ಮಂಡ್ಯ ರಾಜಕೀಯ; ಮಾಜಿ ಶಾಸಕ ಜೆಡಿಎಸ್‌ಗೆ ವಾಪಸ್?
ಮಂಡ್ಯ, ಫೆಬ್ರವರಿ 15; ಮಂಡ್ಯ ರಾಜಕೀಯದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕಾಂಗ್ರೆಸ್ ನಾಯಕ, ಎರಡು ಬಾರಿ ಶಾಸಕರಾಗಿದ್ದ ನಾಯಕರೊಬ್ಬರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆ ಆತ್ಮೀಯವಾಗಿ ಮಾತನಾಡಿದ್ದು ಗುಸು ಗುಸು ಸುದ್ದಿಗೆ ಕಾರಣವಾಗಿದೆ.
ಶ್ರೀರಂಗಪಟ್ಟಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಎ. ಬಿ. ರಮೇಶ್ ಬಂಡಿಸಿದ್ದೇಗೌಡ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಚ್. ಡಿ. ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಪೋಟೋಗಳು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಐದು ವರ್ಷಳಿಂದ ಒಟ್ಟಾಗಿ ಕಾಣಿಸಿಕೊಳ್ಳದ ನಾಯಕರು ವೇದಿಕೆ ಹಂಚಿಕೊಂಡಿದ್ದು, ಪರಸ್ಪರ ನಗುತ್ತಾ ಮಾತನಾಡುತ್ತಿರುವುದು ಜನರಲ್ಲಿ ಕುತೂಹಲ ಹುಟ್ಟುಹಾಕಿದೆ. 'ಜೆಡಿಎಸ್ ನತ್ತ ರಮೇಶಬಾಬು ಬಂದಿಸಿದ್ದೇಗೌಡ. ಮಂಡ್ಯ ಕಕ್ಷೇತ್ರದ ಟಿಕೆಟ್ ಗಾಗಿ ಲಾಬಿ' ಎಂಬ ಬರಹವಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಎಚ್. ಡಿ. ಕುಮಾರಸ್ವಾಮಿ ಪಕ್ಷದಿಂದ ಬಂಡಾಯವೆದ್ದು ಹೋದ ನಾಯಕರ ವಿರುದ್ದ ಸದಾ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದೇ ಮಾತನಾಡುತ್ತಾರೆ. ಇಂತಹ ಸಂದರ್ಭದಲ್ಲಿ ಎ. ಬಿ. ರಮೇಶ್ ಬಂಡಿಸಿದ್ದೇಗೌಡ ಜೊತೆ ಆತ್ಮೀಯವಾಗಿ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸೇರಿದ್ದರು ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎ. ಬಿ. ರಮೇಶ್ ಬಂಡಿಸಿದ್ದೇಗೌಡ 2018ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸೇರಿದ್ದರು. ಜೆಡಿಎಸ್ ಪಕ್ಷದ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ಸೇರಿದ ನಾಯಕರಲ್ಲಿ ಎ. ಬಿ. ರಮೇಶ್ ಬಂಡಿಸಿದ್ದೇಗೌಡ ಸಹ ಒಬ್ಬರಾಗಿದ್ದರು. ಈಗ ಅವರು ಎಚ್. ಡಿ. ಕುಮಾರಸ್ವಾಮಿ ಜೊತೆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದು ಮಂಡ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲು
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಎ. ಬಿ. ರಮೇಶ್ ಬಂಡಿಸಿದ್ದೇಗೌಡ 2018ರ ವಿಧಾನಸಭೆ ಚುನಾವಣೆಗೆ ಶ್ರೀರಂಗಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. 57,619 ಮತಗಳನ್ನು ಪಡೆದ ರಮೇಶ್ ಬಂಡಿಸಿದ್ದೇಗೌಡ, ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಸೋಲು ಕಂಡರು. ರವೀಂದ್ರ ಶ್ರೀಕಂಠಯ್ಯ 101,307 ಮತಗಳನ್ನು ಪಡೆದಿದ್ದರು.

ಭೇಟಿಯಲ್ಲಿ ಯಾವುದೇ ಬೇರೆ ಅರ್ಥವಿಲ್ಲ
ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಚ್. ಡಿ. ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡ ಕುರಿತು ಎ. ಬಿ. ರಮೇಶ್ ಬಂಡಿಸಿದ್ದೇಗೌಡ ಸ್ಪಷ್ಟನೆ ನೀಡಿದ್ದಾರೆ. "ಅದೊಂದು ನುಡಿ ನಮನ ಕಾರ್ಯಕ್ರಮ. ಬಹಳ ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಭೇಟಿ ಮಾಡಿದೆವು. ಅಲ್ಲಿ ರಾಜಕಾರಣ, ಮುನಿಸು ಯಾವುದೂ ಇರಲಿಲ್ಲ. ಕುಮಾರಸ್ವಾಮಿ ಜೊತೆ ಆತ್ಮೀಯವಾಗಿ ಮಾತನಾಡಿದೆ. ಅದರಲ್ಲಿ ಬೇರೆ ಯಾವುದೇ ಅರ್ಥವಿಲ್ಲ" ಎಂದು ಹೇಳಿದ್ದಾರೆ.
Recommended Video

ಒಟ್ಟಾಗಿ ಕೆಲಸ ಮಾಡೋಣ ಬನ್ನಿ
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಪಕ್ಷದ ನಾಯಕರಿಗೆ ಕರೆಯೊಂದನ್ನು ನೀಡಿದ್ದಾರೆ. "ಜೆಡಿಎಸ್ ತೊರೆದು ಹೋಗುವ ಯೋಚನೆಯಲ್ಲಿ ಇರುವವರಿಗೆ ಈಗಲೂ ಕಾಲ ಮಿಂಚಿಲ್ಲ. ಒಟ್ಟಿಗೆ ಕೆಲಸ ಮಾಡೋಣ ಬನ್ನಿ. ಕೇವಲ 123 ಎಂದು ಫಲಕ ಹಾಕಿಕೊಂಡರೆ ಆಗುತ್ತಾ?, ಪಕ್ಷ ಸಂಘಟನೆ ಮಾಡಬೇಕು. ಜೆಡಿಎಸ್ ಬಿಟ್ಟು ಹೋಗಲು ಸಜ್ಜಾಗಿರುವವರು ಜೊತೆಗೆ ಬಂದರೆ ಒಟ್ಟಾಗಿ ಸಾಗುತ್ತೇವೆ" ಎಂದು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರೆ ಕೊಟ್ಟರು.
ಹಾಸನದಲ್ಲಿ ಆಯೋಜನೆ ಮಾಡಿದ್ದ ಜೆಡಿಎಸ್ ಕಾರ್ಯಕ್ರಮಕ್ಕೆ ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇಗೌಡ, ಎ. ಟಿ. ರಾಮಸ್ವಾಮಿ ಗೈರಾಗಿದ್ದರು. ಈ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಎಚ್. ಡಿ. ದೇವೇಗೌಡರು ಒಟ್ಟಾಗಿ ಹೋಗುವ ಕರೆಯನ್ನು ಕೊಟ್ಟರು ಮತ್ತು ಎ. ಟಿ. ರಾಮಸ್ವಾಮಿ ಪಕ್ಷ ತೊರೆದು ಹೋಗಬಹುದು ಎಂದು ನಾನು ಹೇಳಿರಲಿಲ್ಲ ಎಂದು ಸ್ಪಷ್ಟನೆ ಸಹ ನೀಡಿದರು.











Click it and Unblock the Notifications