ಮಂಡ್ಯದಲ್ಲಿ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಜನರಿಗೆ ನೀವೇನು ಕೊಟ್ಟಿದ್ದೀರಿ?: ಸುಮಲತಾ ಹೀಗೆ ಪ್ರಶ್ನೆ ಮಾಡಿದ್ದು ಯಾರಿಗೆ?
ಮಂಡ್ಯ, ಏಪ್ರಿಲ್, 20: ಸಾಧನೆಗಳನ್ನು ಇಟ್ಟುಕೊಂಡು ಮತ ಕೇಳಬೇಕೇ ಹೊರತು ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುವ ಕೆಲಸಕ್ಕೆ ಇಳಿಯಬಾರದು ಎಂದು ಸಂಸದೆ ಸುಮಲತಾ ಅಂಬರೀಶ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಂಡ್ಯದಲ್ಲಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಗರ ಬಿಜೆಪಿ ವಿಕಾಸಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳ ಏಳಕ್ಕೆ ಏಳೂ ಶಾಸಕರನ್ನು ಕೊಟ್ಟ ಜನರಿಗೆ ನೀವೇನು ಕೊಟ್ಟಿದ್ದೀರಿ. ಲೂಸ್‌ಟಾಕ್ ಮಾಡಿಕೊಂಡು ಜನರ ಸಿಂಪತಿ ಗಿಟ್ಟಿಸುವುದನ್ನು ಇನ್ನಾದರು ಬಿಡಬೇಕು ಎಂದು ಹೇಳಿದರು.

ದುರಂಹಕಾರದ ಪರಮಾವಧಿ ಎಂದರೆ ನಿಮ್ಮ ಪಕ್ಷದ ಶ್ರೀರಂಗಪಟ್ಟಣದ ಶಾಸಕರಿಗೇ ಎಂಬುದು ಜಿಲ್ಲೆಯ ಜನರಿಗಷ್ಟೇ ಅಲ್ಲದೆ, ನಿಮ್ಮ ಕಾರ್ಯಕರ್ತರಿಗೂ ಗೊತ್ತಿಗೆ. ಅಲ್ಲದೆ ಸುಮಲತಾಗೆ ದುರಂಹಕಾರವಿಲ್ಲ ಎಂದು ಶ್ರೀರಂಗಪಟ್ಟಣದಲ್ಲಿ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು. ನಿಮ್ಮ ಪಕ್ಷದಿಂದ ಆಗಿರುವ ಅನ್ಯಾಯದಿಂದ ಬೇಸತ್ತು ನಿಮ್ಮ ಶಾಸಕರೇ ನಿಮ್ಮ ವಿರುದ್ಧ ತಿರುಗಿಬಿದಿದ್ದಾರೆ. ಇದಕ್ಕೆ ನಿನ್ನೆ, ಮೊನ್ನೆ ನಡೆದ ವಿದ್ಯಮಾನಗಳೇ ಕಾರಣವಾಗಿದೆ ಎಂದರು.
ನೀವು ನಿಮ್ಮ ಶಾಸಕರಿಗೆ ಮೊದಲು ಉತ್ತರ ಕೊಡಬೇಕು. ತಮ್ಮ ಜೇಬಿನಲ್ಲೇ ಕೆಂಡ ಇಟ್ಟುಕೊಂಡು ಬೇರೆಯವರ ಮನೆಯ ಬೆಂಕಿಯ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸಿಗರಿಂದ ಅಪಮಾನ
ಈ ವ್ಯಕ್ತಿಯ ಪತಿಯಿಂದ ಯಾವುದೇ ಅನುಕೂಲವಾಗಲಿಲ್ಲ ಎಂದು ಅಂಬರೀಶ್ ಬಗ್ಗೆ ಕೇವಲವಾಗಿ ಮಾತನಾಡುತ್ತಾರೆ. ಅಂಬರೀಶ್ ಅವರನ್ನು ಕಳೆದ ಬಾರಿ ಕಾಂಗ್ರೆಸಿಗರು ಅಪಮಾನ ಮಾಡಿದ್ದರು. ಆದ್ದರಿಂದ ಸಿಡಿದೆದ್ದ ಜಿಲ್ಲೆಯ ಜನತೆ ಜೆಡಿಎಸ್‌ಗೆ ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲಿಸಿಕೊಟ್ಟು ಕಾಂಗ್ರೆಸ್ ಅನ್ನು ತಿರಸ್ಕರಿಸಿದರು. ಆ ಗೆಲುವಿನಿಂದಲೇ ಕುಮಾರಸ್ವಾಮಿ ಅವರು ಸಿಎಂ ಆದರು. ಇಷ್ಟೆಲ್ಲಾ ಆದರೂ ಸಹ ಏನೂ ಆಗಿಲ್ಲ ಎನ್ನುವುದು ದುರಹಂಕಾರದ ಮಾತು ಎಂದು ಆಕ್ರೋಶ ವ್ಯಕ್ತಪಡಿಸಿದರು.

7ಕ್ಕೆ 7 ಸ್ಥಾನಗಳನ್ನೂ ಗೆದ್ದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ರಾತ್ರಿ ನಮ್ಮ ಮನೆಗೆ ಬಂದು ಊಟ ಮಾಡಿದ್ದಾರೆ. ಅಂಬರೀಶ್ ಅವರಿಗೆ ಅಭಿನಂದನೆ ಹೇಳಿಹೋಗುತ್ತಾರೆ. ಬಳಿಕ ಅವರಿಗೆ ಗೌರವವನ್ನು ಕೊಟ್ಟೆ ಎಂದು ಸಾವಿನ ರಾಜಕಾರಣ ಮಾಡುತ್ತಾರೆ ಎಂದು ಜರಿದರು.
ಅಂಬರೀಶ್ ಅವರ ಲಕ್ಷಾಂತರ ಅಭಿಮಾನಿಗಳು, ರಾಜ್ಯದ ಜನರ ಒತ್ತಾಯ, ಒತ್ತಡಕ್ಕೆ ಮಣಿದು ಮಂಡ್ಯಕ್ಕೆ ಅವರ ಪಾರ್ಥೀವ ಶರೀರವನ್ನು ತರುವ ಕೆಲಸ ಮಾಡಿದ್ದೀರಿ. ಅವರೇ ಸ್ವಇಚ್ಚೆಯಿಂದ ಮಾಡಲಿಲ್ಲ. ಆದರೂ ಆ ಬಗ್ಗೆ ನಾನು ಕೃತಜ್ಞ ಭಾವನೆ ಹೊಂದಿದ್ದೇನೆ. ಇದನ್ನೇ ಇಟ್ಟುಕೊಂಡು ತಮಗೆ ರಾಜಕೀಯವಾಗಿ ಅನುಕೂಲ ಆಗಬೇಕು ಎಂದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಪಕ್ಷವನ್ನು ಕಟ್ಟಿದ್ದು ನಾವೇ ಎಂದು ಹೇಳಿಕೊಂಡು ದೊಡ್ಡ ದೊಡ್ಡ ನಾಯಕರು ಮೆರೆಯುತ್ತಿದ್ದಾರೆ. ಆದರೆ ಅವರನ್ನೆಲ್ಲಾ ಬೆಳೆಸಿದ್ದು ಎಸ್.ಡಿ. ಜಯರಾಂ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. 2013ರಲ್ಲಿ ಅಂಬರೀಶ್ ಚುನಾವಣೆಗೆ ಸ್ಪರ್ಧಿಸಿದ ವೇಳೆ ಅಶೋಕ್ ಜಯರಾಂ ಸಹ ನಿಲ್ಲಬೇಕಿತ್ತು. ಆತನನ್ನು ಮನವೊಲಿಸಿ ಸ್ಪರ್ಧೆಯಿಂದ ತೆಗೆಸಿ ಅಂದೇ ಅನ್ಯಾಯ ಮಾಡಿದರು ಎಂದು ಟೀಕಿದರು.
ನಿಖಿಲ್ ಸೋತ ತಕ್ಷಣ ಯುವರಾಜನ ಪಟ್ಟ
ತಾವು ಹೋದ ಸಭೆ-ಸಮಾರಂಭಗಳಲ್ಲಿ ನನ್ನ ಮಗ ಬೇರೆಯಲ್ಲ, ಅಶೋಕ್, ವಿಜಯ್ ಆನಂದ್ ಬೇರೆಯಲ್ಲ ಎಂದು ಹೇಳುತ್ತಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋತ ತಕ್ಷಣ ಅವರಿಗೆ ಯುವರಾಜನ ಕಿರೀಟ ಕೊಡುತ್ತಾರೆ. ನಮ್ಮದು ರೈತರ ಪಕ್ಷ, ಸಾಮಾನ್ಯರು, ಬಡವರ ಪಕ್ಷ ಎಂದು ಹೇಳಿಕೊಳ್ಳುವ ನೀವು ಏಕೆ ಸಾಮಾನ್ಯ ಕಾರ್ಯಕರ್ತನಿಗೆ ಯುವರಾಜನ ಪಟ್ಟ ಕೊಡಲಿಲ್ಲ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಯುವರಾಜ ನಿಖಿಲ್ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲೂ ಒಂದೇ ಒಂದು ಸಭೆ ನಡೆಸಲಿಲ್ಲ. ಅಷ್ಟೇ ಏಕೆ ಮಂಡ್ಯದಲ್ಲೂ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟನೆಯನ್ನೂ ಮಾಡಿಲ್ಲ. ಆದರೂ ಅವರಿಗೆ ರಾಮನಗರದಿಂದ ಟಿಕೆಟ್ ಕೊಟ್ಟಿದ್ದೀರಿ. ಬೇರೆಯವರ ಮಕ್ಕಳಿಗಾದರೆ ಒಂದು ನ್ಯಾಯ, ತಮ್ಮ ಮಕ್ಕಳಿಗಾದರೆ ಮತ್ತೊಂದು ನ್ಯಾಯ. ಹಾಗಾದರೆ ಬೇರೆಯವರ ಮಕ್ಕಳೆಲ್ಲಾ ಅನಾಥರೇ ಎಂದು ಛೇಡಿಸಿದರು.
ಅಲ್ಲದೆ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕೈದು ಸ್ಥಾನಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ ಬಳಿಕ ಶಿವರಾಮೇಗೌಡರು ಸಿಕ್ಕಾಗ ಕ್ಷಮೆಯಾಚಿಸಿ, ಪಕ್ಷದ ಮುಖಂಡರ ಒತ್ತಡದಿಂದಾಗಿ ನಾನು ಆ ಮಾತು ಹೇಳಬೇಕಾಗಿಯಿತು. ಅವರನ್ನು ಎದುರು ಹಾಕಿಸಿಕೊಂಡು ಪಕ್ಷದಲ್ಲಿ ಉಳಿಯದ ಸ್ಥಿತಿಯಿಂದಾಗಿ ನಾನು ಆ ಮಾತನ್ನು ಹೇಳಿದ್ದೆ. ದಯವಿಟ್ಟು ಏನೂ ಇಟ್ಟುಕೊಳ್ಳಬೇಡಿ ಎಂದು ಕೇಳಿಕೊಂಡಿದ್ದರು.
ಶಿವರಾಮೇಗೌಡರ ಪತ್ನಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಅವರೂ ಸಹ ಕ್ಷೇತ್ರದಾದ್ಯಂತ ಒಳ್ಳೆಯ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿದ್ದಾರೆ. ಅದೂ ಒಬ್ಬ ಮಹಿಳೆಗೆ ಟಿಕೆಟ್ ಕೊಡುವಾಗ ನಾನೇಕೆ ಅಪಸ್ವರ ತೆಗೆಯಲಿ ಎಂಬುದು ನನ್ನ ನಿಲುವಾಗಿತ್ತು ಎಂದು ಸಮರ್ಥಿಸಿಕೊಂಡರು. ಎಲ್ಲೆಡೆ ಮೋದಿ ಪರವಾದ ಅಲೆ ಇದೆ. ಲೋಕಸಭಾ ಚುನಾವಣೆ ವೇಳೆ ನಾನೂ ಸಹ ಗೊಂದಲದಲ್ಲೇ ಇದ್ದೆ. ಜನರ ಅಭಿಪ್ರಾಯ ಕೇಳಿದಾಗ ಪಕ್ಷೇತರರಾಗಿ ನಿಲ್ಲುವಂತೆ ಕೇಳಿಬಂದಿತ್ತು ಎಂದರು.
ನಂತರದ ದಿನಗಳಲ್ಲಿ ನಾನು ಎಲ್ಲೇ ಹೋದರೂ ಬಿಜೆಪಿ ಸೇರ್ಪಡೆಯಾಗಬೇಕೆಂಬ ಮಾತುಗಳು ಕೇಳಿಬರುತ್ತಿತ್ತು. ಮೋದಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುವಜನರು ಅವರ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ. ಈ ಕಾರಣಕ್ಕೆ ನಾನು ಬಿಜೆಪಿ ಸೇರ್ಪಡೆಗೊಳ್ಳಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ, ವೀಕ್ಷಕ ನಿಂಗರಾಜಗೌಡ, ಮುಖಂಡರಾದ ಶಶಿಕುಮಾರ್, ಅರವಿಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications