ಸ್ವಾತಂತ್ರ್ಯ ಸಂಭ್ರಮ: ದೇವಸ್ಥಾನದ ಮುಂದೆ ವರ್ಷಪೂರ್ತಿ ರಾಷ್ಟ್ರ ಧ್ವಜ ಹಾರಿಸಿದ 80ರ ವೃದ್ಧ
ಮಂಗಳೂರು, ಆಗಸ್ಟ್ 14: ಸಾಮಾನ್ಯವಾಗಿ ಎಲ್ಲರೂ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆಯುತ್ತೇವೆ. ಆದರೆ ಮಂಗಳೂರಿನಲ್ಲಿ 80ರ ವಯೋವೃದ್ಧರೊಬ್ಬರು ದಿನಂಪ್ರತಿ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ. ತನಗೆ ಕೊಟ್ಟ ಹೊಣೆಗಾಗಿ ವರ್ಷದಲ್ಲಿ ಒಂದೇ ಒಂದು ದಿನವೂ ರಜೆ ಮಾಡದೆ ಕಾಯಕ ನಿಷ್ಠೆಯನ್ನು ತೋರಿದ್ದಾರೆ.
ಇದು ನಡೆದಿರುವುದು ಮಂಗಳೂರಿನ ಉರ್ವಸ್ಟೋರ್ ಬಳಿಯ ಅಶೋಕನಗರದ ದೇವಾಂಗ ಸಮುದಾಯದ ಶ್ರೀ ಭಗವತಿ ದೇವಸ್ಥಾನ ಹಾಗೂ ಕುಕ್ಕಾಡಿ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಆವರಣದಲ್ಲಿ. ಇದೇ ದೇವಾಂಗ ಸಮುದಾಯದ ಸಭಾಭವನದಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಾದಾಮಿ ಮೂಲದ ಶರಣಪ್ಪನವರು ಪ್ರತಿನಿತ್ಯ ಧ್ವಜಾರೋಹಣ ಮಾಡುತ್ತಾರೆ.

ಕಳೆದ ಬಾರಿ ನಾವೆಲ್ಲರೂ ಸ್ವಾತಂತ್ರ್ಯೋತ್ಸದ ಅಮೃತಮಹೋತ್ಸವ ಆಚರಿಸಿದ್ದೇವೆ. ಇದನ್ನು ಅರ್ಥಪೂರ್ಣವಾಗಿಸಲು ಮೂರು ದಿನಗಳ ಕಾಲ ದೇಶದ ಎಲ್ಲರ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದರು. ಈ ಕರೆಗೆ ಇಡೀ ದೇಶವೇ ಸ್ಪಂದಿಸಿತ್ತು. ಆದರೆ ದೇವಾಂಗ ಸಮುದಾಯವು ಮೂರು ದಿನಗಳಲ್ಲ ಒಂದಿಡೀ ವರ್ಷವೂ ರಾಷ್ಟ್ರಧ್ವಜದ ಹಾರಾಟಕ್ಕೆ ತೀರ್ಮಾನಿಸಿತ್ತು. ಆದರೆ ಧ್ವಜಾರೋಹಣ, ಅವರೋಹಣದ ಜವಾಬ್ದಾರಿ ಯಾರು ವಹಿಸುತ್ತಾರೆ ಎನ್ನುವಾಗ ಶರಣಪ್ಪ ಮುಂದೆ ಬಂದು ತಾನು ನೆರವೇರಿಸುತ್ತೇನೆ ಎಂದಿದ್ದಾರೆ.
ಹಾಗಾಗಿ ಶರಣಪ್ಪನವರು ಇಡೀ ವರ್ಷವೂ ಪ್ರತೀದಿನ ಬೆಳಗ್ಗೆ ಪ್ರತಿದಿನ ಬೆಳಗ್ಗೆ 7.30ಕ್ಕೆ ಸರಿಯಾಗಿ ಧ್ವಜಾರೋಹಣ ಮಾಡುತ್ತಾರೆ. ಸಂಜೆ ವೇಳೆಗೆ ಶಿಸ್ತುಬದ್ಧವಾಗಿ ಧ್ವಜ ವಂದನೆ ಮಾಡಿ ಧ್ವಜಾವರೋಹಣ ಮಾಡುತ್ತಾರೆ. ಬಳಿಕ ಯಥಾವತ್ತಾಗಿ ಧ್ವಜವನ್ನು ಮಡಚಿಡುತ್ತಾರೆ. ಮತ್ತೆ ಬೆಳಗ್ಗೆ ಧ್ವಜಾರೋಹಣ. ಹೀಗೆ ಒಂದು ವರ್ಷದಿಂದ ಇದು ಶರಣಪ್ಪರ ನಿರಂತರ ಕಾಯಕವಾಗಿದೆ.

ಧ್ವಜಾರೋಹಣದ ಹೊಣೆ ಇರೋದರಿಂದ ಅವರು ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರಂತೆ. ಎಲ್ಲೇ ಹೋದರೂ ರಾಷ್ಟ್ರಧ್ವಜಾರೋಹಣ ಹಾಗೂ ಅವರೋಹಣದ ವೇಳೆ ಶರಣಪ್ಪ ಹಾಜರಾಗುತ್ತಾರಂತೆ. ಸದ್ಯ ಮೂರು ವರ್ಷಗಳಿಂದ ದೇವಾಂಗ ಸಭಾಭವನದ ಸೆಕ್ಯೂರಿಟಿ ಗಾರ್ಡ್ ಆಗಿರುವ ಶರಣಪ್ಪ ಅಗಸ್ಟ್ 15ರ ಬಳಿಕ ರಜೆ ತೆಗೆದುಕೊಂಡು ಊರಿಗೆ ಹೋಗಲು ತೀರ್ಮಾನಿಸಿದ್ದಾರಂತೆ.
ಒಟ್ಟಿನಲ್ಲಿ ದೇವಾಂಗ ಸಮುದಾಯವು ಸದ್ದಿಲ್ಲದೆ ತಮ್ಮೊಳಗಿನ ರಾಷ್ಟ್ರಭಕ್ತಿ ಜಾಗೃತಿಗೊಳಿಸಿದ್ದು, ಶರಣಪ್ಪ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಇವರ ಈ ರಾಷ್ಟ್ರಪ್ರೇಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications