ಮಂಗಳೂರು: ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದ ನಟ ದರ್ಶನ್
ಮಂಗಳೂರು, ಸೆಪ್ಟೆಂಬರ್ 27: ತುಳುನಾಡು ಮಂಗಳೂರಿನ ಅತ್ಯಂತ ಕಾರ್ಣಿಕ ಹಾಗೂ ಪ್ರಸಿದ್ಧ ದೈವಗಳಲ್ಲಿ ಒಂದಾದ ಸ್ವಾಮಿ ಕೊರಗಜ್ಜನ ದರ್ಶನ ಪಡೆದಿದ್ದ ಖ್ಯಾತ ಕನ್ನಡ ಚಲನಚಿತ್ರ ನಟ ದರ್ಶನ್ ಫೋಟೋ ಈಗ ವೈರಲ್ ಆಗಿದೆ.
ಕೆಲ ತಿಂಗಳ ಹಿಂದೆ ಮಂಗಳೂರಿಗೆ ಭೇಟಿ ಮಾಡಿದ್ದ ನಟ ದರ್ಶನ್, ಕೊರಗಜ್ಜನ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದರು. ಕೊರಗಜ್ಜನ ಮುಂದೆ ಕೈ ಮುಗಿಯುತ್ತಾ ನಿಂತಿರುವ ನಟ ದರ್ಶನ್ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೊರೊನಾ ವೈರಸ್ ದೇಶಕ್ಕೆ ವಕ್ಕರಿಸಿದ ನಂತರ, ಅದರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಲಾಕ್ ಡೌನ್ ಹೇರಲಾಗಿದ್ದ ಸಂದರ್ಭದಲ್ಲಿ ಸಿನಿಮಾ ಶೂಟಿಂಗ್ ಗಳನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ನಟ ದರ್ಶನ್ ಅವರು ಸಾಕು ಪ್ರಾಣಿಗಳ ಜೊತೆ ಕಾಲ ಕಳೆದಿದ್ದಾರೆ. ಇದೇ ವೇಳೆ ಬಿಡುವು ಮಾಡಿಕೊಂಡು ಕ್ಷೇತ್ರ ಭೇಟಿ ಮಾಡಿದ್ದರು.

ದರ್ಶನ್ ಅವರು ತನ್ನ ಸ್ನೇಹಿತರೊಂದಿಗೆ ಮಂಗಳೂರಿಗೆ ಕೂಡ ಭೇಟಿ ಕೊಟ್ಟರು. ಮೊದಲೇ ತಮ್ಮ ಸ್ನೇಹಿತರ ಮೂಲಕ ಕೊರಗಜ್ಜನ ಪವಾಡ ಅರಿತಿದ್ದ ದರ್ಶನ್, ಇದೇ ಸಂದರ್ಭದಲ್ಲಿ ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ದರ್ಶನ ಪಡೆದುಕೊಂಡಿದ್ದರು.
ಹಲವು ಸೆಲೆಬ್ರಿಟಿಗಳು ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ತುಳುನಾಡಿನ ಮಂದಿಯ ಆರಾಧ್ಯ ದೈವ ಕೊರಗಜ್ಜನ ಆಶೀರ್ವಾದ ಪಡೆದಿರುವುದು ದರ್ಶನ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.












Click it and Unblock the Notifications