ಮಂಡ್ಯದಲ್ಲಿ ಡಿಸೆಂಬರ್ 3 ವಿಶ್ವ ವಿಕಲಚೇತನರ ದಿನಾಚರಣೆ: ಕಾರ್ಯಕ್ರಮದ ವಿಶೇಷತೆಯೇನು..?
ಮಂಡ್ಯ, ನವೆಂಬರ್ 21: ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 3ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಸುವ್ಯವಸ್ಥಿತವಾಗಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ತಿಳಿಸಿದ್ದಾರೆ. ವಿಶ್ವ ವಿಕಲ ಚೇತನರ ದಿನಾಚರಣೆಯ ಪ್ರಯುಕ್ತ ವಿಕಲಚೇತನರ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಅಭಿಯಾನ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿಕಲಚೇತನ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.
ವಿಶ್ವ ವಿಕಲ ಚೇತನರ ದಿನಾಚರಣೆಯ ಅಂಗವಾಗಿ 2024 -25 ನೇ ಸಾಲಿನಲ್ಲಿ ವಿಕಲಚೇತನರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನವೆಂಬರ್ 22ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ವಿಕಲಚೇತನರುಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ವಿಕಲಚೇತನರ ದಿನಾಚರಣೆಯಂದು ನೀಡಲಾಗುವುದು ಎಂದರು.

ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ವಿವರ
ಇಡೀ ಜಿಲ್ಲೆಯಾದ್ಯಂತ ನವೆಂಬರ್ 25 ರಿಂದ ಡಿಸೆಂಬರ್ 1 ರವರೆಗೆ ಸರ್ಕಾರದಿಂದ ವಿಕಲ ಚೇತನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಅರ್ಹವಿಕಲಚೇತನರುಗಳು ಪಡೆಯಬೇಕು ಎಂದರು.
ಪುರುಷರ ವಿಭಾಗ
ಪುರುಷರ ವಿಭಾಗದಲ್ಲಿ 6 ರಿಂದ 12 ವರ್ಷ, 13 ರಿಂದ 18, 19-35 ಒಳಪಟ್ಟ ಹಾಗೂ 36 ವರ್ಷ ಮೇಲ್ಪಟ್ಟ ಬುದ್ಧಿಮಾಂದ್ಯ ವಿಕಲಚೇತನರ ವಿಭಾಗಕ್ಕೆ ಚೆಂಡು ಎಸೆತ ಹಾಗೂ ಬಕೆಟ್ ಬಾಲ್ ಪಂದ್ಯ, ಶ್ರವಣದೋಷವುಳ್ಳ ವಿಕಲಚೇತನರ ವಿಭಾಗಕ್ಕೆ ಗುಂಡು ಎಸೆತ ಹಾಗೂ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆ, ಅಂಧವಿಕಲ ಚೇತನರ ವಿಭಾಗಕ್ಕೆ ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಚೆಂಡು ಎಸೆತ ಸ್ಪರ್ಧೆ, ದೈಹಿಕ ವಿಕಲಚೇತನರ ವಿಭಾಗಕ್ಕೆ ಗುಂಡು ಎಸೆತ ಹಾಗೂ ಪಾಸಿಂಗ್ ದಿ ಬಾಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಹಿಳಾ ವಿಭಾಗ
ಮಹಿಳಾ ವಿಭಾಗದಲ್ಲಿ 6 ರಿಂದ 12 ವರ್ಷ, 13 ರಿಂದ 18, 19-35 ಒಳಪಟ್ಟ ಹಾಗೂ 36 ವರ್ಷ ಮೇಲ್ಪಟ್ಟ ಬುದ್ಧಿಮಾಂದ್ಯ ವಿಕಲಚೇತನರ ವಿಭಾಗಕ್ಕೆ ಚೆಂಡು ಎಸೆತ ಹಾಗೂ ಬಕೆಟ್ ಬಾಲ್ ಪಂದ್ಯ, ಶ್ರವಣದೋಷವುಳ್ಳ ವಿಕಲಚೇತನರ ವಿಭಾಗಕ್ಕೆ ಗುಂಡು ಎಸೆತ ಹಾಗೂ ಲೆಮನ್ ಅಂಡ್ ಸ್ಪೂನ್ ಸ್ಪರ್ಧೆ, ಅಂಧ ವಿಕಲ ಚೇತನರ ವಿಭಾಗಕ್ಕೆ ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಚೆಂಡು ಎಸೆತ ಸ್ಪರ್ಧೆ, ದೈಹಿಕ ವಿಕಲಚೇತನರ ವಿಭಾಗಕ್ಕೆ ಗುಂಡು ಎಸೆತ ಹಾಗೂ ಪಾಸಿಂಗ್ ದಿ ಬಾಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು

ಇನ್ನು ಜಿಲ್ಲೆಯಲ್ಲಿರುವ ಅರ್ಹ ವಿಕಲ ಚೇತನರುಗಳಿಗೆ ಸರ್ಕಾರದಿಂದ ದೊರೆಯುವ ಪಿಂಚಣಿ ಸೌಲಭ್ಯವು ದೊರೆಯಬೇಕು. ಅರ್ಹ ಸೌಲಭ್ಯ ವಂಚಿತರಿಂದ ಅರ್ಜಿ ಸ್ವೀಕೃತಿ ಮಾಡಿ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಕಲಚೇತನರುಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಸಂಸ್ಥೆಗಳಿದ್ದು, ಶಿಕ್ಷಣವನ್ನು ಮುಂದುವರಿಸದೆ ಅನೇಕ ಕಾರಣದಿಂದ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿರುವ ವಿಕಲಚೇತನರುಗಳಿಗೆ ಈ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ಪಡೆಯುವಂತೆ ತಿಳಿಸಬೇಕು. ಜೊತೆಗೆ ಪಿಯುಸಿ ಹಾಗೂ ಪದವಿ ಮುಗಿಸಿರುವ ಆಸಕ್ತ ವಿಕಲಚೇತನರುಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉಚಿತ ವಸತಿ, ಊಟದ ಜೊತೆ 4 ಅಥವಾ 6 ತಿಂಗಳ ಉಚಿತ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್, ಶಿಕ್ಷಣ ಇಲಾಖೆಯ ಚಂದ್ರಶೇಖರ್, ಅಲಿಮ್ಕೋ, ಸಂಸ್ಥೆಯ ಅಧಿಕಾರಿ ಡಾ ಎಲ್ ಸರ್ಕಾರ್, ವಿಕಲಚೇತನರ ಸಂಘ ಸಂಸ್ಥೆಯ ಮುಖಂಡರುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೋಡೆಲ್ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications