ಮಂಗಳೂರು: ಬಲೆಗೆ ಬಿತ್ತು 300 ಕೆ.ಜಿ. ತೂಕದ ಬೃಹತ್ ಮೀನು, ಇದರ ಮೌಲ್ಯ ಕೇಳಿದ್ರೆ ಶಾಕ್ ಆಗವುದಂತೂ ಗ್ಯಾರಂಟಿ
ಮಂಗಳೂರು, ಸೆಪ್ಟೆಂಬರ್, 29: ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು, ಇದೀಗ ಇದರ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 300 ಕೆ.ಜಿ.ಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡುಬಂದಿದೆ. ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಕೆ.ಜಿ.ಗೆ 200 ರೂಪಾಯಿ ಬೆಲೆಗೆ ಈ ಮೀನು ಮಾರಾಟವಾಗುತ್ತದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.

ಬಲೆಗೆ ಬಿದ್ದ 75 ಕೆ.ಜಿ. ತೂಕದ ಬೃಹತ್ ಮೀನು
ಮತ್ತೊಂದೆಡೆ ಮಂಗಳೂರಿನ ಸೋಮೇಶ್ವರ ಉಚ್ಚಿಲ ಸಮುದ್ರ ತಟದ ಸಮೀಪ ನಿನ್ನೆ (ಸೆಪ್ಟೆಂಬರ್ 27) ಸಂಜೆ ವೇಳೆ ಮೀನುಗಾರರು ಬೀಸಿದ ಬಲೆಗೆ 75 ಕೆ.ಜಿ. ತೂಕದ ದೈತ್ಯಗಾತ್ರದ ಪಿಲಿ ತೊರಕೆ ಮೀನೊಂದು ಬಿದ್ದಿದೆ.
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬುವರು ಸಮುದ್ರ ತೀರದಲ್ಲಿ ಬಲೆ ಹಾಕಿದ್ದರು. ಆಗ ಈ ಪಿಲಿ ತೊರಕೆ ಮೀನು ಈ ವೇಳೆ ಬಲೆಗೆ ಬಿದ್ದಿದೆ. ಈ ಬಾರಿ ತಮ್ಮ ಮೀನುಗಾರಿಕೆಯಲ್ಲಿ ದೊರೆತ ಅತಿದೊಡ್ಡ ಮೀನು ಇದಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತಹ ಅಲೆಗಳು ಬರುತ್ತಿದೆ. ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆ ಇದೆ. ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಆದರೆ ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ವ್ಯಾಪಾರ ಮಾಡುತ್ತಿದ್ದರೆ ಕೆ.ಜಿ.ಗೆ 200 ರೂಪಾಯಿಯಷ್ಟು ಮೌಲ್ಯವಿರುವ ಮೀನು ಇದಾಗಿದೆ. ಆದರೆ ಈದ್ ಮಿಲಾದ್ ಹಬ್ಬ ಇರುವುದರಿಂದ ಈ ಮೀನನ್ನು ವ್ಯಾಪಾರ ಮಾಡದೇ, ಮೀನುಗಾರರು ತಮ್ಮೊಳಗೆ ಹಂಚಿಕೊಂಡಿದ್ದಾರೆ.












Click it and Unblock the Notifications