ಕಡಬ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಯಾರು? ಆತನ ತಯಾರಿ ಹೇಗಿತ್ತು ಗೊತ್ತಾ?
ಮಂಗಳೂರು, ಮಾರ್ಚ್ 06: ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕಡಬದ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ತೀವ್ರ ಗಾಯ ಆಗಿದೆ. ಅವರಿಗೆ ವಾರದ ಬಳಿಕ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ವೈದ್ಯರು ಹೇಳಿದ್ದಾರೆ. ಪ್ಲಾಸ್ಟಿಕ್ ಸರ್ಜರಿಗೆ ಇಪ್ಪತ್ತು ಲಕ್ಷದ ತನಕವೂ ಚಿಕಿತ್ಸಾ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಆ್ಯಸಿಡ್ ತೀವ್ರ ಪ್ರಮಾಣ ಆಗಿದ್ದರೆ ದೊಡ್ಡ ಮಟ್ಟದ ಗಾಯವಾಗುತಿತ್ತು. ಸದ್ಯ ಎಲ್ಲಾ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳಲ್ಲಿ ಮನೋಧೈರ್ಯ ಜಾಸ್ತಿ ಇದೆ. ಮಕ್ಕಳಿಗೆ ಪರೀಕ್ಷೆ ಮಾಡುವ ಬಗ್ಗೆ ಶಿಕ್ಷಣ ಸಚಿವರ ಬಳಿ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಆಸಿಡ್ ದಾಳಿಗೂ ಮುನ್ನ ಆರೋಪಿ ತಯಾರಿ ಹೇಗಿತ್ತು ಗೊತ್ತಾ?
ಕಡಬದ ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ಅಭಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆಸಿಡ್ ದಾಳಿಗೂ ಮುನ್ನ ಆತ ಹೇಗೆ ತಯಾರಿ ನಡೆಸಿದ್ದ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾರ್ಚ್ 4ರ ಸೋಮವಾರ ಬೆಳ್ಳಂಬೆಳಿಗ್ಗೆ ಕಡಬಕ್ಕೆ ಬಂದಿದ್ದ ಅಭಿನ್, ಬೆಳಗ್ಗೆ 08.03 ನಿಮಿಷಕ್ಕೆ ಕಡಬದ ದುರ್ಗಾಂಬಿಕಾ ದೇವಸ್ಥಾನ ಪಕ್ಕದ ಬೇಕರಿಗೆ ಬಂದಿದ್ದಾನೆ.

ಮೊಬೈಲ್ ಚಾರ್ಜ್ ಇಡುವ ನೆಪದಲ್ಲಿ ಬೇಕರಿಯ ಒಳಗೆ ಹೋಗಿದ್ದ ಅಭಿನ್ ಬೇಕರಿಯ ವಾಶ್ ಬೇಸಿನ್ ಪಕ್ಕದಲ್ಲಿ ಬ್ಯಾಗ್ ಇಟ್ಟು ಮೊಬೈಲ್ ಚಾರ್ಜ್‌ಗೆ ಹಾಕಿದ್ದಾನೆ. ಬಳಿಕ ಬ್ಯಾಗ್‌ನಿಂದ ಆಸಿಡ್ ಬಾಟಲ್ ತೆಗೆದು ಪ್ಯಾಂಟ್ ಕಿಸೆಯಲ್ಲಿಟ್ಟುಕೊಂಡಿದ್ದಾನೆ. ಬ್ಯಾಗ್ ಮತ್ತು ಮೊಬೈಲ್ ಬೇಕರಿಯಲ್ಲೇ ಬಿಟ್ಟು ಹೊರ ಹೋಗಿದ್ದಾನೆ. ಬಳಿಕ ಕಡಬ ತಹಶೀಲ್ದಾರ್ ಕಚೇರಿ ಬಳಿ ಬಟ್ಟೆ ಬದಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಾನು ಹಾಕಿದ್ದ ಕಪ್ಪು ಬಟ್ಟೆ ಬದಲಿಸಿ ನೀಲಿ-ಬಿಳಿ ಯೂನಿಫಾರ್ಮ್ ಧರಿಸಿದ್ದಾನೆ ಎನ್ನಲಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ ಅಭಿನ್ ಭಾನುವಾರ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಾನೆ. ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣಕ್ಕೆ ಬಂದ ಆರೋಪಿ ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದು ಬಳಿಕ ಮಂಗಳೂರಿನಿಂದ ಬಸ್ನಲ್ಲಿ ಕಡಬಕ್ಕೆ ಬಂದು ಬೆಳಗ್ಗೆ 7.30ರ ಸುಮಾರಿಗೆ ಕಡಬ ಪೇಟೆಯ ಅಂಗಡಿಯೊಂದರಲ್ಲಿ ರಬ್ಬರ್ ಬೆಳೆಗಾರರು ಬಳಸುವ ಆ್ಯಸಿಡ್ ಖರೀದಿ ಮಾಡಿದ್ದಾನೆ ಎನ್ನಲಾಗಿದೆ.
ಆ್ಯಸಿಡ್ ದಾಳಿಗೆ ಕಾರಣವೇನು?
ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು ಆರೋಪಿ ಆಬೀನ್ ಕೂಡಾ ಆಕೆಯ ಮನೆಯ ಹತ್ತಿರದ ನಿವಾಸಿಯಾಗಿದ್ದ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರ ಮುಖಾಂತರ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು ಆರೋಪಿ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಪೀತಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರ ವಿದ್ಯಾರ್ಥಿನಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ಆಕೆ ಕೂಡ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸಿರುವ ಅನುಮಾನ ವ್ಯಕ್ತವಾಗಿದೆ.











Click it and Unblock the Notifications