ಪ್ರೇಕ್ಷಾ ಸಾವು; ವಿದ್ಯಾರ್ಥಿನಿ ಮನೆಗೆ ಯು. ಟಿ. ಖಾದರ್ ಭೇಟಿ
ಮಂಗಳೂರು, ಮಾರ್ಚ್ 12; ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುವ ಕನಸು ಕಂಡಿದ್ದ ಪ್ರೇಕ್ಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಸಾವಿನ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಶಾಸಕ ಯು. ಟಿ. ಖಾದರ್ ವಿದ್ಯಾರ್ಥಿನಿ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಮಂಗಳೂರು ನಗರದ ಹೊರವಲಯದ ಕುಂಪಲ ಬಳಿಕ ಆಶ್ರಯ ಕಾಲೋನಿ ನಿವಾಸಿ ಪ್ರೇಕ್ಷಾ (17) ಬುಧವಾರ ಸಾವನ್ನಪ್ಪಿದ್ದಳು. ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಉಳ್ಳಾಲ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯತಿನ್ರಾಜ್ ಗಟ್ಟಿ, ಸುಹಾನ್ ಮತ್ತು ಸೌರಬ್ ಎಂಬ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಯತಿನ್ರಾಜ್ ಗಟ್ಟಿ ಮತ್ತು ಪ್ರೇಕ್ಷಾ ಪ್ರೀತಿಸುತ್ತಿದ್ದರು. ಪ್ರೇಕ್ಷಾ ಸಾವನ್ನಪ್ಪಿದ ದಿನ ಆಕೆಯ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾರಣ ಯತಿನ್ರಾಜ್ ಗಟ್ಟಿ ವಿಚಾರಣೆ ನಡೆದಿದೆ.

ಮನೆಯವರಿಂದ ವಿರೋಧ; ಪ್ರೇಕ್ಷಾ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗುವುದಕ್ಕೆ ಯತಿನ್ರಾಜ್ ಮತ್ತು ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಆಕೆ ಡಿಪ್ರೆಷನ್‌ಗೆ ಒಳಗಾಗಿದ್ದಳು. ಯತಿನ್ರಾಜ್‌ಗೆ ವಿಡಿಯೋ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು ಎಂಬ ಮಾಹಿತಿಯೂ ಇದೆ.
ಆಕೆಯನ್ನು ರಕ್ಷಣೆ ಮಾಡಲು ಮನೆ ಬಳಿ ಬಂದಿದ್ದೆ ಎಂದು ಯತಿನ್ರಾಜ್ ಗಟ್ಟಿ ಪೊಲೀಸರ ತನಿಖೆ ವೇಳೆ ಹೇಳಿಕೆ ನೀಡಿದ್ದಾನೆ. ಚೆನ್ನಾಗಿ ಓದು ಮಾಡೆಲಿಂಗ್ ಬೇಡ ಎಂದು ಪ್ರೇಕ್ಷಾ ಮನೆಯವರು ಹೇಳಿದ್ದರು. ಫೋಟೋ ಶೂಟ್‌ಗೆ ಹೋಗುವುದಕ್ಕೆ ಯತಿನ್ರಾಜ್ ಗಟ್ಟಿ ವಿರೋಧ ಮಾಡಿದ್ದ.

ಈ ಎಲ್ಲಾ ಕಾರಣಗಳಿಂದಾಗಿ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಆದರೆ, ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಆಕೆಗೆ ಮಾಡೆಲಿಂಗ್ ಲೋಕದಲ್ಲಿ ಪರಿಚಿತರಾದ 6 ಜನರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಬೆಂಗಳೂರಿಗೆ ಫೋಟೋ ಶೂಟ್‌ಗೆ ಹೋಗಬೇಕಿದ್ದ ಪ್ರೇಕ್ಷಾ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು ಹೇಗೆ? ಎನ್ನುವುದು ತನಿಖೆ ಬಳಿಕ ಬಯಲಾಗಬೇಕಿದೆ. ಯತಿನ್ರಾಜ್ ಗಟ್ಟಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ಮಾಹಿತಿಯೂ ಇದ್ದು, ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ.












Click it and Unblock the Notifications