ಸುರತ್ಕಲ್‌ನಲ್ಲಿ ಯುವಕನ ಕೊಲೆ: ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ, ಜುಲೈ 29: ಮಂಗಳೂರಿನಲ್ಲಿ ಪ್ರವೀಣ ನೆಟ್ಟಾರ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಯುವಕನ ಹತ್ಯೆಯಾಗಿದ್ದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿದೆ. ಮಂಗಳೂರು ಹೊರವಲಯದಲ್ಲಿರುವ ಸುರತ್ಕಲ್‌ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳು ಫಾಜಿಲ್ ಮಂಗಲಪೇಟೆ (23) ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಪರಿಸ್ಥಿತಿ ಉದ್ವಿಗ್ನವಾಗಿರುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಕೆ.ವಿ. ರಾಜೇಂದ್ರ ಸುರತ್ಕಲ್, ಪಣಂಬೂರು, ಬಜ್ಪೆ, ಮುಲ್ಕಿ ಸುತ್ತಮುತ್ತಲ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುರತ್ಕಲ್‌ನ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ರಾತ್ರಿಯಿಂದಲೇ ನಿರಂತವಾಗಿ ಗಸ್ತು ತಿರುಗುತ್ತಿದ್ದಾರೆ. ಯಾವುದೇ ಗಲಭೆಯಾಗದಂತೆ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನಿಷೇಧಾಜ್ಞೆ ಹೇರಿರುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಬೇಡಿ ಎಂದು ಮುಸ್ಲಿಂ ಮುಖಂಡರ ಬಳಿ ಪೊಲೀಸರು ಮನವಿ ಮಾಡಿದ್ದಾರೆ. ಮನೆಗಳಲ್ಲಿ ಅಥವಾ ನಿಷೇಧಾಜ್ಞೆ ಇಲ್ಲದ ಸ್ಥಳಗಳಲ್ಲಿ ಇರುವ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಶಾಂತಿ ಕಾಪಾಡುವಂತೆ ಪೊಲೀಸರ ಮನವಿ:
ಫಾಜಿಲ್ ಹತ್ಯೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ, ವ್ಯಾಟ್ಸಾಪ್‌ಗಳಲ್ಲಿ ಬರುವ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮನವಿ ಮಾಡಿದ್ದಾರೆ.
ಫಾಜಿಲ್‌ನನ್ನು ಯಾಕೆ ಹತ್ಯೆ ಮಾಡಲಾಗಿದೆ ಎಂದು ಇನ್ನೂ ಗೊತ್ತಾಗಿಲ್ಲ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಕೊಲೆಯ ಬಗ್ಗೆ ಬರುವ ಗಾಳಿ ಸುದ್ದಿ, ವದಂತಿಗಳು ಸಾರ್ವಜನಿಕರು ಪ್ರತಿಕ್ರಿಯೆ ನೀಡಬಾರದು. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್ಚುವರಿ ಪೊಲೀಸ್ ಸಿಬ್ಬಂದಿ:
ಸುರತ್ಕಲ್‌ನ ಮಂಗಲಪೇಟೆ ಯಲ್ಲಿ ನಡೆದ ಅಮಾನುಷ ಕೊಲೆ ಘಟನೆಯನ್ನು, ಅತ್ಯುಗ್ರವಾಗಿ ಖಂಡಿಸುತ್ತೇನೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ, ಕಾನೂನಿನ ಕ್ರಮ ಜರುಗಿಸಲು, ಪೊಲೀಸರು ಪೂರ್ಣ ಸ್ವಾತಂತ್ರ್ಯ ಹೊಂದಿದ್ದು, ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕೊಲೆ ಘಟನೆ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ನಿರ್ದೇಶನ ನೀಡಲಾಗಿದೆ. ಆರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವ ಯಾರನ್ನೇ ಆದರೂ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಗೃಹ ಸಚಿವರು ಹೇಳಿದ್ದಾರೆ.












Click it and Unblock the Notifications