ಪೊಲೀಸರು ಅಲರ್ಟ್; ವಿವಾದಾತ್ಮಕ ಪೋಸ್ಟ್ ಲೈಕ್ ಮಾಡಿದ್ರು ಟಾರ್ಗೆಟ್!
ಮಂಗಳೂರು, ಫೆಬ್ರವರಿ 22; ಶಿವಮೊಗ್ಗ ಗಲಭೆಯ ಬಳಿಕ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೋಮು ಸಂಘರ್ಷದ ವಾತವರಣ ಎಲ್ಲೇ ಹಬ್ಬಿದರೂ ಅದರ ಕಿಡಿ ಮಂಗಳೂರಿನಲ್ಲೂ ಉರಿಯುವ ಕಾರಣ ಪೊಲೀಸರು ಇಡೀ ಜಿಲ್ಲೆಯಲ್ಲಿ ಈಗ ಹದ್ದಿನಕಣ್ಣು ಇಟ್ಟಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಕೋಮು ಸಂಘರ್ಷವನ್ನುಂಟು ಮಾಡಲು ತೆರೆಮರೆಯ ಕಾರ್ಯ ನಡೆಸುವವರ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಏನೂ ಆಗಲ್ಲ ಎಂಬ ಧೈರ್ಯದಲ್ಲಿದ್ದವರು ಎಚ್ಚರಿಕೆಯಿಂದ ಇರಿ ಅಂತಾ ಖಡಕ್ ಸೂಚನೆ ಕೊಟ್ಟಿದ್ದಾರೆ.
"ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲವು ಭಾಗದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ನಡೆಯುತ್ತಿದೆ. ಆದರೆ ಮಂಗಳೂರಿನಲ್ಲಿ ಮಾದರಿಯಾಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಜನರ ಸಹಕಾರವೂ ಅದ್ಭುತವಾಗಿ ದೊರಕಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಕೆಲ ಸಂಘಟನೆ, ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಧರ್ಮದ ಗ್ರೂಪ್ ಸೃಷ್ಠಿ ಮಾಡಿ ಜಾತಿ ಸಂಘರ್ಷದ ಪೋಸ್ಟ್ ಗಳನ್ನು ಹಾಕಲಾಗಿದೆ. ಈ ಎಲ್ಲಾ ಪೋಸ್ಟ್ ಗಳನ್ನು ಸೋಷಿಯಲ್ ಮಿಡಿಯಾ ಸೆಲ್ ಮೂಲಕ ಗಮನಿಸಲಾಗುತ್ತಿದೆ" ಎಂದು ಎನ್. ಶಶಿಕುಮಾರ್ ಹೇಳಿದ್ದಾರೆ.

"ನೂರಕ್ಕೂ ಹೆಚ್ಚು ಸಂಘಟನೆ, ವ್ಯಕ್ಯಿಗಳು ಸೇರಿದಂತೆ ಸಾವಿರದ ಅರವತ್ತ ನಾಲ್ಕು ಜನರ ಮೇಲೆ ಈಗಾಗಲೇ ನಿಗಾ ಇಟ್ಟಿದ್ದೇವೆ. ಪೋಸ್ಟ್ ಮಾಡಿದರೆ ಹಿಡಿಯೋಕೆ ಆಗಲ್ಲ ಅನ್ನುವ ಭ್ರಮೆ ಬೇಡ. ಇದಕ್ಕಾಗಿಯೇ ಕಳೆದ ಎರಡು ತಿಂಗಳನಿಂದ ಮಾನಿಟರ್ ಮಾಡುತ್ತಿದ್ದೇವೆ. 6 ಜನ ಸಿಬ್ಬಂದಿ ಇದಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ" ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
"ಕೇವಲ ಸಂಘರ್ಷದ ಪೋಸ್ಟ್ ಮಾಡುವವರು ಮಾತ್ರ ಆರೋಪಿಗಳು ಆಗೋದಿಲ್ಲ. ಆಕ್ಷೇಪಾರ್ಹ ಪೋಸ್ಟ್ ಅನ್ನು ಶೇರ್, ಲೈಕ್ ಕಮೆಂಟ್ ಮಾಡಿದವರು ಸಮಾನ ಪಾಲುದಾರರಾಗಿದ್ದಾರೆ. ಅವರ ಮೇಲೂ ಕೇಸು ದಾಖಲಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದ ಮೇಲೆ ನಿಗಾ ಇಡೋದಕ್ಕೇ ಹಲವು ತಂಡಗಳನ್ನು ಮಾಡಲಾಗಿದೆ. ಆನ್ ಲೈನ್ ಮೀಡಿಯಾಗಳ ಪೋರ್ಟಲ್‌ಗಳಲ್ಲಿ ಸಂಘರ್ಷಕ್ಕೆ ಪ್ರೇರಣೆ ನೀಡುವಂತಹ ಕಮೆಂಟ್ ಮಾಡುವವರನ್ನು ಗಮನಿಸಲಾಗುತ್ತದೆ.
ರಾಜಕೀಯ ವ್ಯಕ್ತಿಗಳು, ಅವರ ಬೆಂಬಲಿಗರ ಸಾಮಾಜಿಕ ಜಾಲತಾಣಗಳನ್ನು ಗಮನಿಸಲಾಗುತ್ತಿದೆ. ಕೆಲವು ಸುಳ್ಳು ಸುದ್ದಿಗಳ ಫ್ಯಾಕ್ಟ್ ಚೆಕ್ ಅನ್ನು ರಾಜ್ಯ ಗುಪ್ತಚರ ಇಲಾಖೆ ಸಹಾಯದಿಂದ ಮಾಡುತ್ತೇವೆ. ಈಗಾಗಲೇ ಪ್ರತಿ ಠಾಣೆಗಳ ಆರೋಪಿಗಳ ಪಟ್ಟಿ ಮಾಡಲಾಗಿದೆ. ಬೇಲ್ ಮೂಲಕ ಹೊರಗೆ ಇದ್ದವರನ್ನೂ ಗಮನಿಸಲಾಗುತ್ತಿದೆ. ಅವರ ಸೋಷಿಯಲ್ ಮಿಡಿಯಾ ಖಾತೆಗಳನ್ನೂ ಗಮನಿಸಲಾಗುತ್ತಿದೆ.
"ಪೊಲೀಸರು ಬೇರೆ ಬೇರೆ ಗ್ರೂಪ್ ಗಳಲ್ಲಿ ಈಗಾಗಲೇ ಸಕ್ರಿಯರಾಗಿದ್ದಾರೆ. ಪ್ರತಿ ಠಾಣೆಯಲ್ಲಿ ಈಗಾಗಲೇ 10 ಹಾಟ್ ಸ್ಪಾಟ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ" ಎಂದು ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಪೇಜ್ ಬಗ್ಗೆ ಮಂಗಳೂರು ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ. ವಿವಾದಾತ್ಮಕ ಪೋಸ್ಟ್ ಮಾಡಿದವರು ಯಾರೇ ಆದರೂ, ಅವರು ಎಷ್ಟೇ ಪ್ರಭಾವಿಯಾದರೂ ಅವರ ಆಯುಷ್ಯ ವೃದ್ಧಿಯಾಗೋಲ್ಲ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಅಲ್ಲದೆ ಕೊಲೆಯ ಸತ್ಯಾಸತ್ಯತೆ ಬಯಲಾಗಬೇಕಿದ್ದಲ್ಲಿ ತನಿಖೆ ಮಾಡಿಸಿ ಎಂದು ಮುಸ್ಲಿಂ ಪೇಜ್ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನಲೆಯಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಒಡ್ಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಮ್ಸ್ ಪೇಜ್ ಮೇಲೆ ಮಂಗಳೂರು ಪೊಲೀಸರು ಸೆನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ ಜೊತೆಗೆ ಈ ಪೋಸ್ಟ್ ಅನ್ನು ಲೈಕ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಮಾಡಿದವರೂ ಅಪರಾಧಿಗಳಾಗಿದ್ದು, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications