Kadri Temple: ಕದ್ರಿ ದೇವಾಲಯಕ್ಕೆ ನುಗ್ಗಲು ಯತ್ನಿಸಿದ ಮೂವರು ಅಪರಿಚಿತ ಯುವಕರ ಬಂಧನ
ಮಂಗಳೂರು, ಮೇ, 12: ಮಂಗಳೂರು ನಗರದ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕದ್ರಿ ಶ್ರೀ ಮಂಜುನಾಥ ದೇವಾಲಯಕ್ಕೆ ನುಗ್ಗಲು ಯತ್ನಿಸಿದ ಅಪರಿಚಿತ ಅನ್ಯಕೋಮಿನ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಮೇ 11ರ ರಾತ್ರಿ ನಡೆದಿದೆ.
ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್, ಫಾರೂಕ್ ಬಂಧಿತ ಆರೋಪಿಗಳಾಗಿದ್ದಾರೆ. ಮೇ 11ರಂದು ರಾತ್ರಿ 10ಗಂಟೆ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅನ್ಯಕೋಮಿನ ಅಪರಿಚಿತ ಹಸನ್ ಶಾಹಿನ್, ಜಾಫರ್, ಫಾರೂಕ್ ಎಂಬ ಆರೋಪಿಗಳು ಬೈಕ್‌ನೊಂದಿಗೆ ದೇವಾಲಯದ ಆವರಣ ಪ್ರವೇಶಿಸಲು ಯತ್ನಿಸಿದ್ದಾರೆ. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಈ ಮೂವರನ್ನು ಕಂಡು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಕದ್ರಿ ಠಾಣಾ ಪೊಲೀಸ್ ಅಧಿಕಾರಿಗಳು, ಮೂವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬರಬೇಕಿದೆ.
ನಗರದಲ್ಲಿ ಈ ಹಿಂದೆ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಕದ್ರಿ ದೇವಾಲಯ ಆವರಣದಲ್ಲಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದ ಎಂಬ ವಿಚಾರ ಬಯಲಾಗಿತ್ತು. ಈತನ ಟಾರ್ಗೆಟ್ ಕದ್ರಿ ಶ್ರೀ ಮಂಜುನಾಥ ದೇವಾಲಯ ಆಗಿತ್ತು. ಆದರೆ ಕುಕ್ಕರ್ ಬಾಂಬ್ ಗರೋಡಿ ಬಳಿಯೇ ಸ್ಫೋಟಗೊಂಡು ಆತನ ಸಂಚು ವಿಫಲವಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.
ಕುಕ್ಕರ್ ಬಾಂಬ್ ಸ್ಫೋಟ ಘಟನೆ
ಇನ್ನು ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಅಧಿಕೃತವಾಗಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಮಂಗಳೂರು ಪೊಲೀಸರು ಆರೋಪಿ ಶಾರೀಕ್‌ನನ್ನು ವಿಚಾರಣೆ ನಡೆಸಿದ್ದು, 100ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರ ಪಡೆದಿದ್ದರು.
ಆರೋಪಿ ಶಾರೀಕ್ ವಿಚಾರಣೆ ವೇಳೆ ಹಲವಾರು ಮಹತ್ವದ ಮಾಹಿತಿ ಕಲೆ ಹಾಕಿದ ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದ ತಂಡ ಬಳಿಕ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದರು.
ಕಳೆದ ನವೆಂಬರ್ 19ರ ಶನಿವಾರ ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆರೋಪಿ ಶಾರೀಕ್ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ನವೆಂಬರ್ 19ರಿಂದ ಸುಟ್ಟ ಗಾಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಾರೀಕ್ ಮಾತನಾಡುವ ಸ್ಥಿತಿಗೆ ತಲುಪಿದ್ದಾನೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.
ಆದ್ದರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದ ತಂಡ ವೈದ್ಯರ ಸಲಹೆಯಂತೆ ಸುಮಾರು 3 ಗಂಟೆಗಳ ಕಾಲ ಶಾರೀಕ್‌ನನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಬರೋಬ್ಬರಿ 100ಕ್ಕೂ ಅಧಿಕ ಪ್ರಶ್ನೆಗಳನ್ನು ಮಂಗಳೂರು ಪೊಲೀಸರು ಶಾರೀಕ್ ಮುಂದೆ ಇಟ್ಟಿದ್ದರು. ಈ ವೇಳೆ ಆತನಿಂದ ಮಹತ್ವದ ಮಾಹಿತಿ ಹೊರಬಿದ್ದಿತ್ತು.
ಈ ಎಲ್ಲಾ ಮಾಹಿತಿಗಳನ್ನು ಎನ್‌ಐಎ ಅಧಿಕಾರಿಗಳಿಗೆ ಶೀಘ್ರದಲ್ಲೇ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದರು. ಪೊಲೀಸರು ಶಾರೀಕ್‌ನನ್ನು ಸಾಕಷ್ಟು ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದರು.
ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಮೂವರು ಎನ್‌ಐಎ ಅಧಿಕಾರಿಗಳ ತಂಡ ಪೊಲೀಸ್ ಕಮಿಷನರ್ ಶಶಿಕುಮಾರ್ ಜೊತೆ ಮಾತುಕತೆ ನಡೆಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಕಮಿಷನರ್ ಜೊತೆ ಚರ್ಚೆ ನಡೆಸಿದ್ದರು. ಶಾರೀಕ್ ಈ ಹಿಂದೆ ಉಗ್ರರ ಪರ ಬರೆದಿದ್ದ ಗೋಡೆ ಬರಹ ಪ್ರಕರಣದ ವಿವರವನ್ನು ಕಮಿಷನರ್‌ರಿಂದ ಎನ್‌ಐಎ ಅಧಿಕಾರಿಗಳು ಪಡೆದಿದ್ದರು. ಡಿಜಿ ಕಚೇರಿಯ ಸೂಚನೆಯಂತೆ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದರು.












Click it and Unblock the Notifications