ಕರಾವಳಿ ಕಾವಲು ಪಡೆಯ 47ನೇ ದಿನಾಚರಣೆ: ಅರಬ್ಬೀ ಸಮುದ್ರದಲ್ಲಿ ಕೊಸ್ಟ್‌ಗಾರ್ಡ್‌ನಿಂದ ವಿವಿಧ ಕಸರತ್ತು
ಮಂಗಳೂರಿನಲ್ಲಿ ಕರಾವಳಿ ಕಾವಲು ಪಡೆಯ 47ನೇ ದಿನಾಚರಣೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ ಕೋಸ್ಟ್ ಗಾರ್ಡ್ ಡೇ ಉದ್ಘಾಟನೆ ನಡೆದಿದ್ದು, ಅರಬ್ಬೀ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ವಿವಿಧ ಕಸರತ್ತುಗಳನ್ನು ನಡೆಸಿದೆ.
ಮಂಗಳೂರು, ಫೆಬ್ರವರಿ 3: ಮಂಗಳೂರಿನಲ್ಲಿ ಕರಾವಳಿ ಕಾವಲು ಪಡೆಯ 47ನೇ ದಿನಾಚರಣೆ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಕೋಸ್ಟ್ ಗಾರ್ಡ್ ಡೇ ಉದ್ಘಾಟನೆ ನಡೆದಿದ್ದು, ಅರಬ್ಬೀ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ವಿವಿಧ ಕಸರತ್ತುಗಳನ್ನು ನಡೆಸಿದೆ.
ಅರಬ್ಬೀ ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸಿದ ಶತ್ರು ದೇಶದ ನುಸುಳುಕೋರರನ್ನು ಹಿಮ್ಮೆಟ್ಟಿಸಲಾಯಿತು. ನೀರಲ್ಲಿದ್ದವರಿಗೂ ಮಿಷನ್ ಗನ್‌ನಲ್ಲಿ ಫಯರ್ ಮಾಡುವ ಮೂಲಕ ಓಡಿಸಲಾಯಿತು. ಬೆಂಕಿ ಹತ್ತಿಕೊಂಡ ಸೇನಾ ಬೋಟ್‌ಗೆ ತಕ್ಷಣ ನೀರು ಹಾಯಿಸಿ ನಂದಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು. ಹೀಗೆ ಹಲವು ಕಾರ್ಯಾಚರಣೆಗಳ ಮಾದರಿಗಳನ್ನು ಕೋಸ್ಟ್ ಗಾರ್ಡ್ ಪ್ರದರ್ಶಿಸಿದೆ.
ಇಂಡಿಯನ್ ಕೋಸ್ಟ್ ಗಾರ್ಡ್‌ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಕೋಸ್ಟ್ ಗಾರ್ಡ್ ಪಣಂಬೂರು ಸಮೀಪದ ಅರಬ್ಬೀ ಸಮುದ್ರದಲ್ಲಿ ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಜಲಸೇನೆ ಸಮುದ್ರದಲ್ಲಿ ಏನು ಮಾಡುತ್ತಿರುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಅದರಲ್ಲೂ ಕೋಸ್ಟ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬಿಕರು ಈ ಬಗ್ಗೆ ತಿಳಿದುಕೊಳ್ಳಬೇಕೆಂದು ಅವರನ್ನೂ ಸಮುದ್ರ ಮಧ್ಯೆ ಕರೆತರಲಾಗಿತ್ತು.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೋಸ್ಟ್ ಗಾರ್ಡ್ ಕಮಾಂಡೆಂಟ್‌ನ ಪತ್ನಿ ವಸುಧಾ ಉಪಾಧ್ಯಾಯ,"ಪತಿ ಕೋಸ್ಟ್ ಗಾರ್ಡ್ ನಲ್ಲಿದ್ದರೂ ಕಾರ್ಯಾಚರಣೆಗಳನ್ನು ಪ್ರತ್ಯಕ್ಷ ವಾಗಿ ನೋಡುವ ಅವಕಾಶ ಇರಲಿಲ್ಲ. ಆದರೆ ಇಂದು ಆ ಅವಕಾಶ ಲಭಿಸಿದೆ. ಸಮುದ್ರ ಮಾರ್ಗವಾಗಿ ದೇಶ ನುಸುಳುವವರನ್ನು ಹೇಗೆ ಹಿಮ್ಮೆಟ್ಟಿಸುತ್ತಾರೆ ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಕೋಸ್ಟ್ ಗಾರ್ಡ್‌ನ ಮೂರು ಹಡಗುಗಳು ನುಸುಳು ಕೋರರನ್ನು ಸುತ್ತುವರಿದು ಹಡಗಿನಲ್ಲಿದ್ದ ಮೆಷಿನ್ ಗನ್ ಮೂಲಕ ಫೈರಿಂಗ್ ನಡೆಸುತ್ತಾರೆ. ಮೇಲಿಂದ ಹೆಲಿಕಾಪ್ಟರ್ ಮೂಲಕವೂ ಕಾರ್ಯಾಚರಣೆ ನಡೆಸಲಾಗಿತ್ತದೆ. ಇದನ್ನು ಅಣುಕು ಪ್ರದರ್ಶನದ ಮೂಲಕ ತೋರಿಸಲಾಗಿದ್ದು ಒಂದೇ ಬಾರಿಗೆ ಎಲ್ಲಾ ಕಡೆಯಿಂದ ಫೈರಿಂಗ್ ನಡೆಸುವುದು ನೋಡುವಾಗ ಎದೆ ಝಲ್ಲೆನಿಸಿದೆ" ಎಂದು ಹೇಳಿದ್ದಾರೆ.

ಸಮುದ್ರದಲ್ಲಿ ಕಾರ್ಯಾಚರಣೆ ಮೇಳೆ ಅಥವಾ ತೂಫಾನ್ ಬಂದ ಸಂದರ್ಭದಲ್ಲಿ ಸಮುದ್ರಲ್ಲಿ ಬಿದ್ದವರನ್ನು ಹೆಲಿಕಾಪ್ಟರ್ ಮೂಲಕ ಹೇಗೆ ರಕ್ಷಣೆ ಮಾಡಲಾಗುತ್ತದೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗಿದೆ. ಸಮುದ್ರದಲ್ಲೇ ಯುದ್ಧ ಆದ ಸಂದರ್ಭದಲ್ಲಿ ಬೆಂಕಿಹತ್ತಿಕೊಂಡರೆ ಯಾವ ರೀತಿ ಕಾರ್ಯಾಚರಣೆ ನಡೆಸಲಾಗುತ್ತದೆ ಎನ್ನುವುದನ್ನು ತೋರಿಸಲಾಗಿದ್ದು, ಒಟ್ಟು ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಏನೆಲ್ಲಾ ಕಾರ್ಯಾಚರಣೆ ಮಾಡುತ್ತದೆ ಎನ್ನುವುದನ್ನು ತೋರಿಸಲಾಯಿತು. ಇದು ಅಪೂರ್ವದ ಕ್ಷಣ ಎಂದು ಅನನ್ಯಾ ಶೆಟ್ಟಿ ಹೇಳಿದ್ದಾರೆ.

ನಾಲ್ಕು ಗಂಟೆಗಳ ಕಾಲ ಭಾರತೀಯ ಕೋಸ್ಟ್ ಗಾರ್ಡ್ ನೌಕೆ ವರಾಹದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಇನ್ಸ್‌ಪೆಕ್ಟರ್ ಜನರಲ್ ಎಂ.ವಿ. ಬಾಡ್ಕರ್, ಕರ್ನಾಟಕದಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗಳು ಮತ್ತು ಚಟುವಟಿಕೆಗಳನ್ನು ವಿವರಿಸಿದ್ದಾರೆ. ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜ್ಯಪಾಲರ ಜೊತೆ ಚರ್ಚಿಸಿದ್ದಾರೆ. ಜನವಸತಿ ಮತ್ತು ಜನವಸತಿ ಇಲ್ಲದ ದ್ವೀಪಗಳ ಕರಾವಳಿ ಭದ್ರತೆಯ ಅಗತ್ಯತೆಗಳು, ಕೋಸ್ಟ್ ಗಾರ್ಡ್ ಪಾಲು ಮತ್ತು ಸಮುದ್ರದಲ್ಲಿ ನಾವಿಕರು ಮತ್ತು ಮೀನುಗಾರರ ಸುರಕ್ಷತೆ ಮತ್ತು ಸುರಕ್ಷತೆಯ ಜವಾಬ್ದಾರಿ, ಪರಸ್ಪರ ಕಾರ್ಯಸಾಧ್ಯತೆ ಗಳ ಬಗ್ಗೆ ರಾಜ್ಯಪಾಲರು ಸಮಾಲೋಚನೆ ನಡೆಸಿದ್ದಾರೆ.












Click it and Unblock the Notifications