ಮಂಗಳೂರಲ್ಲಿ ಲ್ಯಾಂಡ್ ಆದ ವಾಯುಸೇನೆ ಬೃಹತ್ ವಿಮಾನ
ಮಂಗಳೂರು, ಮೇ 31; ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಬಾರಿಗೆ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಭಾರತೀಯ ವಾಯುಸೇನೆಯ ಬೃಹತ್ ವಿಮಾನ ಯಶಸ್ವಿಯಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಮೇ30 ರಂದು ವಾಯುಸೇನೆಯ ಸಿ-17 ಗ್ಲೋಬ್ ಮಾಸ್ಟರ್ ಎಂಬ ಸರಕು ಸಾಗಾಟ ಮಾಡುವ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಈ ಬೃಹತ್ ವಿಮಾನದಲ್ಲಿ ಮಂಗಳೂರಿನಿಂದ ಕುವೈತ್‌ಗೆ ಖಾಲಿ ಟ್ಯಾಂಕ್‌ಗಳನ್ನು ಸಾಗಣೆ ಮಾಡಲಾಗಿದೆ.
ಇತ್ತೀಚೆಗೆ ಕುವೈತ್‌ನಿಂದ ಭಾರತೀಯ ನೌಕಾ ಸೇನೆಯ ನೌಕೆಗಳ ಮೂಲಕ ಆಕ್ಸಿಜನ್ ಟ್ಯಾಂಕ್‌ಗಳು ನವಮಂಗಳೂರು ಬಂದರಿಗೆ ಬಂದಿದ್ದವು. ಆಕ್ಸಿಜನ್ ಖಾಲಿ ಮಾಡಿದ ಬಳಿಕ ಟ್ಯಾಂಕ್‌ಗಳನ್ನು ಮರಳಿ ಕುವೈತ್‌ಗೆ ತೆಗೆದುಕೊಂಡು ಹೋಗಲಾಗಿದೆ.

ಟ್ಯಾಂಕ್‌ಗಳನ್ನು ಮರಳಿ ತಗೆದುಕೊಂಡು ಹೋಗುವ ಜವಾಬ್ದಾರಿ ಭಾರತೀಯ ವಾಯುಸೇನೆ ಹೊಂದಿದೆ. ಈ ಹಿನ್ನಲೆಯಲ್ಲಿ ಮಂಗಳೂರಿಗೆ ಬಂದಿರುವ ಬೃಹತ್ ವಿಮಾನದಲ್ಲಿ ಟ್ಯಾಂಕ್‌ಗಳನ್ನು ಪುನಃ ಕುವೈತ್‌ಗೆ ಕೊಂಡೊಯ್ಯಲಾಗಿದೆ.
ಸಿ-17 ಗ್ಲೋಬ್ ಮಾಸ್ಟರ್ ವಿಮಾನ ಒಟ್ಟು 4 ಎಂಜಿನ್‌ಗಳನ್ನು ಹೊಂದಿದೆ. ಬೃಹತ್ ಗಾತ್ರದ ಸರಕುಗಳನ್ನು ಸರಬರಾಜು ಮಾಡುವ ವಿಮಾನವಿದಾಗಿದೆ. ಟ್ಯಾಂಕರ್ ಹಾಗೂ ಇನ್ನಿತರ ಘನ ವಾಹನಗಳನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಇದು ಹೊತ್ತೊಯ್ಯುತ್ತದೆ.
ಕ್ಲಿಷ್ಟವಾದ ಭೂಪ್ರದೇಶ, ಕಿರಿದಾದ ವಾಯು ನೆಲೆಗಳಲ್ಲಿಯೂ ಈ ವಿಮಾನವು ಸುಲಭವಾಗಿ ಲ್ಯಾಂಡ್ ಆಗುವ ನೈಪುಣ್ಯತೆ ಹೊಂದಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ವಿಮಾನ ಮಂಗಳೂರಲ್ಲಿ ಲ್ಯಾಂಡ್ ಆಗಿದೆ.












Click it and Unblock the Notifications