Sumalatha Ambareesh: ಬಿಜೆಪಿಗೆ ಸುಮಲತಾ ಅಂಬರೀಷ್ ಬೆಂಬಲ ನೀಡಿದ್ದು ಯಾಕೆ? ಕಾರಣ ಇಲ್ಲಿದೆ
ಮಂಡ್ಯ ಜನವರಿ 30: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮೊಚ್ಚಿಕೊಂಡಿದ್ದು ಬಿಜೆಪಿಗೆ ತಮ್ಮ ಬೆಂಬಲ ಇರಲಿದೆ ಎಂದು ಹೇಳಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯಲ್ಲಿ ಕೂಡ ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ. ನನಗೆ ಮಂಡ್ಯದ ಜನರ ಸೇವೆ ಮಾಡಬೇಕು ಎನ್ನುವ ಆಸೆ ಇದೆ' ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ಭರ್ಜರಿಯಾಗಿದೆ. ಒಂದೆಡೆ ಪಕ್ಷ ತೊರೆದವರನ್ನ ಮತ್ತೆ ತವರಿಗೆ ಬರಮಾಡಿಕೊಳ್ಳುವ ಪ್ಲ್ಯಾನ್ ನಡೆಯುತ್ತಿದ್ದರೆ ಇನ್ನೊಂದೆಡೆ ಯಾರನ್ನ ಎಲ್ಲಿ ನಿಲ್ಲಿಸಿದರೆ ಪಕ್ಷಕ್ಕೆ ಲಾಭ ಎನ್ನುವ ಲೆಕ್ಕಚಾರಗಳು ನಡೆಯುತ್ತಿವೆ. ಈ ಲೆಕ್ಕಾಚಾರದಲ್ಲಿ ಮಂಡ್ಯ ಜಿಲ್ಲೆ ಕೂಡ ಸೇರಿದೆ.
ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ಸಕಲ ಸಿದ್ದತೆಗಳನ್ನು ಪ್ರಬಲ ಪಕ್ಷಗಳು ನಡೆಸಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ರಾಜ್ಯ ರಾಜಕೀಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡರೆ ಮಂಡ್ಯದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ನಡುವೆ ಬೇರೆ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು,' ಮಂಡ್ಯದ ಜನ ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಟ್ಟಿದ್ದಾರೆ. ನನ್ನ ಸ್ವಾರ್ಥಕ್ಕೆ ನಾನು ಮಂಡ್ಯದಿಂದ ದೂರ ಸರಿಯುವುದಿಲ್ಲ' ಎಂದು ಹೇಳಿದ್ದಾರೆ. ಇದೇ ವೇಳೆ ಸುಮಲತಾ ಅವರು,' ಹೆಚ್‌ಡಿ ಕುಮಾರಸ್ವಾಮಿ ಅವರು ಸುಮಾರು ಬಾರಿ ನಮ್ಮ ಮನೆಗೆ ಬಂದಿದ್ದಾರೆ. ಅವರು ಬಂದರೆ ನಾನು ಅವರನ್ನು ಗೌರವದಿಂದ ಸ್ವಾಗತಿಸುತ್ತೇನೆ. ಆದರೆ ನನಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ತಿಳಿದಿಲ್ಲ' ಎಂದು ಅವರು ಹೇಳಿದರು.
'ಸುಮಾರು ಜನ ನನಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಹೇಳುತ್ತಿದ್ದಾರೆ. ಯಾಕೆಂದರೆ ಅಂಬರೀಷ್ ಅವರು ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷ ಇದ್ದವರು. ಹೀಗಾಗಿ ಹಲವಾರು ನಾಯಕರು ಬೆಂಬಲ ಕೊಡುತ್ತೇವೆ ಬನ್ನಿ ಎಂತಲೂ ಕರೆದಿದ್ದಾರೆ. ನಮ್ಮ ಮನೆ ಬಾಗಿಲು ಎಲ್ಲರಿಗೂ ಮುಕ್ತವಾಗಿ ತೆರೆದಿರುತ್ತದೆ. ನನ್ನ ಮನಸು ಯಾವ ರೀತಿ ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ' ಎಂದು ಸುಮಲತಾ ಅವರು ಹೇಳಿದರು.
2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಅಧಿಕ ಮತಗಳಿಂದ ಜಯಗಳಿಸಿದ್ದರು. ಮಂಡ್ಯದ ಜನ ಅವರನ್ನು ಬೆಂಬಲಿಸಿ ಬಹುಮತಗಳನ್ನು ನೀಡಿ ಗೆಲ್ಲಿಸಿದ್ದರು. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಾಗೂ ರಾಕಿಂಗ್ ಸ್ಟಾರ್ ಯಶ್ ಕೂಡ ಅವರಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ಭಾಗವಹಿಸಿದ್ದರು. ಇವರ ವಿರುದ್ಧ ಜೆಡಿಎಸ್ ಪಕ್ಷದ ಅಭ್ಯರ್ಥಿ ಹಾಗೂ ಹೆಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು.
ಈ ವೇಳೆ ಜೆಡಿಎಸ್ ಸುಮಲತಾ ಅವರಿಗೆ ಕಠಿಣ ಸ್ಪರ್ಧಿ ನೀಡಲು ಪ್ರಯತ್ನಿಸಿತು. ಆದರೆ ಯಶ್, ದರ್ಶನ್ ಪ್ರಚಾರ ಹಾಗೂ ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ಮೇಲೆ ಜನರಿಗಿದ್ದ ಪ್ರೀತಿ, ಅಭಿಮಾನ ಸುಮಲತಾ ಅವರ ಗೆಲ್ಲಿಸಿಕೊಟ್ಟಿತು.
ಆದರೀಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ಮುಂದಾಗಿದೆ. ಸುಮಲತಾ ಕೂಡ ಬಿಜೆಪಿಗೆ ಬೆಂಬಲಿ ಸೂಚಿಸಿದ್ದಾರೆ. ಹೀಗಿರುವಾಗ ಮಂಡ್ಯದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ.












Click it and Unblock the Notifications