ಮಂಗಳೂರು ಪಶ್ಚಿಮ ವಲಯದ ಡಿಐಜಿಪಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ: ಡ್ರಗ್ ಪೆಡ್ಲರ್ಸ್‌ಗೆ ಖಡಕ್ ವಾರ್ನಿಂಗ್
ಮಂಗಳೂರು, ಜನವರಿ 02: ಡಗ್ಸ್, ಕೋಮುವಾದದ ರೀತಿಯಂತಹ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುತ್ತದೆ ಎಂದು ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿಪಿ) ಅಮಿತ್ ಸಿಂಗ್ ಹೇಳಿದ್ದಾರೆ.
ನೂತನ ಡಿಐಜಿಪಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಸದ್ಯ ಅಪರಾಧ ಕೃತ್ಯದ ಸ್ವರೂಪವೇ ಬದಲಾಗಿದೆ. ಕಳವಿಗಿಂತಲೂ ಡ್ರಗ್ಸ್, ಆರ್ಥಿಕ ಅಪರಾಧ, ಸೈಬರ್ ಅಪರಾಧದಂತಹ 'ವೈಟ್ ಕಾಲರ್ ಅಪರಾಧಗಳು ಅಧಿಕವಾಗುತ್ತಿದೆ. ಇಂತಹ ಕೃತ್ಯಗಳನ್ನು ಬೇಧಿಸುವುದೇ ಪೊಲೀಸರಿಗೆ ಸವಾಲಿನ ಸಂಗತಿ.

ಹತ್ತು ವರ್ಷಗಳ ಹಿಂದಿನ ಅಪರಾಧಕ್ಕೂ ಈಗಿನ ಅಪರಾಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೋಮುವಾದದಂತಹ ಕೃತ್ಯಗಳಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನೈತಿಕ ಪೊಲೀಸ್ ಗಿರಿ ಪ್ರಕರಣದ ವಿರುದ್ಧವೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. ಸೈಬರ್ ಅಪರಾಧಗಳ ಬಗ್ಗೆ ಜನತೆ ಸಾಕಷ್ಟು ಜಾಗರೂಕರಾಗಬೇಕು ಎಂದರು.
2007ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಅಮಿತ್ ಸಿಂಗ್ ಅವರು 2009-2011 ವರೆಗೆ ಎಎಸ್ಪಿಯಾಗಿ ಮಂಗಳೂರು ಹಾಗೂ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿದ್ದರು. 2011ರಿಂದ ಹಾಸನ, ಕಲಬುರಗಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜೊತೆಗೆ ನಾಲ್ಕು ವರ್ಷಗಳಲ್ಲಿ ಎನ್ಐಎಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಹಿಂದೆ ಪಶ್ಚಿಮ ವಲಯ ನೂತನ ಉಪ ಪೊಲೀಸ್ ಮಹಾನಿರೀಕ್ಷಕರಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಹೊಸ ವರ್ಷದ ಪಾರ್ಟಿ ನಶೆ - ಸ್ನೇಹಿತನ ಮೂಗನ್ನೇ ಕಚ್ಚಿ ತುಂಡರಿಸಿದ ಯುವಕ
ಹೊಸ ವರ್ಷದ ಪಾರ್ಟಿಯ ನಶೆಯಲ್ಲಿ ಮುಳುಗಿದ್ದ ಯುವಕರಿಬ್ಬರ ನಡುವೆ ಗಲಾಟೆಯಲ್ಲಿ ಯುವಕನೊಬ್ಬ ಸ್ನೇಹಿತನ ಮೂಗನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆಯೊಂದು ಬೆಳ್ತಂಗಡಿಯ ಪಿಲ್ಯದಲ್ಲಿ ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯ ಪಿಲ್ಯ ಗ್ರಾಮದ ಉಲ್ಪೆ ನಿವಾಸಿ ದೀಕ್ಷಿತ್ (28) ಎಂಬ ಯುವಕನ ಮೂಗಿಗೆ ಹಾನಿಯಾಗಿದೆ. ಮೂಡಿಗೆರೆ ಮೂಲದ ರಾಕೇಶ್ ಮೂಗು ತುಂಡರಿಸಿದ ಆರೋಪಿ ಎನ್ನಲಾಗಿದೆ.
ಆರೋಪಿ ರಾಕೇಶ್ ಬೆಳ್ತಂಗಡಿಯ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ದೀಕ್ಷಿತ್ ಹಾಗೂ ರಾಕೇಶ್ ಇಬ್ಬರು ಸ್ನೇಹಿತರಾಗಿದ್ದರು. ಇವರಿಬ್ಬರು ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿ ರಾಕೇಶ್ ಸ್ನೇಹಿತ ದೀಕ್ಷಿತ್ ಮೂಗನ್ನೇ ಕಚ್ಚಿ ತುಂಡರಿಸಿದ್ದಾನೆ. ತಕ್ಷಣ ದೀಕ್ಷಿತ್ ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications