ಉಪ ಚುನಾವಣೆ; ತವರು ನೆಲದಲ್ಲಿ ಇಂದು ಯಡಿಯೂರಪ್ಪ ಮತಬೇಟೆ
ಮಂಡ್ಯ, ನವೆಂಬರ್ 25 : ಉಪ ಚುನಾವಣಾ ಪ್ರಚಾರ ಕಣ ರಂಗೇರುತ್ತಿದೆ. ಮೂರು ಪಕ್ಷಗಳು ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ಮತಯಾಚನೆ ಮಾಡಲಿದ್ದಾರೆ.
ಡಿಸೆಂಬರ್ 5ರಂದು ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ನಾರಾಯಣ ಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದು, ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದ್ದರು.
ಬಿ. ಎಸ್. ಯಡಿಯೂರಪ್ಪ ತವರು ನೆಲದಲ್ಲಿ ಇಂದು ಮತಯಾಚನೆ ಮಾಡಲಿದ್ದಾರೆ. ಕೆ. ಆರ್. ಪೇಟೆ ಕ್ಷೇತ್ರದ ಎರಡು ಕಡೆ ಬೃಹತ್ ಸಮಾವೇಶಗಳನ್ನು ಆಯೋಜನೆ ಮಾಡಲಾಗಿದೆ. ಕಿಕ್ಕೇರಿ ಮತ್ತು ಬೂಕನಕೆರೆಯಲ್ಲಿ ಸಮಾವೇಶಗಳು ನಡೆಯಲಿವೆ.
ಮೂರು ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಸಮಾವೇಶಗಳನ್ನು ಆಯೋಜನೆ ಮಾಡಲಾಗಿದೆ. ಮಧ್ಯಾಹ್ನ 1.30ಕ್ಕೆ ಕಿಕ್ಕೇರಿಯಲ್ಲಿ ಮೊದಲ ಸಮಾವೇಶ ನಡೆಯಲಿದೆ. ಬಳಿಕ ಬೂಕನಕೆರೆಯಲ್ಲಿ ಸಮಾವೇಶ ಉದ್ದೇಶಿಸಿ ಯಡಿಯೂರಪ್ಪ ಮಾತನಾಡಲಿದ್ದಾರೆ. ಜೆಡಿಎಸ್‌ನಿಂದ ಬಿ. ಎಲ್. ದೇವರಾಜು, ಕಾಂಗ್ರೆಸ್‌ನಿಂದ ಕೆ. ಬಿ. ಚಂದ್ರಶೇಖರ್ ಕ್ಷೇತ್ರದ ಅಭ್ಯರ್ಥಿಗಳು

ವಿಜಯೇಂದ್ರ ಚುನಾವಣಾ ಪ್ರಚಾರ
ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕೆ. ಆರ್. ಪೇಟೆಯಲ್ಲಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಯಡಿಯೂರಪ್ಪ ಸಹ ಆಗಮಿಸಲಿದ್ದು, ಬಿಜೆಪಿಯ ಪ್ರಚಾರ ಕಾವು ಪಡೆದುಕೊಳ್ಳಲಿದೆ. ನಾರಾಯಣ ಗೌಡ ಗೆಲುವಿಗಾಗಿ ಬಿಜೆಪಿ ನಾಯಕರು ಸತತ ಪ್ರಯತ್ನ ನಡೆಸುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪ್ರಚಾರ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಇಂದು ಕೆ. ಆರ್. ಪೇಟೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಪರವಾಗಿ ಕಸಬ ಹೋಬಳಿ ವ್ಯಾಪ್ತಿಯಲ್ಲಿ ನಿಖಿಲ್ ಮತಯಾಚನೆ ಮಾಡಲಿದ್ದಾರೆ.

ಜೋಡೆತ್ತುಗಳು ಹೇಳಿಕೆಗೆ ಟೀಕೆ
ಶನಿವಾರ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ನಾರಾಯಣ ಗೌಡ ಮತ್ತು ವಿಜಯೇಂದ್ರ ಜೋಡೆತ್ತುಗಳು. ಈ ಜೋಡೆತ್ತುಗಳ ನೇತೃತ್ವದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಜನರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಜೋಡೆತ್ತುಗಳ ಕೈ ಬಲಪಡಿಸಿ" ಎಂದು ಕರೆ ನೀಡಿದ್ದರು.

ಜೋಡೆತ್ತಗಳಲ್ಲ ಕುಂಟೆತ್ತು
"ನಾರಾಯಣ ಗೌಡ ಮತ್ತು ವಿಜಯೇಂದ್ರ ಜೋಡೆತ್ತುಗಳಲ್ಲಿ ಕುಂಟೆತ್ತುಗಳು. ಜನರಿಗೆ ಯಾರು ದುಡಿಯುವ ಎತ್ತುಗಳು ಅಂತ ಗೊತ್ತು. ಯಾರಿಗೆ ಮತ ಹಾಕಬೇಕು ಎಂಬುದು ತಿಳಿದಿದೆ. ಗೆದ್ದ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗುವುದು ಎಂತಹ ಸ್ವಾಭಿಮಾನ?" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಟೀಕಿಸಿದ್ದಾರೆ.












Click it and Unblock the Notifications