ಮಂಡ್ಯ: ಕಾಡಾನೆ ದಾಳಿಗೆ ಮಹಿಳೆ ಸಾವು, ಗ್ರಾಮಸ್ಥರ ಆಕ್ರೋಶ
ಮಂಡ್ಯ, ನವೆಂಬರ್ 19: ಜಮೀನಿನ ಬಳಿ ತೆರಳಿದ್ದ ಮಹಿಳೆ ಮೇಲೆ ಕಾಡಾನೆಗಳ ಹಿಂಡು ದಾಳಿ ಮಾಡಿದ ಘಟನೆ ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಲಾಳನಕೆರೆ ಗ್ರಾಮದ ಕಾರ್ಮಿಕ ಮಹಿಳೆ ಸಾಕಮ್ಮ ಬಿನ್ ಲೇ. ಸಿದ್ದಪ್ಪ (50) ಮೃತ ದುರ್ದೈವಿ.
ಸಾಕಮ್ಮ ಭಾನುವಾರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಜಮೀನಿನ ಬಳಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಸಾಕಮ್ಮ ಪೀಹಳ್ಳಿ ಗ್ರಾಮದ ಮಾಲೀಕರೋಬ್ಬರ ಜಮೀನಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದರು ಇವರ ಜೊತೆ ಎಂಟಕ್ಕೂ ಹೆಚ್ಚು ಮಂದಿ ಕೂಲಿ ಕೆಲಸಕ ಮಾಡುತ್ತಿದ್ದರು.

ಆನೆ ಪ್ರತ್ಯಕ್ಷವಾಗಿರುವ ಬಗ್ಗೆ ಯಾವುದೇ ಸುಳಿವು ಇಲ್ಲದ ಹಿನ್ನೆಲೆಯಲ್ಲಿ ಭಯ ಪ್ರೀತಿ ಇಲ್ಲದೆ ಕೆಲಸ ಮಾಡುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಬಿಡು ಬಿಟ್ಟಿದ್ದ ಆನೆಗಳ ಹಿಂಡಿನಲ್ಲಿದ್ದ ಸಲಗ ಈ ವೇಳೆ ಮಹಿಳೆ ಮೇಲೆ ಏಕಾಏಕಿ ದಾಳಿ ಮಾಡಿದ್ದು, ತಪ್ಪಿಸಿಕೊಳ್ಳಲು ಸಾಕಮ್ಮ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್ ಇತರ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತ ನಡೆದ ಹಿನ್ನೆಲೆಯಲ್ಲಿ ನೂರಾರು ಜನ ಜಮಾಯಿಸಿ ಕಬ್ಬಿನ ಗದ್ದೆಯಲ್ಲೇ ಬಿಡು ಬಿಟ್ಟಿರುವ ಆನೆಗಳ ಹಿಂಡು ಓಡಿಸಲು ಪ್ರಯತ್ನಿಸಿ ಹಲವರು ಕಲ್ಲು ತೂರಿದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಮೇಲೆ ಕಲ್ಲು ತೂರದಂತೆ ಮತ್ತು ಅವುಗಳ ಸಮೀಪ ಹೋಗದಂತೆ ಮನವಿ ಮಾಡಿದ್ದು, ಆದರೆ ರೊಚ್ಚಿಗೆದ್ದ ಜನತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಗ್ರಾಮಾಂತರ ಪೊಲೀಸರು ತೆರಳಿದ್ದು, ಕಾಡಾನೆಗಳನ್ನು ಗ್ರಾಮದಿಂದ ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿದ್ದಾರೆ. ಆನೆ ದಾಳಿಯಿಂದ ಮಹಿಳೆ ಸಾವನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಾ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆನೆಗಳ ಹಿಂಡನ್ನು ಕಾಡಿಗಟ್ಟಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಸಾಂತ್ವನ ಹೇಳಿದರು.












Click it and Unblock the Notifications