• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿಂಷಾ ನದಿಯಲ್ಲಿ ನೀರು ಹರಿದರೂ ಉಪಯೋಗವಿಲ್ಲ..!

|

ಮಂಡ್ಯ, ಜೂನ್ 10: ನಾಡಿನ ಜನರ ನಾಡಿ ಮಿಡಿತವಾಗಿರುವ ಜೀವನದಿಗಳ ರಕ್ಷಣೆ ಮಾಡದೆ ಹೋದರೆ ಏನಾಗುತ್ತದೆ ಎಂಬುದಕ್ಕೆ ಮಳವಳ್ಳಿ ಪಟ್ಟಣದಿಂದ 14ಕಿ.ಮೀ ದೂರದ ತೊರೆಕಾಡನಹಳ್ಳಿ ಬಳಿ ಹರಿಯುತ್ತಿರುವ ಶಿಂಷಾನದಿಯೇ ಸಾಕ್ಷಿ.

ಈ ನದಿಯಲ್ಲಿ ನೀರು ಹರಿಯುತ್ತಿದ್ದರೂ ಸುತ್ತಮುತ್ತಲ ತ್ಯಾಜ್ಯ ಸೇರಿದಂತೆ ಎಲ್ಲ ಕಲ್ಮಶ ವಸ್ತುಗಳು ನದಿಯನ್ನು ಸೇರುತ್ತಿರುವುದರಿಂದ ನೀರು ಕೊಳಚೆಯಾಗುತ್ತಿದೆ. ಹೀಗಾಗಿ ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಮನುಷ್ಯ ಮಾತ್ರವಲ್ಲದೆ ಸಕಲ ಜೀವರಾಶಿಗಳು ಸಂಕಷ್ಟ ಪಡುವಂತಾಗಿದೆ.

ಈಗಾಗಲೇ ಬಹಳಷ್ಟು ನದಿಗಳು ಬಿಸಿಲಿನ ಬೇಗೆಗೆ ಸಿಲುಕಿ ಬತ್ತಿ ಹೋಗಿವೆ. ಹೀಗಿರುವಾಗ ಶಿಂಷಾ ನದಿಯಲ್ಲಿ ನೀರು ಹರಿಯುತ್ತಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗದಿರುವುದು ಮಾತ್ರ ಬೇಸರದ ಸಂಗತಿ. ಹಾಗೆ ನೋಡಿದರೆ ತೊರೆಕಾಡನಹಳ್ಳಿ ಬಳಿ ಹರಿಯುವ ಶಿಂಷಾನದಿಗೆ ಕೆಆರ್ ಎಸ್ ಅಣೆಕಟ್ಟು ತುಂಬಿ ಹೊರಬರುವ ನೀರು ಮತ್ತು ಇಗ್ಗಲೂರು ಡ್ಯಾಂ ತುಂಬಿ ಹೊರಬರುವ ನೀರು ಸೇರುತ್ತವೆ. ಹೀಗಾಗಿ ಮಳೆಗಾಲದಲ್ಲಿ ತುಂಬಿ ಹರಿದರೆ, ಉಳಿದ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿರುತ್ತದೆ. ಆದರೆ ನದಿಯನ್ನು ಸ್ವಚ್ಛಗೊಳಿಸದ ಕಾರಣದಿಂದಾಗಿ ಸುತ್ತಮುತ್ತಲಿನ ತ್ಯಾಜ್ಯಗಳೆಲ್ಲವೂ ಇದಕ್ಕೆ ಬಂದು ಸೇರುತ್ತಿದೆ. ಇದರಿಂದ ಇರುವ ಅಲ್ಪ ನೀರು ಕೂಡ ಕಲುಷಿತವಾಗಿ ಹೋಗಿದೆ.

ಕರಾವಳಿಯಲ್ಲಿ ಡಾಲ್ಫಿನ್ ಗಳ ಸರಣಿ ಸಾವಿಗೆ ಕಾರಣವೇನು?

ಈ ನದಿಯ ಕಥೆ ಒಂದು ರೀತಿಯಾದರೆ, ನದಿಗೆ ನಿರ್ಮಿಸಿರುವ ಸೇತುವೆಯದು ಮತ್ತೊಂದು ರೀತಿಯ ಕಥೆ. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಬರುವ ಈ ಸೇತುವೆಯನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಸೇತುವೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದು, ಈಗ ಅದು ಶಿಥಿಲಾವಸ್ಥೆಗೆ ತಲುಪಿದೆ. ಸ್ವಲ್ಪ ಬಿರುಕು ಬಿಟ್ಟಿದ್ದು, ಅದನ್ನು ತಾತ್ಕಾಲಿಕವಾಗಿ ಸರಿಪಡಿಸಲಾಗಿದೆ. ಹೀಗಾಗಿ ಇದರ ಮೇಲೆಯೇ ವಾಹನಗಳು ಸಂಚರಿಸುತ್ತಿವೆ.

ಇದಲ್ಲದೆ, ಹಳೆಯ ಸೇತುವೆ ಬದಲು ಹೊಸ ಸೇತುವೆ ನಿರ್ಮಾಣ ಕಾರ್ಯ ಪಕ್ಕದಲ್ಲೆ ಬಿರುಸಿನಿಂದ ಸಾಗಿದೆ. ಈ ಸೇತುವೆ ಕೆಳಗೆ ನೀರು ಹಾದುಹೋಗಲು ಪೈಪ್‌ಗಳನ್ನು ಅಳವಡಿಸಲಾಗಿದ್ದು, ಆದರಿಂದ ನೀರು ಸರಿಯಾಗಿ ಹರಿಯಲಾಗದೆ ನಿಂತಲ್ಲೆ ನಿಂತು ಕಲುಷಿತಗೊಂಡಿದೆ. ತ್ಯಾಜ್ಯಗಳು ನೀರಿನಲ್ಲಿ ಕೊಳೆತು ಕ್ರಿಮಿಕೀಟಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಭೀತಿ ಜನರನ್ನು ಕಾಡುತ್ತಿದೆ.

ಪ್ರಾಣಿ ತ್ಯಾಜ್ಯ ಸಂಸ್ಕರಣೆಗೆ ಮೈಸೂರು ಪಾಲಿಕೆ ಚಿಂತನೆ?

ಈ ಭಾಗ ಬಹುತೇಕ ಕಾಡು ಪ್ರದೇಶವಾಗಿರುವುದರಿಂದ ಇಲ್ಲಿ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತವೆ. ಇದಲ್ಲದೆ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳು ಇದನ್ನು ಅವಲಂಬಿಸಿವೆ. ಆದರೆ ನೀರು ಕಲುಷಿತಗೊಂಡಿರುವುದರಿಂದ ಕಾಡು ಪ್ರಾಣಿಗಳ ಜೀವಕ್ಕೆ ಕಂಟಕವಾಗುವ ಭಯವೂ ಕಾಡುತ್ತಿದೆ.

ಮೌಂಟ್ ಎವರೆಸ್ಟ್ ಸ್ವಚ್ಛತಾ ಅಭಿಯಾನ, 3,000 ಕೆಜಿ ತ್ಯಾಜ್ಯ ಸಂಗ್ರಹ

ಇನ್ನು ತೊರೆಕಾಡನಹಳ್ಳಿ, ಪುರದದೊಡ್ಡಿ, ಹಲಗೂರು ಕಡೆಗಳಲ್ಲಿ ಸಾರ್ವಜನಿಕರು ಈ ನದಿಯಲ್ಲಿ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಹಾಗೂ ದನ-ಕರುಗಳಿಗೆ ಕುಡಿಯಲು ಮುಂತಾದ ದಿನಚರಿ ಕೆಲಸಗಳಿಗೆ ಈ ನೀರು ಉಪಯೋಗವಾಗುತ್ತಿದ್ದು, ಈಗ ಕಲುಷಿತವಾಗಿರುವುದರಿಂದ ಯಾರೂ ಬಳಕೆ ಮಾಡುತ್ತಿಲ್ಲ. ಇನ್ನಾದರೂ ಇಂತಹ ದುಸ್ಥಿತಿಯಲ್ಲಿ ಕಲುಷಿತಗೊಂಡಿರುವ ಶಿಂಷಾ ನದಿಯ ಶುದ್ಧೀಕರಣಕ್ಕೆ ಮುಂದಾಗಬೇಕಾಗಿದೆ.

English summary
Water can not be used in the river Shimsha!The wastes of the surrounding joining the river and polluting it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X