ಪಲ್ಲಕ್ಕಿಯ ಮೇಲೆ ದೈವದ ಆವಾಹನೆ: 20 ಜನರಿಂದ ಹಿಡಿಯಲು ಸಾಧ್ಯವಾಗದ ಆವೇಶ
ಮಂಗಳೂರು, ಮಾರ್ಚ್ 30: ದೈವಾರಾಧನೆ ಮೂಲಕ ಸಾವಿರಾರು ದೈವಗಳನ್ನು ಆರಾಧಿಸುವ ಕರಾವಳಿಯಲ್ಲಿ ಒಂದೊಂದು ದೈವಕ್ಕೆ ಒಂದೊಂದು ವಿಶೇಷತೆ ಇದೆ. ಅಂತಹದೇ ಒಂದು ವಿಶೇಷವಾದ ಪವಾಡವೊಂದು ಅರಸು ಕುಂಜುರಾಯ ಎನ್ನುವ ದೈವದ ಉತ್ಸವದ ವೇಳೆ ನಡೆಯುತ್ತದೆ. ಆ ವಿಶೇಷ ಕ್ಷಣ ಕಣ್ತುಂಬಿಕೊಳ್ಳೋದಿಕ್ಕೆ ಅಂತ ಸಾವಿರಾರು ಜನ ಅಲ್ಲಿ ಸೇರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದದ ಕಿನ್ನಿಗೋಳಿಯ ಕಿಲುಂಜು ಎನ್ನುವ ಗ್ರಾಮದಲ್ಲಿನ ದೈವದ ಉತ್ಸವದಲ್ಲಿ ನಡೆದ ಘಟನೆ. ಕಿಲುಂಜು ಅರಸು ಕುಂಜುರಾಯ ಎನ್ನುವ ಗ್ರಾಮ ದೈವದ ಉತ್ಸವಕ್ಕೆ ಅರಿಪಾದೆ ಎಂಬಲ್ಲಿಯ ಜಾರಂಧಾಯ ದೈವಸ್ಥಾನದಿಂದ ಆಭರಣಗಳ ಭಂಡಾರ ಬರುವಾಗ ನಡೆಯುವ ದೈವಾರಾಧನೆಯಲ್ಲಿ ಸಾಮಾನ್ಯವಾಗಿ ದೈವವು ಮನುಷ್ಯನ ಮೇಲೆ ಆವಾಹನೆಯಾಗುತ್ತದೆಯಾದ್ರೂ ಇಲ್ಲಿ ದೈವವು ಆಭರಣದ ಬಂಡಾರದ ಮೇಲೆ ಆವಾಹನೆಯಾಗುವುದೇ ವಿಶೇಷವಾಗಿದೆ.

ಅರಿಪಾದೆಯ ಜಾರಂಧಾಯ ದೈವಸ್ಥಾನದಿಂದ ದೈವದ ಮುಖವಾಡವನ್ನು ಇರಿಸಿ ಪಲ್ಲಕಿಯಲ್ಲಿ ಹೊತ್ತು ಅರಸು ಕುಂಜುರಾಯ ದೈವಸ್ಥಾನಕ್ಕೆ ತರಲಾಗುತ್ತದೆ. ಸಾಮಾನ್ಯವಾಗಿ ಒಂದು ಪಲ್ಲಕಿ ಹಾಗೂ ಪೆಟ್ಟಿಗೆಯನ್ನು ಹೊರಲು ಕೇವಲ ನಾಲ್ಕು ಜನ ಸಾಕಾಗುತ್ತದೆ. ಆದರೆ ದೈವದ ಮುಖವಾಡ ಹಾಗೂ ಆಭರಣ ಇರುವ ಈ ಪಲ್ಲಕಿ ಹಾಗೂ ಪೆಟ್ಟಿಗೆಯನ್ನು ಕನಿಷ್ಟ ಅಂದರು ಹತ್ತರಿಂದ ಹನ್ನೆರಡು ಜನ ಹೊರುತ್ತಾರೆ. ಅಷ್ಟು ಜನ ಹೊತ್ತುಕೊಂಡರೂ ಯಾರ ನಿಯಂತ್ರಣಕ್ಕೆ ಇದು ಸಿಗುವುದಿಲ್ಲ.
ತುಳುನಾಡಿನ ಆರಾಧ್ಯ ದೈವ ಅರಸು ಕುಂಜಿರಾಯ ಉತ್ಸವದ ವೇಳೆ ಕಂಡುಬರೋ ಕಾರಣಿಕದ ಸನ್ನಿವೇಶ.ಸಾಮಾನ್ಯವಾಗಿ ಉತ್ಸವದ ವೇಳೆ ದೈವ ದೇವರುಗಳ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವುದು ಮಾಮೂಲು.ಆದರೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ನಡೆಯುವ ಅರಸು ಕುಂಜಿರಾಯ ದೈವದ ಜಾತ್ರಾ ಮಹೋತ್ಸವ ತುಂಬಾನೇ ವಿಭಿನ್ನವಾಗಿದೆ.
ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಜಾರಂತಾಯ ಬಂಟ ದೈವದ ಮುಗವನ್ನು (ಮುಖವಾಡ)ಪಲ್ಲಕ್ಕಿಯಲ್ಲಿಟ್ಟು ಸುಮಾರು ಮೂರು ಕಿಲೋ ಮೀಟರ್ ನಡೆದು ಬರುವ ಸನ್ನಿವೇಶವನ್ನು ನೋಡಲೆಂದೇ ಊರ ಪರವೂರಿನ ಮಂದಿ ಕಿಕ್ಕಿರಿದು ಸೇರುತ್ತಾರೆ. ಇಲ್ಲಿ ಪಲ್ಲಕ್ಕಿಯನ್ನು ಸುಮಾರು ಇಪ್ಪತ್ತರಷ್ಟು ಯುವಕರು ಹೊತ್ತು ಬರುತ್ತಾರೆ.ಆ ವೇಳೆಗೆ ಜಾರಂತಾಯ ದೈವದ ಮುಗ ಹೊತ್ತ ಆ ಪಲ್ಲಕ್ಕಿ ಆವೇಶಕ್ಕೊಳಗಾಗಿ ತನ್ನನ್ನು ಹೊತ್ತಿರೋ ಆಳುಗಳನ್ನೇ ಎಳೆದಾಡಲು ಆರಂಭಿಸುತ್ತದೆ.

ಪಲ್ಲಕ್ಕಿಯನ್ನು ಹೊತ್ತ ಸುಮಾರು 20 ಮಂದಿಗೂ ಆ ಪಲ್ಲಕ್ಕಿಯ ಆರ್ಭಟವನ್ನು ತಡೆಯಲಾಗುವುದಿಲ್ಲ. ಮುಂದೆ ಹೋಗಲೆಂದು ತಂಡದ ಯುವಕರು ಪ್ರಯತ್ನಿಸಿದರೆ ಪಲ್ಲಕ್ಕಿ ತನ್ನಿಂದ ತಾನೇ ಹಿಂದಕ್ಕೆ ಹೋಗುತ್ತದೆ.ಬಳಿಕ ಪ್ರಯತ್ನಿಸಿ ಮುಂದೆ ಹೋದರೆ ಮತ್ತೆ ಎಡಕ್ಕೆ ,ಬಲಕ್ಕೆ ಪಲ್ಲಕ್ಕಿ ಸಾಗುತ್ತದೆ. ಪಲ್ಲಕ್ಕಿಯ ಒಳಗಿರುವ ಜಾರಂದಾಯ-ಬಂಟ ದೈವದ ಮುಗ(ಮುಖವಾಡ) ಪಲ್ಲಕ್ಕಿಯಿಂದ ಹೊರಗೆ ಹಾರಲು ಯತ್ನಿಸುತ್ತದೆಯಂತೆ.
ಈ ವೇಳೆ ಪಲ್ಲಕ್ಕಿಯನ್ನು ಹಿಡಿದಿರುವ ಯುವಕರು ಶತ ಪ್ರಯತ್ನದಿಂದ ಪಲ್ಲಕ್ಕಿಯೊಳಗಿರುವ ಮುಖವಾಡ ಬೀಳದಂತೆ ಮುಂದಕ್ಕೆ ಸಾಗಲು ಪ್ರಯತ್ನಿಸುತ್ತಾರೆ.ಸುಮಾರು ಮೂರುಗಂಟೆ ಸತತ ಪ್ರಯತ್ನದ ಬಳಿಕ ಮುಖವಾಡವನ್ನು ಹೊತ್ತು ತಂದ ಪಲ್ಲಕ್ಕಿ ದೈವಸ್ಥಾನದ ಒಳಗೆ ಸೇರುತ್ತದೆ.ಇದನ್ನು ದೈವಸ್ಥಾನದ ಒಳಗೆ ತರುವುದೇ ದೈವ ಶಕ್ತಿ ಎನ್ನುವುದು ಜನರ ನಂಬಿಕೆಯಾಗಿದೆ.
ಅರಸು ಕುಂಜುರಾಯ ದೈವದ ಉತ್ಸವಕ್ಕೆ ನಾಲ್ಕು ಗ್ರಾಮಗಳಿಂದ ಬೇರೆ ಬೇರೆ ದೈವಗಳ ಭಂಡಾರ ಬರುವುದು ವಾಡಿಕೆ. ಆದ್ರೆ ಮೂರು ಕಡೆಗಳಿಂದ ಬರುವ ಬಂಡಾರದಲ್ಲಿ ದರ್ಶನ ಪಾತ್ರಿಗಳಿಗಷ್ಟೇ ದೈವದ ಆವೇಶ ಬರುತ್ತದೆ. ಆದರೆ ಅರಿಪಾದೆ ಎಂಬಲ್ಲಿಂದ ಬರೋ ಬಂಡಾರದಲ್ಲಿ ಮಾತ್ರ ಈ ರೀತಿ ಪಲ್ಲಕಿಗೇ ಆವೇಶ ಬರುವುದು.

ಸುಮಾರು ಮೂರು ಕಿಲೋ ಮೀಟರ್ ದೂರ ಇರೋ ಅರಸು ಕುಂಜಾರಾಯ ದೈವಸ್ಥಾನಕ್ಕೆ ಆಭರಣಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಗುತ್ತದೆ. ಹೀಗೇ ಮೆರವಣಿಗೆಯಲ್ಲಿ ಬರುವ ಪಲ್ಲಕಿ ಹಾಗೂ ಪೆಟ್ಟಿಗೆಯು ಅರಸು ಕುಂಜುರಾಯ ದೈವಸ್ಥಾನ ಸಮೀಪಿಸುತ್ತಿದ್ದಂತೆ ಇದ್ದಂತೆ ಯಾರ ನಿಯಂತ್ರಣಕ್ಕೂ ಸಿಗದೆ ಓಲಾಡಲು ಆರಂಭಿಸುತ್ತದೆ.
ಬಹಳ ವರ್ಷಗಳ ಕಾಲ ಜಾರಂಧಾಯ ದೈವದ ಭಂಡಾರ ಇಲ್ಲಿಗೆ ಬರುವುದು ನಿಂತು ಹೋಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಇದು ಮತ್ತೆ ಆರಂಭವಾಗಿದ್ದು, ಆರಂಭದಲ್ಲೇ ಈ ವಿಚಿತ್ರ ಜನರನ್ನು ಆಶ್ಚರ್ಯಗೊಳಿಸಿತ್ತು. ಬಳಿಕ ಪ್ರಶ್ನೆ ಚಿಂತನೆ ಮೂಲಕ ಕೇಳಿದಾಗ ಇದು ಪಲ್ಲಕಿಗೆ ದೈವದ ಆವಾಹನೆ ಆಗೋದು ಅನ್ನೋ ವಿಚಾರ ಗೊತ್ತಾಗಿತ್ತು.
ಕರಾವಳಿಯಲ್ಲಿ ದೈವಗಳ ಉತ್ಸವದಲ್ಲಿ ಇಂತಹ ಹಲವಾರು ವಿಸ್ಮಯಗಳು ಅಲ್ಲಲ್ಲಿ ಕಂಡು ಬರುತ್ತದೆ. ಆದ್ರೆ ಪಲ್ಲಕಿಯೊಂದರ ಮೇಲೆ ದೈವದ ಆವಾಹನೆಯಾಗಿ ಜನರನ್ನೇ ಎಳೆದಾಡೋದು ಈ ಕ್ಷೇತ್ರದಲ್ಲಿ ಮಾತ್ರ. ಇದು ಅಸಾದ್ಯ ಅಂತ ಅನಿಸಿದ ದೈವ ಆರಾಧಕರೇ ಹಲವವರು ಸ್ವತಹ ಬಂದು ಕಣ್ಣಾರೆ ಕಂಡು ಅಚ್ಚರಿ ಪಟ್ಟಿದ್ದಾರೆ. ಸದ್ಯ ಸಕಲ ಭಕ್ತರ ಕೋರಿಕೆಯನ್ನು ಈಡೇರಿಸ್ತಾ ಇರೋ ಅರಸು ಕುಂಜುರಾಯ ದೈವಸ್ಥಾನದಲ್ಲಿ ಇನ್ನು ಮೂರು ದಿನ ಉತ್ಸವದ ಬಳಿಕ ಪಲ್ಲಕಿ ಮತ್ತೆ ವಾಪಾಸಾಗಲಿದೆ.
ಈ ಪಲ್ಲಕ್ಕಿಯನ್ನು ಹೊತ್ತು ತರುವ ಯುವಕರ ತಂಡವೂ ಸುಮಾರು 15 ದಿನಗಳ ಕಾಲ ಸಸ್ಯಾಹಾರದಿಂದ ಇರುತ್ತಾರೆ. ಮೂರು ದಿನಗಳ ಕಾಲ ಒಪ್ಪೊತ್ತಿನ ಊಟ ಮಾಡಿ ಶುಚಿಯಾಗಿದ್ದು ಪಲ್ಲಕ್ಕಿ ಹೊರುವ ದಿನ ಸಮುದ್ರ ಸ್ನಾನ ಮಾಡಿ ದೈವಸ್ಥಾನಕ್ಕೆ ಬರಬೇಕಾಗುತ್ತದೆ. ಇಷ್ಟು ಭಾರವಾದ ಹಾಗೂ ಅವೇಶ ಭರಿತ ಪಲ್ಲಕ್ಕಿಯನ್ನು ಹೊರುವವರ ಹೆಗಲಿನ ಸಿಪ್ಪೆಗಳು ಹೋದರೂ ದೈವೀ ಕಾರಣಿಕದಿಂದ ಯಾವುದೇ ನೋವು ಆಯಾಸಗಳೂ ಆಗೋದಿಲ್ಲ. ಪಲ್ಲಕ್ಕಿ ರಭಸದಿಂದ ಸುತ್ತಾಡಿದರೂ ಇಂದಿಗೂ ಓರ್ವನಿಗೂ ಯಾವುದೇ ಗಾಯಗಳಾಗಿಲ್ಲ ಎನ್ನುವುದು ವಿಶೇಷವಾಗಿದೆ.
ಅರಸು ಕುಂಜಿರಾಯ ದೈವವು ತುಳುನಾಡಿನ ಜನರ ಆರಾಧ್ಯ ದೈವ. ಅರಸನಾಗಿ ಮೆರೆದಿದ್ದ ಕುಂಜಿರಾಯನೇ ದೈವವಾಗಿ ಈಗಲೂ ನಮ್ಮೆಲ್ಲರನ್ನು ಹರಸುತ್ತಿದ್ದಾನೆ ಎನ್ನುವುದು ಈ ಭಾಗದ ಮಂದಿಯ ನಂಬಿಕೆ. ಹೀಗಾಗಿಯೇ ಅರಸು ದೈವಕ್ಕೆ ಪ್ರಿಯವಾದ ಜಾರಂದಾಯ ದೈವ ಅರಸು ಕ್ಷೇತ್ರಕ್ಕೆ ಬರುವಾಗ ತನ್ನ ಆರ್ಭಟವನ್ನು ತೋರಿಸುತ್ತಾನೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಒಟ್ಟಿನಲ್ಲಿ ವಿಜ್ಞಾನಕ್ಕೆ ಸವಾಲಾಗಿರುವ ಈ ಪಲ್ಲಕ್ಕಿ ಪವಾಡ ಇಂದಿನ ಕಾಲದಲ್ಲೂ ನಡೆಯುತ್ತಲ್ಲ ಎನ್ನುವುದೇ ವಿಶೇಷವಾಗಿದೆ.











Click it and Unblock the Notifications