾನಸಿಕ ಅಸ್ವಸ್ಥನೆಂದು ಹೇಳಿದ್ದಾರೆ. ಮಾನಸಿಕ ಅಸ್ವಸ್ಥ ಕೇವಲ ನಾಗ ದೇವರ ಮೂರ್ತಿಗಳನ್ನೇ ಯಾಕೆ ಕೆಡವುತ್ತಾನೆ. ಆತನಿಗೆ ಬೇರೆ ಧರ್ಮದ ಕೇಂದ್ರಗಳು ಕಾಣೋದಿಲ್ವೇ? ಇದರ ಹಿಂದೆ ವ್ಯವಸ್ಥಿತ ತಂಡ ಇದೆ ಎಂದು ಆರೋಪಿಸಿದ್ದಾರೆ.

Mangaluru: Bajrang Dal Calls For Kodical Bandh After Nagabana Defiled

ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಆರೋಪಿಗಳ ಪತ್ತೆಗೆ ಸ್ವಲ್ಪ ದಿನ ಸಮಯಾವಕಾಶ ಕೇಳಿದ್ದಾರೆ. ಆರೋಪಿಗಳನ್ನು ಹಿಡಿಯುವ ಬದಲು ಅವರನ್ನು ನೇರ ಎನ್‌ಕೌಂಟರ್ ಮಾಡಿ. ಯಾರ ಯಾರ ಮೇಲೋ ಬುಲೆಟ್ ಪ್ರಯೋಗ ಮಾಡುವ ಬದಲು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವವರ ಮೇಲೆ ಮಾಡಿ, ಆಗ ನಿಯಂತ್ರಣಕ್ಕೆ ಬರುತ್ತದೆ ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ನಿರಂತರವಾಗಿ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯತ್ನಗಳು ನಡೆಯುತ್ತಿದೆ. ಇದೇನು ಪೊಲೀಸರಿಗೆ ಭೇದಿಸಲಾಗದ ಪ್ರಕರಣವೇನಲ್ಲ. ಪೊಲೀಸರು ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಅದೇ ರೀತಿ ಈ ಪ್ರಕರಣದ ಆರೋಪಿಗಳನ್ನೂ ಬಂಧಿಸಿ ಕಠಿಣ ಶಿಕ್ಷೆ ನೀಡಿದರೆ ಸಾರ್ವಜನಿಕವಾಗಿ ಸನ್ಮಾನ ಮಾಡಿ ಬಂಗಾರದ ಪದಕ ನೀಡಿ ಗೌರವಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನಾ ಸಭೆಯ ಬಳಿಕ ದಾಳಿಗೊಳಗಾದ ನಾಗಬನದವರೆಗೆ ಮೆರವಣಿಗೆ ತೆರಳಿ ಅಲ್ಲಿ ಸಾರ್ವಜನಿಕ ಪ್ರಾರ್ಥನೆ ಮಾಡಲಾಯಿತು. ಕೋಡಿಕಲ್ ಪ್ರದೇಶ ಬಂದ್ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರೊನೊಬ್ಬ ಈ ಬಂದ್‌ಗೆ ವಿರೋಧ ವ್ಯಕ್ತಪಡಿಸಿದಾಗ ವ್ಯಕ್ತಿ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ.

English summary
Following the defilement of a nagabana in the Kodical, the Bajrang Dal has called for a bandh in that area on Nov 15 if the police fail to arrest those responsible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X